ರಾಂಚಿ, ಡಿ. 23: ಜಾರ್ಖಂಡ್ ವಿಧಾನಸಭೆಗೆ ನಡೆದ ಐದು ಹಂತಗಳ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಧಿಕಾರದ ಗದ್ದುಗೆ ಏರಲು ಸಿದ್ಧತೆ ನಡೆಸಿವೆ. ಜಾರ್ಖಂಡ್ ನ 81 ಕ್ಷೇತ್ರಗಳ ಪೈಕಿ ಕಾಂಗ್ರೆಸ್, ಜೆಎಂಎ ಮೈತ್ರಿಕೂಟ 45 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಆಡಳಿತರೂಢ ಬಿಜೆಪಿ ಮೈತ್ರಿಕೂಟ 26 ಸ್ಥಾನಗಳನ್ನು ಪಡೆಯುವ ಮೂಲಕ ತೀವ್ರ ಮುಖಭಂಗಕ್ಕೆ ಈಡಾಗಿದೆ. ಉಳಿದಂತೆ ಸರ್ಕಾರ ರಚನೆಯಲ್ಲಿ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದ್ದ ಎಜೆಎಸ್ ಯು ಪಕ್ಷ 3, ಜೆವಿಎಂ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಇತರರು ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. 81 ಸದಸ್ಯ ಬಲದ ಜಾರ್ಖಂಡ್ ನಲ್ಲಿ ಸರ್ಕಾರ ರಚನೆಗೆ 41 ಸದಸ್ಯ ಬಲದ ಅಗತ್ಯವಿದೆ. ಹೀಗಾಗಿ ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟದ ಮುಖ್ಯಮಂತ್ರಿಯಾಗಿ ಜೆಎಂಎಂ ಮುಖ್ಯಸ್ಥ ಹೇಮಂತ್ ಸೋರೆನ್ ಅವರು ಜಾರ್ಖಂಡ್ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಭರ್ಜರಿ ಸಿದ್ಥತೆ ನಡೆಸಿದ್ದಾರೆ.
ಅಧಿಕಾರ ಕಳೆದುಕೊಳ್ಳುತ್ತಿರುವ ಬಿಜೆಪಿ
ರಾಂಚಿ, ಡಿ. 23: ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ ಭಾರತೀಯ ಜನತಾ ಪಕ್ಷವನ್ನು ದಿಗ್ಬ್ರಮೆಗೊಳಿಸಿದೆ. ಒಂದು ವರ್ಷದಲ್ಲಿ ಐದನೇ ರಾಜ್ಯವನ್ನು ಕಳೆದುಕೊಂಡು ಬಿಜೆಪಿ ನಾಯಕರು ಚಿಂತೆಗೀಡಾಗಿದ್ದಾರೆ. ಐದು ವರ್ಷಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ ಬಿಜೆಪಿ ನಾಯಕರು, ಕೇವಲ ವರ್ಷದಲ್ಲಿ ಕಾಂಗ್ರೆಸ್ ಪಕ್ಷಕ್ಕೆ, ಅದರ ಮೈತ್ರಿಕೂಟಕ್ಕೆ ಐದು ರಾಜ್ಯಗಳನ್ನು ಸಮರ್ಪಿಸಿದ್ದಾರೆ. ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್ ಘಡ, ಮಹಾರಾಷ್ಟ್ರದಲ್ಲಿ ಅಧಿಕಾರ ಕಳೆದು ಕೊಂಡಿರುವ ಬಿಜೆಪಿ, ಈಗ ಜಾರ್ಖಂಡ್‍ನಲ್ಲಿ ಅಧಿಕಾರ ಕಳೆದುಕೊಂಡಿದೆ.
ಬೆಂಗಳೂರಿನಲ್ಲಿ ಸ್ವಯಂ ಪ್ರೇರಿತ ಬಂದ್
ಬೆಂಗಳೂರು, ಡಿ. 23: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‍ಆರ್ ಸಿ ವಿರೋಧಿಸಿ ರಾಜಧಾನಿ ಬೆಂಗಳೂರಿನಲ್ಲಿ ಸ್ವಯಂ ಪ್ರೇರಿತ ಅಂಗಡಿ, ಮಳಿಗೆಗಳನ್ನು ಬಂದ್ ಮಾಡಿ, ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದಲ್ಲಿಂದು ಶಿವಾಜಿನಗರ, ಆರ್.ಟಿ.ನಗರ, ವಸಂತನಗರ, ಚಾಮರಾಜಪೇಟೆ, ಗೌರಿಪಾಳ್ಯ, ಗುರಪ್ಪನಪಾಳ್ಯ, ಥಣಿಸಂದ್ರ ಸೇರಿದಂತೆ ಹಲವು ಕಡೆ ಮುಸ್ಲಿಮರು ಸ್ವಯಂಪ್ರೇರಿತವಾಗಿ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಬಳಿಕ ಇಲ್ಲಿನ ಮಿಲ್ಲರ್ಸ್ ರಸ್ತೆಯ ಖುದ್ದೂಸ್ ಸಾಹೇಬ್ ಮೈದಾನದಲ್ಲಿ ಅಖಿಲ ಕರ್ನಾಟಕ ಮುಸ್ಲಿಂ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ನೇತೃತ್ವದಲ್ಲಿ ಆಯೋಜಿಸಿದ್ದ, ನಾವು ಭಾರತದ ಜನರು ಸಿಎಎ ಮತ್ತು ಎನ್ ಆರ್ ಸಿ ಅನ್ನು ತಿರಸ್ಕರಿಸಿ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ಇದರಿಂದ ವಸಂತನಗರ, ಕಂಟೋನ್ಮೆಂಟ್, ಜೆ.ಸಿ.ರಸ್ತೆ, ಮೇಕ್ರಿ ವೃತ್ತ ಸೇರಿದಂತೆ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿತ್ತು.
ಕಾಸರಗೋಡು ಶಾಲೆಗೆ ಸ್ವರ್ಣಕಮಲ
ಬೆಂಗಳೂರು, ಡಿ. 23: ಕನ್ನಡ ಚಲನಚಿತ್ರರಂಗದ ಖ್ಯಾತಿ ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಪ್ರಜ್ವಲಿಸುತ್ತಿದ್ದು, ಖ್ಯಾತ ನಿರ್ಮಾಪಕ, ನಿರ್ದೇಶಕ ರಿಷಬ್ ಶೆಟ್ಟಿಯವರ ‘ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿ ಲಭಿಸಿದೆ. ದೆಹಲಿಯಲ್ಲಿಂದು ನಡೆದ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ರಿಷಬ್ ಶೆಟ್ಟಿಯವರಿಗೆ ‘ಸ್ವರ್ಣ ಕಮಲ’ ನೀಡಿ ಗೌರವಿಸಿದರು. ಕಳೆದ ವರ್ಷ ಬಿಡುಗಡೆಯಾಗಿದ್ದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಸೂಪರ್ ಹಿಟ್‍ಆಗಿತ್ತು ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಶಾಲೆಗಳನ್ನು ಉಳಿಸುವ ಸಕಾರಾತ್ಮಕ ಸಂದೇಶ ಸಾರುವ ಚಿತ್ರಕ್ಕೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ
ನವದೆಹಲಿ, ಡಿ. 23: ದೆಹಲಿಯ ವಿಜ್ಞಾನ ಭವನದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಸೋಮವಾರ 2019 ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಾಲಿನ ಅತ್ಯುತ್ತಮ ನಟ ಪ್ರಶಸ್ತಿಯನ್ನು ಇಬ್ಬರು ನಟರು ಹಂಚಿಕೊಂಡಿದ್ದಾರೆ. ಉರಿ- ದಿ ಸರ್ಜಿಕಲ್ ಸ್ಟ್ರೈಕ್ ನಟ ವಿಕ್ಕಿ ಕೌಶಲ್ ಮತ್ತು ಅಂದಾಧನ್ ಸಿನಿಮಾ ನಾಯಕ ನಟ ಆಯುಷ್ಮಾನ್ ಖುರಾನಾ ಅವರಿಗೆ ವೆಂಕಯ್ಯ ನಾಯ್ಡು ಅವರು ಅತ್ಯುತ್ತಮ ನಟ ಪ್ರಶಸ್ತಿ ಪ್ರದಾನ ಮಾಡಿದರು. ಮಹಾನಟಿ ಸಿನಿಮಾದಲ್ಲಿನ ಅಭಿನಯಕ್ಕೆ ಟಾಲಿವುಡ್ ನ ಕೀರ್ತಿ ಸುರೇಶ್ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದಿದ್ದಾರೆ. ಸಾಮಾಜಿಕ ಕಳಕಳಿಯ ಸಿನಿಮಾಗಳ ಮೂಲಕ ಮಿಂಚುತ್ತಿರುವ ಅಕ್ಷಯ್ ಕುಮಾರ್, ಪ್ಯಾಡ್ ಮ್ಯಾನ್ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಸುರೇಶ್ ಸಿಕ್ರಿ ‘ಬದಾಯಿ ಹೋ’ ಸಿನಿಮಾದಲ್ಲಿನ ನಟನೆಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸ್ವೀಕರಿಸಿದರು. ಆದರೆ, ಅನಾರೋಗ್ಯದ ಕಾರಣದಿಂದ ವೃತ್ತಿಜೀವನದ ಅತ್ಯುತ್ತಮ ನಟನೆಗಾಗಿ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ಯಾಗಿರುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದ ಬಿಗ್ ಬಿ ಅಮಿತಾಬ್ ಬಚ್ಚನ್, ಪ್ರಶಸ್ತಿ ಸ್ವೀಕರಿಸಲು ಹಾಜರಾಗಲಿಲ್ಲ.
ಅತ್ಯಾಚಾರಿಗಳ ಮರು ಮರಣೋತ್ತರ ಪರೀಕ್ಷೆ
ಹೈದರಾಬಾದ್, ಡಿ. 23: ದೆಹಲಿಯ ಏಮ್ಸ್ ಆಸ್ಪತ್ರೆಯ ಮೂವರು ವಿಧಿವಿಜ್ಞಾನ ವೈದ್ಯರ ತಂಡ ಸೋಮವಾರ ಹೈದರಾಬಾದ್ ನ ಪಶುವೈದ್ಯೆ ದಿಶಾ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸ್ ಎನ್‍ಕೌಂಟರ್‍ಗೆ ಬಲಿಯಾದ ನಾಲ್ಕು ಆರೋಪಿಗಳ ಮೃತದೇಹದ ಮರು ಮರಣೋತ್ತರ ಪರೀಕ್ಷೆ ನಡೆಸಿತು. ತೆಲಂಗಾಣ ಹೈಕೋರ್ಟ್ ಆದೇಶದ ಮೇರೆಗೆ ಡಾ.ಸುದೀರ್ ಗುಪ್ತ ನೇತೃತ್ವದ ತಂಡ, ಆರೋಪಿಗಳ ಸಂಬಂಧಿಕರ ಉಪಸ್ಥಿತಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿತು. ಸಿಕಂದಾರಾಬಾದ್ ನ ಗಾಂಧಿ ಆಸ್ಪತ್ರೆಯಲ್ಲಿ ನಡೆದ ಈ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಮುದ್ರಣ ಮಾಡಲಾಯಿತು. ನಂತರ ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು ಎಂದು ಗಾಂಧಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.