ಕಣಿವೆ, ಡಿ. 23 : ಕಾಡಾನೆಗಳ ಹಾವಳಿ ಮಿತಿ ಮೀರಿರುವ ಬಾಣಾವರ ವ್ಯಾಪ್ತಿಯ ಕಾಡಂಚಿನ ಗ್ರಾಮವೊಂದರ ಹನ್ನೆರಡರ ಪ್ರಾಯದ ಬಾಲಕನೊಬ್ಬ ಪವಾಡ ರೀತಿಯಲ್ಲಿ ಪಾರಾದ ಘಟನೆ ಮೊನ್ನೆಯಷ್ಟೇ ನಡೆದಿದೆ. ಆಲೂರು ಸಿದ್ದಾಪುರ ನಿವಾಸಿ ರವಿಕುಮಾರ್ ಎಂಬವರ ಪುತ್ರ ಹನ್ನೆರಡು ವರ್ಷದ ಬಾಲಕ ಉದಯಕುಮಾರ್ ಎಂಬಾತನೇ ಅದೃಷ್ಟವಂತ ಸಾಹಸಿ ಬಾಲಕ ಎಂದು ಈ ಘಟನೆಯ ಬಳಿಕ ಹೇಳಬಹುದೇನೋ...! ಆಲೂರು ಸಿದ್ದಾಪುರ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕ ಕಳೆದ ಶುಕ್ರವಾರ ಬೆಳಗ್ಗೆ ತನ್ನ ತಂದೆ ರವಿಕುಮಾರ್ ಜೊತೆ ದ್ವಿಚಕ್ರ ವಾಹನದಲ್ಲಿ ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ ತೆರಳಿ ಸಂಜೆ ಮನೆಗೆ ವಾಪಸ್ಸಾಗುತ್ತಿದ್ದರು. ಹೀಗೆ ಬಾಣಾವರಕ್ಕಾಗಿ ಮನೆಗೆ ವಾಪಸ್ಸಾಗುವ ವೇಳೆ ಸಂಗಯ್ಯನಪುರದ ಬಳಿಯ ಕಾಡಂಚಿನ ದಾರಿ ಮಧ್ಯೆ ಕಾಡಾನೆಯೊಂದು ದಿಢೀರನೆ ಈ ಅಪ್ಪ ಮಗನಿಗೆ ಎದುರಾಗಿದೆ. ಕಾಡಾನೆಯನ್ನು ಕಂಡೊಡನೆ ದಿಗ್ಬ್ರಾಂತರಾಗಿ ಅರೆಕ್ಷಣ ಕಣ್ಣುಗಳೇ ಮಂಜಾದಂತಹ ಅನುಭವವಾಗಿದೆ.ಅತ್ತ ಗಾಬರಿಗೊಂಡ ಕಾಡಾನೆ ಬೈಕ್ ಮೇಲೆ ದಾಳಿ ನಡೆಸಲು ಮುಂದಾಗಿ ಒಮ್ಮೆ ಕಾಲಿನಲ್ಲಿ ಒದ್ದೊಡನೆ ರವಿಕುಮಾರ್ ಪೊದೆಯೊಳಗೆ ಬಿದ್ದಿದ್ದಾರೆ. ಇನ್ನು ಬೈಕ್ ಹಿಂಬದಿಯಲ್ಲಿದ್ದ ಮಗ ಉದಯಕುಮಾರ್ ಬೈಕ್ ಸಮೀಪವೇ ಬಿದ್ದಿದ್ದಾನೆ. ನಂತರ ನಡೆದದ್ದನ್ನು ಬಾಲಕ ಉದಯ್ ಹೇಳುವಾಗ ಕೇಳುವವರ ಕಣ್ಣಾಲಿಗೆಗಳು ತೇವವಾಗುತ್ತವೆ. ನಾನು ಬೈಕ್ ನಲ್ಲಿ ಅಪ್ಪನ ಜೊತೆ ಮನೆಗೆ ಹೋಗುವಾಗ ಕಾಡಾನೆ ಬೈಕ್‍ಗೆ ಒದೆಯಿತು. ಆಗ ಅಪ್ಪ ದೂರಕ್ಕೆ ಹೋಗಿ ಬಿದ್ದರು. ನಾನು ಬೈಕ್ ಪಕ್ಕವೇ ಬಿದ್ದು ನೆಲದಲ್ಲಿ ಮಲಗಿದ್ದೆ. ಕಾಡಾನೆ ನನ್ನನ್ನು ತುಳಿದು ಸಾಯಿಸಲು ಕಾಲು ಎತ್ತುವುದನ್ನು ನಾನು ನೋಡಿಯೂ ಕೂಡ ಸುಮ್ಮನಾದೆ. ಜೋರಾಗಿ ಕಿರುಚಲು ಗಂಟಲೇ ಬರಲಿಲ್ಲ. ಅತ್ತ ಕಡೆ ನನ್ನನ್ನು ತುಳಿಯಲು ನಿಂತ

(ಮೊದಲ ಪುಟದಿಂದ) ಕಾಡಾನೆಯನ್ನು ನೋಡಿದ ನನ್ನ ಅಪ್ಪ ಕಿರುಚಿದರು. ಆದರೆ, ಇದೇ ವೇಳೆ ನಾವು ಬಂದ ದಾರಿಯಲ್ಲೇ ಒಂದು ಕಾರು ಬಂತು. ಆ ಕಾರಿನ ಲೈಟ್ ಕಾಡಾನೆಯ ಕಣ್ಣಿಗೆ ಬಿದ್ದೊಡನೆ ಆ ಆನೆ ತುಳಿಯಲು ಎತ್ತಿದ ಕಾಲನ್ನು ಕೆಳಗಿಳಿಸಿ ಬೇರೆ ಕಡೆ ಹೋಯಿತು. ನನ್ನ ಜೀವ ವನ್ನು ಉಳಿಸಿದ ಆ ಕಾರು, ಆ ಕಾರನ್ನು ಓಡಿಸಿಕೊಂಡು ಬಂದ ಆ ಅಣ್ಣ ನನ್ನ ಪಾಲಿಗೆ ದೇವರೇ ಬಂದ ಹಾಗೆ ಅನಿಸಿತು ಎಂದು ಆ ಬಾಲಕ ಹೇಳುತ್ತಾನೆ. ಬಳಿಕ ಸಾವಿನ ದವಡೆಯಿಂದ ಪಾರಾದ ಆ ಭಯ, ದುಗುಡ, ನೋವಿನ ಒಳಗೂ ಬದುಕುಳಿದ ಸಂತಸದಲ್ಲಿ ಮಗನನ್ನು ಕರೆದುಕೊಂಡು ಮನೆಯನ್ನು ತಲುಪಿದ ರವಿಕುಮಾರ್ ಅವರಿಗೆ ನಂಜನಗೂಡಿನ ನಂಜುಂಡೇಶ್ವರನೇ ಪುನರ್ ಜನ್ಮವನ್ನು ಕೊಟ್ಟಂತೆ ಅನಿಸಿದೆ. ಅಷ್ಟೇ ಅಲ್ಲ, ಸೂರ್ಯಾಸ್ತವಾಗಿ ಕತ್ತಲು ಸರಿಯುತ್ತಿದ್ದಾಗ ನಡೆದ ಘಟನೆ ರವಿಕುಮಾರ್ ಕುಟುಂಬದ ಬದುಕಲ್ಲಿ ಹೊಸ ಬೆಳಕಿನ ಉದಯವೇ ಆದಂತಹ ಆನಂದವಾಗಿದೆ.

ಕಾಡಾನೆಗೆ ನಾನು ಸಿಲುಕಿ ಸತ್ತರೂ ಪರವಾಗಿಲ್ಲ. ನನ್ನ ಮಗನನ್ನು ಕೈಯಾರೆ ಕಳೆದುಕೊಂಡು ಬಿಡುತ್ತಿದ್ದೆನಲ್ಲಾ ಎಂದು ರವಿಕುಮಾರ್ ರಾತ್ರಿಯಿಡೀ ನಿದ್ರೆ ಮಾಡಿಲ್ಲ. ಇನ್ನು ಬಾಲಕ ಮರುದಿನ ಶಾಲೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ರಾಮಚಂದ್ರ ಮೂರ್ತಿ, ಶಿಕ್ಷಕ ಕುಮಾರ್ ಮೊದಲಾದವರು ಈ ಬಾಲಕ ಪವಾಡದಿಂದ ಪಾರಾಗಿ ಬಂದುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಡಾನೆಯಿಂದ ಬದುಕುಳಿದು ಬಂದ ನೀನು ಮುಂದೊಂದು ದಿನ ಈ ಸಮಾಜದ ಆದರ್ಶ ವ್ಯಕ್ತಿಯಾಗುತ್ತೀಯಾ. ನಿನ್ನ ಧೈರ್ಯ ಮತ್ತು ಸಾಹಸ ಇತರೇ ಮಕ್ಕಳಿಗೂ ಸ್ಪೂರ್ತಿಯಾಗಲೀ ಎಂದು ಹರಸಿದ್ದಾರೆ.

- ಕೆ.ಎಸ್. ಮೂರ್ತಿ