ಮಡಿಕೇರಿ, ಡಿ. 22: ಸರಕಾರದ ಕಾನೂನುಗಳನ್ನು ಗಾಳಿಗೆ ತೂರುವದರೊಂದಿಗೆ; ಕಂದಾಯ ಇಲಾಖೆಯ ಮುಖಾಂತರ ತಮ್ಮ ಅನುಕೂಲಕ್ಕೆ ತಕ್ಕಂತೆ; ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿರುವ ಶಂಕೆ ವ್ಯಕ್ತಗೊಂಡಿದ್ದೆಯಲ್ಲದೆ; ಇದಕ್ಕೆ ಸಾಕ್ಷಿಯೆಂಬಂತೆ ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ಇತರೆಡೆಗಳಲ್ಲಿ ಎಗ್ಗಿಲ್ಲದೆ ಅಕ್ರಮ ಕಟ್ಟಡಗಳು ತಲೆಯೆತ್ತುತ್ತಿರುವ ಆರೋಪ ಕೇಳಿ ಬರತೊಡಗಿದೆ.ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ಇತರೆಡೆಗಳಲ್ಲಿ ಜನಸಾಮಾನ್ಯರು; ತಮ್ಮ ಸ್ವಂತ ಜಮೀನುಗಳನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಕಾನೂನಿನ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿದರೆ; ಅಂತಹ ಅರ್ಜಿಗಳನ್ನು ಸಂಬಂಧಿಸಿದ ಅಧಿಕಾರಿಗಳು ತಿರಸ್ಕರಿಸುತ್ತಿರುವ ಬಗ್ಗೆ ಹಲವಷ್ಟು ದೂರುಗಳಿವೆ. ಈ ಸಂಬಂಧ ಭೂ ಮಾಲೀಕರು ನಿರಂತರವಾಗಿ ಕೊಡಗಿನಲ್ಲಿ ರಾಜ್ಯದ ಮುಖ್ಯಮಂತ್ರಿ ಸಹಿತ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳ ಬಳಿ ದೂರು ಸಲ್ಲಿಸುತ್ತಿದ್ದರೂ; ಸಮಸ್ಯೆ ಬಗೆಹರಿಯುತ್ತಿಲ್ಲ.
ಇಂತಹ ಬೆಳವಣಿಗೆ ನಡುವೆ ಕಾನೂನು ಬಾಹಿರ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು ಸಂಬಂಧಿಸಿದ ಅಧಿಕಾರಿಗಳ ಮೂಗಿನ ನೇರಕ್ಕೆ ನಡೆಯುತ್ತಿದ್ದರೂ ಯಾರೂ ತುಟಿ ಬಿಚ್ಚುತ್ತಿಲ್ಲವಷ್ಟೇ. ಬದಲಾಗಿ ಈ ಬಗ್ಗೆ ವಿಚಾರಿಸಿದರೆ; ಸಂಬಂಧಿಸಿದ ಕಟ್ಟಡ ಮಾಲೀಕರಿಗೆ ನೋಟೀಸ್ ನೀಡಲಾಗಿದೆ ಎಂಬ ಹಾರಿಕೆಯ ಉತ್ತರ ಸಾಮಾನ್ಯವಾಗಿದೆ.
ತಾಜಾ ಉದಾಹರಣೆ : ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನಿಯಮಾನುಸಾರ ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿದರೆ; ಯಾವದೇ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡದಂತೆ ಸರಕಾರವೇ ನಿರ್ಬಂಧ ವಿಧಿಸಿದೆ. ಇನ್ನು ನಗರ ಅಥವಾ ಪಟ್ಟಣ ಅಭಿವೃದ್ಧಿ ಯೋಜನಾ ಇಲಾಖೆಯು ಕೂಡ; ಮನೆ ದಳ ಹೊರತುಪಡಿಸಿ ಕೃಷಿ ಭೂಮಿಯನ್ನು ಕೃಷಿಯೇತರ ಬಳಕೆಗೆ ಸರಕಾರದ ಹಂತದಲ್ಲೇ ತಡೆಯೊಡ್ಡಿದ್ದು; ನೂರಾರು ಅರ್ಜಿಗಳು ಇಲಾಖೆ ವತಿಯಿಂದ ಅನುಮತಿ ಲಭಿಸದೆ ದೂಳು ಹಿಡಿಯುತ್ತಿರುವ ಬಗ್ಗೆ ಜನವಲಯದಲ್ಲಿ ಅಸಮಾಧಾನವಿದೆ. ಇಂತಹ ಸನ್ನಿವೇಶದ ನಡುವೆ ಅಧಿಕಾರಿಗಳ ‘ಕೈ’ ಬಿಸಿಯಾದರೇ ಎಲ್ಲವೂ ಸಾಧ್ಯ ಎಂಬಂತೆ; ನಗರದಿಂದ ಅನತಿದೂರವಿರುವ ತಾಳತ್ಮನೆ ಹೆದ್ದಾರಿ ಬಳಿಯ ಕಟ್ಟಡ ಸಾಕ್ಷಿಯಾಗುತ್ತಿದೆ.
ಸರ್ವೆ ಸಂಖ್ಯೆ ನಾಪತ್ತೆ : ಆ ಪ್ರಕಾರ ತಾಳತ್ಮನೆಯ ಹೆದ್ದಾರಿಗೆ ಹೊಂದಿಕೊಂಡಂತೆ ತೀರಾ ಇಳಿಜಾರು ಪ್ರದೇಶದಲ್ಲಿ; ನಾಲ್ಕು ಅಂತಸ್ತಿನ ಕಟ್ಟಡವೊಂದು ನೂತನವಾಗಿ ತಲೆಯೆತ್ತುತ್ತಿದೆ. ಈ ಕಟ್ಟಡಕ್ಕೆ ನಗರ ಯೋಜನಾ ಪ್ರಾಧಿಕಾರ ಹಾಗೂ ಮದೆ ಗ್ರಾ.ಪಂ. ನೀಡಿರುವ ದೃಢೀಕರಣದಲ್ಲಿ ಸರ್ವೆ ನಂ. 238/56ರಲ್ಲಿ 10 ಸೆಂಟ್ ನಿವೇಶನವೆಂದು ನಮೂದಿಸಲಾಗಿದೆ. ಆದರೆ ಮೂಲ ದಾಖಲೆಯಲ್ಲಿ ಈ ಸರ್ವೆ ಸಂಖ್ಯೆಯೇ ನಾಪತ್ತೆಯಾಗಿದ್ದು; ಸಾಕಷ್ಟು ಸಂಶಯ ಹುಟ್ಟು ಹಾಕಿದೆ.
ಇನ್ನೊಂದೆಡೆ ಇಂತಹ ಬೃಹತ್ ಕಟ್ಟಡಕ್ಕೆ; ಇಳಿಜಾರು ಪ್ರದೇಶ ದೊಂದಿಗೆ ಕಳೆದ ವರ್ಷ ಹೆದ್ದಾರಿ ಕುಸಿತ ಸಂಭವಿಸಿರುವ ಮಾರ್ಗ ಬದಿ ಜಿಲ್ಲಾಡಳಿತ; ಮೂಡಾ, ಗ್ರಾ.ಪಂ.ನಿಂದ ಯಾವ ರೀತಿ ಅನುಮೋದನೆ ನೀಡಲಾಗಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಅಧಿಕಾರಿಗಳ ಮೌನ : ಈ ಬಗ್ಗೆ ಮದೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯನ್ನು
(ಮೊದಲ ಪುಟದಿಂದ) ಪ್ರಶ್ನಿಸಿದರೆ; ಅಕ್ರಮ ಕಾಮಗಾರಿ ಸಂಬಂಧ ನೋಟೀಸ್ ನೀಡಲಾಗಿದೆ ಎಂದು ಉತ್ತರ ನೀಡಿದ್ದಾರೆ. ಇತರ ಇಲಾಖೆಗಳಿಂದ ಸಂಬಂಧಿಸಿದ ಕಟ್ಟಡಕ್ಕೆ ಈಗಾಗಲೇ ಅನುಮತಿ ನೀಡಿರುವ ಬಗ್ಗೆ ತಿಳಿದು ಬಂದಿದ್ದು; ಇದೊಂದು ನಕಲಿ ದಾಖಲೆ ಸೃಷ್ಟಿಸಿ ಕಾಮಗಾರಿ ಯೋಜನೆ ರೂಪಿಸಿರುವ ಶಂಕೆಯನ್ನು ತಾಳತ್ಮನೆ ದುರ್ಗಾ ಭಗವತಿ ಬಡಾವಣೆ ನಿವಾಸಿಗಳು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಭವಿಷ್ಯದಲ್ಲಿ ಸಂಭವಿಸಬಹುದಾದ ಅನಾಹುತ ತಪ್ಪಿಸು ವಂತೆ ಆಗ್ರಹಿಸಿ ‘ಶಕ್ತಿ’ಗೆ ಹೇಳಿಕೆ ನೀಡಿದ್ದಾರೆ.
-ಚಿತ್ರ, ವರದಿ : ಟಿ.ಜಿ. ಸತೀಶ್