ಸೋಮವಾರಪೇಟೆ, ಡಿ. 22: ಇಲ್ಲಿನ ಕೊಡವ ಸಮಾಜದ ಆಶ್ರಯದಲ್ಲಿ ತಾ. 29 ರಂದು ಪೂರ್ವಾಹ್ನ 10.30ಕ್ಕೆ ಸ್ಥಳೀಯ ಕೊಡವ ಸಮಾಜ ಸಭಾಂಗಣದಲ್ಲಿ ಪುತ್ತರಿ ಊರೊರ್ಮೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಾಜದ ಅಧ್ಯಕ್ಷ ಅಭಿಮನ್ಯುಕುಮಾರ್ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಅವರೆಮಾದಂಡ ಕೆ. ಮೊಣ್ಣಪ್ಪ ಆಗಮಿಸಲಿದ್ದಾರೆ. ಶಿರಂಗಳ್ಳಿಯ ವಿವೇಕಾನಂದ ಯುವಕ ಸಂಘದಿಂದ ಬೊಳಕಾಟ್, ಕೋಲಾಟ್, ಮೂವತ್ತೊಕ್ಲು ಪೊಮ್ಮಕ್ಕಡ ಕೂಟದಿಂದ ಉಮ್ಮತಾಟ್ ನಡೆಯಲಿದ್ದು, ಊರೊರ್ಮೆ ಅಂಗವಾಗಿ ಸಮಾಜದವರಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ. ಇದರೊಂದಿಗೆ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಅಭಿಮನ್ಯುಕುಮಾರ್ ತಿಳಿಸಿದ್ದಾರೆ.