ಮಾನ್ಯರೆ, ಮಡಿಕೇರಿಯ ದೇಚೂರಿನಲ್ಲಿದ್ದ ಕೃಷ್ಣ ನ್ಯಾಯಬೆಲೆ ಅಂಗಡಿಯನ್ನು ಅದರ ಮಾಲೀಕ ನಿಧನ ಹೊಂದಿದ ಕಾರಣ ಮುಂದೊಡ್ಡಿ ಆಹಾರ ಇಲಾಖೆಯು ಬದಲಿ ವ್ಯವಸ್ಥೆಯನ್ನು ಮಾಡದೆ, ಏಕಾಏಕಿ ನಗರದ ಬನ್ನಿ ಮಂಟಪ ಬಳಿಯ ನ್ಯಾಯಬೆಲೆ ಅಂಗಡಿಗೆ ವರ್ಗಾಯಿಸಿದೆ. ಆಹಾರ ಇಲಾಖೆಯ ಈ ದಿಢೀರ್ ಕ್ರಮದಿಂದ ದೇಚೂರು, ಪುಟಾಣಿನಗರ, ಬ್ರಾಹ್ಮಣರ ಬೀದಿ ವಿಭಾಗದ ಸುಮಾರು 700ಕ್ಕೂ ಅಧಿಕ ಪಡಿತರ ಚೀಟಿದಾರರಿಗೆ ಅನಾನುಕೂಲವಾಗಿದೆ. ಈ ವಿಭಾಗದಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರಿದ್ದು, ಹಿಂದೆ ರಾತ್ರಿ 8 ಗಂಟೆಯತನಕವೂ ಪಡಿತರ ಪಡೆದುಕೊಳ್ಳಲು ಅನುಕೂಲಕರವಾಗಿತ್ತಾದರೂ, ಈ ಮಂದಿ ಈಗ ಪಡಿತರಕ್ಕಾಗಿ ಬವಣೆ ಪಡುವಂತಾಗಿದೆ. ಆದುದರಿಂದ ಮೊದಲಿನ ಸ್ಥಳದಲ್ಲೇ ಮತ್ತೆ ನ್ಯಾಯಬೆಲೆ ಅಂಗಡಿ ತೆರೆಯುವ ವ್ಯವಸ್ಥೆ ಮಾಡಿ ಸಹಕರಿಸುವಂತೆ ವಿನಂತಿಸಿಕೊಳ್ಳುತ್ತೇವೆ.

- ನೊಂದ ಪಡಿತರ ಚೀಟಿದಾರರು, ದೇಚೂರು ವಿಭಾಗ.