ಗೋಣಿಕೊಪ್ಪಲು, ಡಿ. 23: ಪಾಲಿಬೆಟ್ಟದ ಕೆನಲ್‍ಕ್ಲಬ್,ಕರ್ನಾಟಕ ಪಶು ವೈದ್ಯರ ಸಂಘ,ಕೃಷಿ ವಿಜ್ಞಾನ ಕೇಂದ್ರ ಜಂಟಿ ಆಶ್ರಯದಲ್ಲಿ ತಾ. 24ರಂದು (ಇಂದು) ಗೋಣಿಕೊಪ್ಪಲುವಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ 14ನೇ ವರ್ಷದ ಶ್ವಾನ ಪ್ರದರ್ಶನ ನಡೆಯಲಿದೆ.20ಕ್ಕೂ ಹೆಚ್ಚಿನ ವಿವಿಧ ತಳಿಯ 200ಕ್ಕೂ ಅಧಿಕ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮುಂಜಾನೆ 9 ಗಂಟೆಯಿಂದ 11 ಗಂಟೆಯವರೆಗೆ ಉತ್ತಮ ಶ್ವಾನಗಳ ಆಯ್ಕೆ ನಡೆಯಲಿದೆ.11ರಿಂದ 1.30ರವರೆಗೆ ಬಹುಮಾನಕ್ಕೆ ಅರ್ಹರಾಗುವ ಶ್ವಾನಗಳ ಆಯ್ಕೆ ನಡೆಯಲಿದೆ. ಬೆಂಗಳೂರಿನ ವೆಟ್‍ಫಾರ್ಮದವರು ಪ್ರದರ್ಶನ ನೀಡಲಿರುವ ಶ್ವಾನಗಳಿಗೆ ಉಚಿತವಾಗಿ ಹುಚ್ಚುನಾಯಿ ರೋಗ ನಿರೋಧಕ ಲಸಿಕೆ ನೀಡಲಿದ್ದಾರೆ. ಪರ್ಫೆಕ್ಟ್ ಕಂಪೆನಿಯನ್ ಗ್ರೂಪ್ ಪ್ರದರ್ಶನದ ರಿಂಗ್ ಪ್ರಾಯೋಜಕತ್ವ ನೀಡಲಿದ್ದು, ಪೊಲೀಸ್ ಶ್ವಾನ ದಳ ಮಡಿಕೇರಿ ಇವರಿಂದ ಅಪರಾದ ಪತ್ತೆ ಹಚ್ಚುವ ಪ್ರದರ್ಶನ ನಡೆಯಲಿದೆ.

ವೀರಾಜಪೇಟೆಯ ಕುಲ್ಲಚಂಡ ಪೂಣಚ್ಚ ಅವರು ತಮ್ಮ ಮಗಳಾದ ದಿ.ಡಾ.ಕೆ.ಪಿ.ದೇಚಮ್ಮ ಸ್ಮರಣಾರ್ಥ ಆಯ್ಕೆಯಾಗುವ ಮೊದಲ ಉತ್ತಮ 5 ಶ್ವಾನಗಳಿಗೆ ಬಹುಮಾನ ನೀಡಿಲಿದ್ದಾರೆ.ಕೊಡಗು ಕೆನಲ್ ಕ್ಲಬ್‍ನ ಅಧ್ಯಕ್ಷರಾದ ಕೆ.ಎಂ. ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕುದುರೆ ಮುಖ ರಾಷ್ಟ್ರೀಯ ಅರಣ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಬಸವರಾಜು ಶ್ವಾನ ಪ್ರದರ್ಶನ ಉದ್ಘಾಟಿಸಲಿದ್ದು ಗೋಣಿಕೊಪ್ಪ ತಿರುಮಲ ಡ್ರೈವಿಂಗ್ ಶಾಲೆಯ ಕುಪ್ಪಂಡ ಅಶೋಕ್ ಅಪ್ಪಣ್ಣ ಪ್ರದರ್ಶನ ರಿಂಗ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ಪಶು ವೈದ್ಯರ ಸಂಘ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ.ಕೆ.ಪಿ.ಅಯ್ಯಪ್ಪ,ಕರ್ನಾಟಕ ಪಶು ವೈದ್ಯಕೀಯ ಪರಿಷತ್ ಅಧ್ಯಕ್ಷರಾದ ಡಾ. ಆರ್.ನರೇಂದ್ರ, ಪಶುಪಾಲನ ಉಪ ನಿರ್ದೇಶಕರಾದ ಡಾ.ಎ.ಬಿ. ತಮ್ಮಯ್ಯ, ಗೋಣಿಕೊಪ್ಪ ಕೆವಿಕೆಯ ಮುಖ್ಯಸ್ಥರಾದ ಡಾ.ಸಜು ಜಾರ್ಜ್, ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಎನ್.ಎನ್.ರಾಮರೆಡ್ಡಿ, ಕೊಡಗು ಕೆನಲ್ ಕ್ಲಬ್‍ನ ಕಾರ್ಯದರ್ಶಿ ಡಾ.ಎ.ಎಸ್.ಶಾಂತೇಶ್, ಕರ್ನಾಟಕ ಪಶು ವೈದ್ಯ ಅಸೋಸಿಯೇಷನ್ ಖಜಾಂಚಿ ಡಾ.ಭವಿಷ್ಯ ಕುಮಾರ್ ಜಿ.ಜಿ., ಕಾರ್ಯದರ್ಶಿ ಡಾ.ಬಿ.ಜಿ. ಗಿರೀಶ್ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.

-ಹೆಚ್.ಕೆ.ಜೆ.