ಮೂರ್ನಾಡು, ಡಿ. 22: ಕುಡಿಯುವ ನೀರಿನ ಯೋಜನೆಯಡಿ ಪೈಪ್‍ಲೈನ್ ಅಳವಡಿಕೆ ಹಾಗೂ ನೀರಿನ ಟ್ಯಾಂಕ್ ನಿರ್ಮಾಣಕ್ಕೆಂದು ರೂ. 22 ಲಕ್ಷ ವೆಚ್ಚ ಮಾಡಿದ್ದು, ಕಾಮಗಾರಿ ನಿರ್ವಹಿಸಿ ಒಂದು ವರ್ಷ ಕಳೆದರೂ ಇದುವರೆಗೆ ಒಂದು ಹನಿ ನೀರು ಕೂಡ ಪೈಪ್ ಮೂಲಕ ಹರಿದಿಲ್ಲ. ಅಲ್ಲದೆ ಟ್ಯಾಂಕ್ ನಿರ್ಮಾಣ ಮಾಡದೆ ಈ ಹಿಂದೆ ಇದ್ದ ಹಳೆಯ ಟ್ಯಾಂಕ್‍ಗೆ ಪೈಪ್ ಅಳವಡಿಸಿದ್ದು, ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಸಂಸ್ಥೆಗೆ ಪೂರ್ಣ ಹಣ ಬಿಡುಗಡೆ ಮಾಡಲಾಗಿದೆ.ಮೂರ್ನಾಡು ಗ್ರಾ.ಪಂ. ವ್ಯಾಪ್ತಿಯ ಗಾಂಧಿ ನಗರದ ಪರಿಶಿಷ್ಟ ಜಾತಿ ವಾರ್ಡ್‍ಗೆ ಉಪ್ಪುಗುಂಡಿ ಬಳಿಯ ಕಾವೇರಿ ಹೊಳೆಯಿಂದ ಕುಡಿಯುವ ನೀರಿನ ಪೈಪ್‍ಲೈನ್ ಅಳವಡಿಕೆ ಮತ್ತು ನೀರಿನ ಟ್ಯಾಂಕ್ ನಿರ್ಮಾಣಕ್ಕೆ 2018-19ನೇ ಸಾಲಿನ ಪಂಚಾಯಿತಿ ನಿಧಿಯ ಅನುಮೋದಿತ ಕ್ರಿಯಾಯೋಜನೆಯಡಿ ರೂ. 22 ಲಕ್ಷ ಮಂಜೂರು ಮಾಡಲಾಗಿದೆ. ಕಾಮಗಾರಿಯನ್ನು ಹುಣಸೂರಿನ ಕೆ.ಆರ್.ಐ.ಡಿ.ಎಲ್. ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ನೀಡುವ ಸಂದರ್ಭದಲ್ಲಿ 4 ಅಥವಾ 5 ಇಂಚಿನ ಹೆಚ್.ಡಿ.ಪಿ.ಇ. ಪೈಪ್‍ಲೈನ್ ಅಳವಡಿಸುವುದರೊಂದಿಗೆ ನೀರಿನ ಟ್ಯಾಂಕ್ ನಿರ್ಮಾಣ ಮಾಡುವಂತೆ ಸೂಚಿಸಲಾಗಿದೆ. ಆದರೆ, ಗುತ್ತಿಗೆದಾರರು ಕಳಪೆ ಗುಣಮಟ್ಟದ ಪೈಪ್‍ಗಳನ್ನು ಅಳವಡಿಸಿದ್ದಲ್ಲದೆ, ಈ ಹಿಂದೆ ಇದ್ದ ಹಳೆಯ ಟ್ಯಾಂಕ್‍ಗೆ ಸಂಪರ್ಕ ಕಲ್ಪಿಸಿದ್ದಾರೆ. ಪರಿಣಾಮ ಪೈಪ್‍ಗಳು ಅಲ್ಲಲ್ಲಿ ಒಡೆದು ಹೋಗಿದೆ. ಇಂದಿಗೂ ಹೊಸ ಪೈಪ್‍ನಲ್ಲಿ ನೀರು ಹರಿದಿಲ್ಲ. ಬದಲಿಗೆ ಹಳೆಯ ಪೈಪ್ ನಲ್ಲಿಯೇ ನೀರು ಸರಬರಾಜಾಗುತ್ತಿದೆ.

ಹಣ ಪಾವತಿ: ಯಾವದೇ ಸರಕಾರಿ ಕಾಮಗಾರಿಗಳಿಗೆ ಕಾಮಗಾರಿ ಪೂರ್ಣಗೊಂಡ ನಂತರ ಪರಿಶೀಲನೆಯಾದ ಬಳಿಕ ಹಣ ಪಾವತಿ ಮಾಡಲಾಗುತ್ತದೆ. ಆದರೆ, ಇಲ್ಲಿ ಎರಡು ಕಂತಿನಲ್ಲಿ ಸಂಪೂರ್ಣ ಹಣ ಪಾವತಿ ಮಾಡಿರುವುದು ಕಂಡು ಬರುತ್ತದೆ. ಪ್ರಥಮ ಕಂತಿನಲ್ಲಿ ತಾ. 26.12.2018 ರಂದು ರೂ. 10 ಲಕ್ಷದ ಚೆಕ್ ನೀಡಲಾಗಿದೆ. ಎರಡನೇ ಕಂತಿನಲ್ಲಿ ತಾ. 6.3.2019 ರಂದು ರೂ. 12 ಲಕ್ಷ ಮೊತ್ತ ಸೇರಿದಂತೆ ಒಟ್ಟು ರೂ. 22 ಲಕ್ಷದ ಚೆಕ್ ಗುತ್ತಿಗೆದಾರ ಸಂಸ್ಥೆಯ ಕಾರ್ಯಪಾಲಕ ಅಭಿಯಂತರರಿಗೆ ಪಾವತಿ ಮಾಡಲಾಗಿದೆ. ಟ್ಯಾಂಕ್ ನಿರ್ಮಾಣ ಮಾಡದಿದ್ದರೂ ಪೂರ್ಣ ಹಣ ಪಾವತಿ ಮಾಡಲಾಗಿದೆ.

ಗುತ್ತಿಗೆದಾರರು ಕಾಮಗಾರಿಗೆ ವೆಚ್ಚವಾದ ಬಿಲ್ ಸಲ್ಲಿಸುವುದ ಕ್ಕಿಂತಲೂ ಮುಂಚೆಯೇ ಗ್ರಾ.ಪಂ. ಪೂರ್ಣ ಹಣ ಪಾವತಿ ಮಾಡಿರುವ ಬಗ್ಗೆ ಗ್ರಾಮಸ್ಥರಲ್ಲಿ ಸಂಶಯಕ್ಕೆಡೆ ಮಾಡಿದೆ.

ಪರಿಶೀಲನಾ ವರದಿ: ಕಾಮಗಾರಿಯನ್ನು ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಇಂಜಿನಿಯರಿಂಗ್ ಪರಿಶೀಲನೆ ಮಾಡಿದ್ದಾರೆ.

(ಮೊದಲ ಪುಟದಿಂದ) ಪರಿಶೀಲನಾ ವರದಿಯಲ್ಲಿ ಪೈಪ್‍ಲೈನ್ ಕಾಮಗಾರಿ ಎಂದು ನಮೂದಿಸಿದ್ದು, ಬಳಕೆ ಮಾಡಿದ ಸಾಮಗ್ರಿಗಳು ಹಾಗೂ ಗುಣಮಟ್ಟ ತೃಪ್ತಿದಾಯಕವಾಗಿದೆ ಎಂದು ಸಂಸ್ಥೆಯವರು ವರದಿ ಸಲ್ಲಿಸಿದ್ದಾರೆ. 10.1.2019 ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವುದಾಗಿ ನಮೂದಿಸಿದ್ದು, ರೂ. 22 ಲಕ್ಷದಷ್ಟು ವೆಚ್ಚವಾಗಿರುವುದಾಗಿ ನಮೂದಿಸಿದ್ದಾರೆ. ಆದರೆ ಮೂರ್ನಾಡು ಗ್ರಾ.ಪಂ. ವೀರಾಜಪೇಟೆ ತಾಲೂಕಿನಲ್ಲಿರುವುದಾಗಿ ನಮೂದಿಸಿದ್ದು, ಮೇಲ್ನೋಟಕ್ಕೆ ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲಿಸದೇ ಕುಳಿತಲ್ಲಿಯೇ ವರದಿ ಸಲ್ಲಿಸಿರುವ ಬಗ್ಗೆ ಗುಮಾನಿ ಎದ್ದಿದೆ.

ಜಿ.ಪಂ.ಗೆ ದೂರು: ಕಳಪೆ ಕಾಮಗಾರಿ ಹಾಗೂ ಟ್ಯಾಂಕ್ ನಿರ್ಮಾಣ ಮಾಡದೆಯೇ ಬಿಲ್ ಪಾವತಿ ಮಾಡಿರುವ ಬಗ್ಗೆ ಗ್ರಾಮಸ್ಥರು ಒಂದು ವರ್ಷದ ಹಿಂದೆಯೇ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದಾಖಲೆಗಳ ಸಹಿತ ದೂರು ಸಲ್ಲಿಸಿದ್ದಾರೆ. ಆದರೂ ಇದುವರೆಗೆ ಯಾವುದೇ ಸ್ಪಂದನ ದೊರೆತಿಲ್ಲವೆಂಬದು ಗ್ರಾಮಸ್ಥರ ಅಳಲು. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ತನಿಖೆ ನಡೆಸಿ ಅವ್ಯವಹಾರವನ್ನು ಬಯಲಿಗೆಳೆಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. -ಹೆಚ್.ವಿ. ರಂಜಿತ್