ವೀರಾಜಪೇಟೆ, ಡಿ.23: ಇತ್ತೀಚಿನ ದಿನಗಳಲ್ಲಿ ವಿಶೇಷ ಚೇತನರು ತಮ್ಮ ನ್ಯೂನ್ಯತೆಗಳನ್ನು ಮೆಟ್ಟಿ ನಿಂತು ಸಾಧನೆಗಳ ಹಾದಿಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ ವಿಶೇಷ ಚೇತನ ಮಕ್ಕಳು ಇತರ ಮಕ್ಕಳಿಗಿಂತ ಕಡಿಮೆ ಇಲ್ಲ. ವಿಶೇಷ ಚೇತನ ಮಕ್ಕಳ ಪ್ರತಿಭೆಗೆ ಪೋಷಕರು ಪ್ರೋತ್ಸಾಹಿಸಿ ಸಹಕಾರ ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀ&divlusmn; ಎನ್.ವಿ.ಕೋನಪ್ಪ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಅಭಿಯಾನದ ಸಹಯೋಗದಲ್ಲಿ ತಾಲೂಕಿನ ವಿಶೇಷ ಚೇತನ ಮಕ್ಕಳಿಗಾಗಿ ವೀರಾಜಪೇಟೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಚೇತನರ ಜಿಲ್ಲಾಮಟ್ಟದ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ಮಾನಸಿಕ ಹಾಗೂ ದೈಹಿಕ ನ್ಯೂನ್ಯತೆಗಳು ಸಾಧನೆಗೆ ಅಡ್ಡಿಯಲ್ಲ ಎನ್ನುವುದಕ್ಕೆ ವಿಶೇಷ ಚೇತನ ಮಕ್ಕಳ ಸಾಧನೆಗಳೇ ಸಾಕ್ಷಿ. ನ್ಯೂನ್ಯತೆ ಮೀರಿ ಅದನ್ನೇ ಶಕ್ತಿಯಾಗಿಸಿ ಮುನ್ನಡೆದು ನಾವು ಯಾರಿಗೂ ಕಡಿಮೆ ಇಲ್ಲಾ ಎನ್ನುವುದನ್ನು ಜಗತ್ತಿಗೆ ಸಾಧಿಸಿ ತೋರಿಸಬೇಕು. ವಿಶೇಷ ಚೇತನ ಮಕ್ಕಳ ಬಗ್ಗೆ ಯಾರೂ ನಿರ್ಲಕ್ಷ್ಯತೆ ತೋರದೆ ಸಮಾಜದಲ್ಲಿ ಗೌರವ ನೀಡುವಂತಾಗಬೇಕು ಎಂದರಲ್ಲದೆ ವಿಶೇಷ ಚೇತನ ಮಕ್ಕಳಿಗಾಗಿ ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ಸಹಕಾರ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್, ವಿಶೇಷಚೇತನರು ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಧನೆ ಮಾಡುತ್ತಿರುವುದು ಅಚ್ಚರಿಯ ಸಂಗತಿ. ಕ್ರೀಡೆಯಲ್ಲಿ ಈ ರೀತಿ ಅತಿಯಾದ ಆಸಕ್ತಿ ಹೊಂದಿದವರಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡಬೇಕಿದೆ. ವಿಶೇಷಚೇತನರಲ್ಲಿ ಸುಪ್ತ ಪ್ರತಿಭೆ ಅಡಗಿದ್ದು, ಇಂತಹ ಕ್ರೀಡಾಕೂಟಗಳು ಅವರಲ್ಲಿ ಸ್ಫೂರ್ತಿ ಹಾಗೂ ಚೇತನ ತುಂಬುತ್ತದೆ. ಸರಕಾರ ವಿಶೇಷಚೇತನರಿಗಾಗಿ ಅನೇಕ ಸೌಲಭ್ಯ ನೀಡಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಮಾತನಾಡಿ ವಿಶೇಷ ಚೇತನರಿಗೆ ಅನುಕಂಪ ಬೇಡ, ಪ್ರೀತಿ ತೋರಿಸಿ ಬೆಳೆಸುವ ಕಾರ್ಯವಾಗಬೇಕು. ಇವರನ್ನು ನೋಡಿಕೊಳ್ಳುವ ಶಿಕ್ಷಕ- ಪಾಲಕರ ಶ್ರಮ ಮಹತ್ವದ್ದು. ಈ ವಿಚಾರದಲ್ಲಿ ಸರಕಾರ ಮಾತ್ರ ಸೌಲಭ್ಯಗಳನ್ನು ನೀಡಿದರೆ ಸಾಲದು, ಸರಕಾರೇತರ ಸಂಸ್ಥೆಗಳು ಮುಂದೆ ಬಂದು ಕಾರ್ಯನಿರ್ವಹಿಸುವಂತಾಗಬೇಕು ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್.ಮಚ್ಚಾಡೋ ಮಾತನಾಡಿ ಸರಕಾರದ ಕಾಯಿದೆ ಪ್ರಕಾರ ತಾಲೂಕಿನ ವಿಶೇಷ ಚೇತನ ಮಕ್ಕಳು ಹಿಂದೆ ಉಳಿಯದಂತೆ ಸರಕಾರದಿಂದ ಬಿಡುಗಡೆಗೊಂಡಿರುವ ಅನುದಾನವನ್ನು ಸರಿಯಾದ ರೀತಿಯಲ್ಲಿ ಅವರ ಯೋಗಕ್ಷೇಮಕ್ಕೆ ನೀಡಲಾಗಿದ್ದು ಇತರ ಮಕ್ಕಳಂತೆ ಅವರು ಕೂಡ ಕಲಿತು ಮುಂದೆ ಬರಬೇಕು ಎಂದರು. ವಿವಿಧ ರೀತಿಯ ಕ್ರೀಡಾಕೂಟದಲ್ಲಿ ಭಾಗವಹಿಸುವಂತಾಗಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ವಿಶೇಷ ಚೇತನ ಮಕ್ಕಳ ಯೋಗಕ್ಷೇಮಕ್ಕಾಗಿ ಸರಕಾರದಿಂದ ಬರುವ ಅನುದಾನವು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ತಲುಪುವಂತಾಗಬೇಕು. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುತ್ತಿರುವ ಶಿಕ್ಷಕರುಗಳ ಕಾರ್ಯ ಶ್ಲಾಘನೀಯ. ಮಕ್ಕಳ ಪೋಷಕರು ಅವರನ್ನು ಇತರ ಮಕ್ಕಳಂತೆ ನೋಡಿಕೊಳ್ಳಬೇಕು. ವಿಶೇಷ ಚೇತನ ಮಕ್ಕಳ ಕಾರ್ಯಕ್ರಮಕ್ಕೆ ಪ್ರತಿವರ್ಷವು ನಮ್ಮ ಕೈಲಾದಷ್ಟು ಸಹಕಾರ ನೀಡುವುದಾಗಿ ಮಹೇಶ್ ಹೇಳಿದರು.

ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧಿಕಾರಿ ವೆಂಕಟೇಶ್, ಸಮನ್ವಯಾಧಿಕಾರಿ ಅಜಿತ, ಕೇಶವ ಮೂರ್ತಿ ಪಟ್ಟಣ ಪಂಚಾಯಿತಿ ಸದಸ್ಯರಾದ ಆಶಾ ಸುಬ್ಬಯ್ಯ, ಫಸಿಹಾ ತಬ್ಸಮ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎ. ಪ್ರವೀಣ್, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ಮುಂತಾದವರು ವೇದಿಕೆಯಲ್ಲಿದ್ದರು.

ಕ್ಷೇತ್ರ ಸಂಪನ್ಮೂಲ ಸಮನ್ವಾಯಾಧಿಕಾರಿ ವನಜಾಕ್ಷಿ ಸ್ವಾಗತಿಸಿದರು. ಕ್ರೀಡಾಕೂಟದಲ್ಲಿ ಭಾಗವಹಿಸಲು ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ ವಿಶೇಷಚೇತನ ಮಕ್ಕಳು, ಶಿಕ್ಷಕರು, ಪೋಷಕರು ಮತ್ತಿತರರು ಹಾಜರಿದ್ದರು.