ಸುಂಟಿಕೊಪ್ಪ, ಡಿ. 23: ಇಲ್ಲಿನ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಮನೆ ಮನೆಗಳಿಗೆ ತೆರಳಿ 150 ರೈತರಿಗೆ ಒಂದು ಕುಟುಂಬಕ್ಕೆ ಎರಡು ತೆಂಗಿನ ಸಸಿಗಳಂತೆ 75 ಕುಟುಂಬಗಳಿಗೆ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರ ಅನುದಾನದಲ್ಲಿ ವಿತರಿಸಲಾಯಿತು.
ನಂತರ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಪ್ರತಿಯೊಂದು ಬಡ ಕುಟುಂಬಗಳಿಗೆ ಹಂತ ಹಂತವಾಗಿ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ನೀಡಲಾಗುವುದು. ಇದರ ಬಗ್ಗೆ ಪ್ರತೀ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಫಲಾನುಭವಿಗಳು ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡು ನೆಮ್ಮದಿಯ ಜೀವನ ನಡೆಸಿ ಇದಕ್ಕೆ ತಾವು ರಾಜಕೀಯ ರಹಿತ ಸಹಾಕಾರ ನೀಡುವುದಾಗಿ ಹೇಳಿದರು.
ಕೇಂದ್ರ ಸರಕಾರ ಕಡುಬಡವರಿಗೆ ಮನೆ ನಿರ್ಮಾಣಕ್ಕೆ ಶೌಚಾಲಯಕ್ಕೆ ರೂ. 1 ಲಕ್ಷದ 50 ಸಾವಿರ ಗ್ರಾಮ ಪಂಚಾಯಿತಿ ಮೂಲಕ ಉಚಿತವಾಗಿ ನೀಡುತ್ತಿದ್ದು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು. ಈ ಸಂದರ್ಭ ಕೆದಕಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮಯ್ಯ, ಕೆದಕಲ್ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ರಮೇಶ್ ರೈ, ಚೆಟ್ಟಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಉಪಾಧ್ಯಕ್ಷ ಪಂಚಾಯಿತಿ ಸದಸ್ಯ ಎನ್.ಎಸ್. ರವಿ, ಹಾಲೇರಿ ಗ್ರಾಮದ ಮುಲುವೇರ ಬಿದ್ದಪ್ಪ ಹಾಗೂ ಗ್ರಾಮಸ್ಥರು ಹಾಜರಿದ್ದರು.