ಕಾಯ್ದೆಯನ್ನು ಗೌರವಿಸಿ : ಪ್ರಧಾನಿ ಮನವಿ

ನವದೆಹಲಿ, ಡಿ. 22: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯಿಂದ ಭಯವಾಗುತ್ತಿರುವುದೇಕೆ ಎಂದು ಲೇವಡಿ ಮಾಡಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಮಮತಾ ದೀದಿ ಕೋಲ್ಕತಾದಿಂದ ವಿಶ್ವಸಂಸ್ಥೆಗೆ ಹೋಗಿದ್ದಾರೆ. ಕೆಲ ವರ್ಷಗಳ ಹಿಂದೆ, ಸಂಸತ್ತಿನಲ್ಲಿ ಅವರು ಬಾಂಗ್ಲಾದೇಶದಿಂದ ಬಂಗಾಳಕ್ಕೆ ಬರುವ ಬಾಂಗ್ಲಾ ನುಸುಳುಕೋರರನ್ನು ತಡೆಯುವಂತೆ ಮೊರೆ ಇಡುತ್ತಿದ್ದರು. ದೀದಿ ನಿಮಗೇನಾಯಿತು? ನೀವೇಕೆ ಬದಲಾದಿರಿ? ವದಂತಿಗಳನ್ನೇಕೆ ಹಬ್ಬಿಸುತ್ತಿದ್ದೀರಿ? ಎಂದು ಮೋದಿ ಪ್ರಶ್ನಿಸಿದರು. ಕಳೆದ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅನುಮೋದಿಸಲಾಗಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಅನುಮೋದನೆಯಾಗಿ ಕಾಯ್ದೆಯಾಗಿ ಜಾರಿಗೆ ಬಂದಿದ್ದು, ಜನರ ತೀರ್ಪನ್ನು ಮತ್ತು ಸಂಸತ್ತನ್ನು ಎಲ್ಲರೂ ಗೌರವಿಸಬೇಕು. ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವಾಗ ಮತ್ತು ಸೌಲಭ್ಯವನ್ನು ಹಂಚುವಾಗ ಜನರಲ್ಲಿ ಜಾತಿ, ಧರ್ಮ ಕೇಳಿದ್ದೇವೆಯೇ? ಎಲ್ಲರನ್ನೊಳಗೊಂಡ ಎಲ್ಲರ ವಿಕಾಸ ಎಂಬ ಮಂತ್ರದಲ್ಲಿ ನಂಬಿಕೆ ಇಟ್ಟವರು ನಾವು. ಪ್ರಧಾನಿಯಾದ ನಂತರ ನಾನು ಮಾಡಿರುವ ಕೆಲಸಗಳನ್ನು ಪರೀಕ್ಷಿಸಿ ಎಂದು ಪ್ರತಿಪಕ್ಷದವರಿಗೆ ನಾನು ಸವಾಲು ಹಾಕುತ್ತೇನೆ ಎಂದು ಪ್ರಧಾನಿ ಹೇಳಿದರು.

ತಾ. 28 ರಂದು ಮುಸ್ಲಿಮರ ರ್ಯಾಲಿ

ಮಂಗಳೂರು, ಡಿ. 22: ಮಂಗಳೂರಿನಲ್ಲಿ ತಾ. 28 ರಂದು ರ್ಯಾಲಿ ಆಯೋಜಿಸಲು ಅನುಮತಿ ನೀಡಬೇಕೆಂದು ದಕ್ಷಿಣ ಕನ್ನಡ ಮತ್ತು ಉಡುಪಿ ಮುಸ್ಲಿಂ ಕೇಂದ್ರ ಸಮಿತಿ ಕೋರಿದೆ. ಮಂಗಳೂರಿನ ನೆಹರೂ ಮೈದಾನದಲ್ಲಿ ರ್ಯಾಲಿ ಆಯೋಜಿಸಲು ನಿರ್ಧರಿಸಿದ್ದು, ಇದಕ್ಕೆ ಪೊಲೀಸರ ಅನುಮತಿ ಬೇಕೆಂದು ಕೋರಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಸಮಿತಿ ಅಧ್ಯಕ್ಷ ಕೆ.ಎಸ್. ಮೊಹಮ್ಮದ್ ಮಸೂದ್, ಪೊಲೀಸ್ ಗುಂಡೇಟಿಗೆ ಕಾರಣರಾದವರ ವಿರುದ್ಧ ತಕ್ಷಣ ಕಠಿಣ ಶಿಕ್ಷೆ ನೀಡಬೇಕೆಂದು ಸಮಿತಿ ಒತ್ತಾಯಿಸುತ್ತದೆ. ಮಂಗಳೂರು ಪೊಲೀಸ್ ಆಯುಕ್ತರನ್ನು ಮತ್ತು ಮಂಗಳೂರು ಇನ್ಸ್‍ಪೆಕ್ಟರ್‍ನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕೆಂದು ಹೇಳಿದರು. ಪೊಲೀಸರು ನಮ್ಮನ್ನು ಶತ್ರುಗಳಂತೆ ಕಾಣುವುದನ್ನು ನಿಲ್ಲಿಸಬೇಕು, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆ ಮಾಡುವುದಕ್ಕೆ ನಮಗೆ ಎಲ್ಲಾ ರೀತಿಯ ಹಕ್ಕು ಇದೆ. ಪೊಲೀಸರಿಂದ ನಮಗೆ ಬೆಂಬಲ ಬೇಕು. ರ್ಯಾಲಿಗೆ ಅನುಮತಿ ಕೊಡದಿದ್ದರೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ಯು.ಟಿ. ಖಾದರ್ ವಿರುದ್ಧ ಎಫ್‍ಐಆರ್

ಮಂಗಳೂರು, ಡಿ. 22: ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧದ ಪ್ರತಿಭಟನೆ ಕುರಿತು ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಮಾಜಿ ಸಚಿವ ಹಾಗೂ ಶಾಸಕ ಯು.ಟಿ. ಖಾದರ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಕಳೆದ ಬುಧವಾರ ಹೇಳಿಕೆ ನೀಡಿದ್ದ ಖಾದರ್ ಅವರು, ಇಡೀ ದೇಶವೇ ಹೊತ್ತಿ ಉರಿಯುತ್ತಿದೆ ಎಂದು ಹೇಳಿದ್ದರು. ಈ ಹೇಳಿಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೇಶ್ ಕುಮಾರ್ ಶೆಟ್ಟಿ ದೂರಿನ ಮೇಲೆ ಮಂಗಳೂರು ಪೊಲೀಸರು ಖಾದರ್ ಅವರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆಂದು ತಿಳಿದುಬಂದಿದೆ. ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಈಗಾಗಲೇ ದೇಶವೇ ಹೊತ್ತಿ ಉರಿಯುತ್ತಿದೆ. ಕರ್ನಾಟಕ ಶಾಂತಿ ನಾಡಾಗಿದ್ದು, ಒಂದು ವೇಳೆ ಇಲ್ಲಿಯೂ ಕಾಯ್ದೆಯನ್ನು ಜಾರಿಗೆ ಮುಂದಾದರೆ ಕರ್ನಾಟದಲ್ಲೂ ಬೆಂಕಿ ಹೊತ್ತಿ ಉರಿಯಲಿದೆ ಎಂದು ಖಾದರ್ ಯಡಿಯೂರಪ್ಪ ಅವರಿಗೆ ಎಚ್ಚರಿಸಿದ್ದರು.

ಗೃಹ ಸಚಿವರ ವಜಾಕ್ಕೆ ಒತ್ತಾಯ

ಮಂಗಳೂರು, ಡಿ. 22: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸ್ ಗೋಲಿಬಾರ್‍ನಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆಯ ಹಿನ್ನೆಲೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಭಾನುವಾರ ಮಂಗಳೂರಿಗೆ ಭೇಟಿ ನೀಡಿದ ಕುಮಾರಸ್ವಾಮಿ ಗೋಲಿಬಾರ್ ಕೃತ್ಯದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸಿ, ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಘಟನೆಗಳ ಕುರಿತಂತೆ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಸುಳ್ಳುಗಳ ಸರಮಾಲೆಯನ್ನೇ ರೂಪಿಸಿದ್ದಾರೆ. ವಾಸ್ತವ ಸ್ಥಿತಿ ಹಾಗೂ ನೈಜ ವಿವರಗಳನ್ನು ಪೊಲೀಸ್ ಇಲಾಖೆ ಮುಚ್ಚಿಡುತ್ತಿದೆ ಎಂದು ದೂರಿದರು. ಪೊಲೀಸ್ ಇನ್ಸ್‍ಪೆಕ್ಟರ್ ಸೀತಾರಾಮ ಕುಂದೆರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಕುಮಾರಸ್ವಾಮಿ, ಪೊಲೀಸರ ಗೋಲಿಬಾರ್‍ನಲ್ಲಿ ಮೃತಪಟ್ಟಿರುವ ಇಬ್ಬರು ವ್ಯಕ್ತಿಗಳ ಹೆಸರುಗಳನ್ನು ಎಫ್‍ಐಆರ್‍ನಲ್ಲಿ ನಮೂದಿಸಿರುವುದನ್ನು ಅವರು ಪ್ರಶ್ನಿಸಿದರು.

ಸಿಎಎ ಬೆಂಬಲಿಗನಿಗೆ ಚಾಕು ಇರಿತ

ಬೆಂಗಳೂರು, ಡಿ. 22: ನಗರದ ಟೌನ್‍ಹಾಲ್ ಮುಂಬಾಗದಲ್ಲಿ ನಡೆದ ಸಿಎಎ ಬೆಂಬಲಿಸಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ ವರುಣ್ ಜೆ.ಪಿ. ನಗರದ ನಿವಾಸಕ್ಕೆ ತಮ್ಮ ದ್ವಿಚಕ್ರದಲ್ಲಿ ಹಿಂತಿರುಗುವ ಸಂದರ್ಭದಲ್ಲಿ ಜೆ.ಸಿ. ರೋಡ್‍ನಲ್ಲಿ ಇಬ್ಬರು ಅಪರಿಚಿತರು ಏಕಾಏಕಿ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದಾರೆ. ಈ ಸಂದರ್ಭ ಸಹಾಯಕ್ಕೆ ಬಂದ ಸ್ಥಳೀಯ ಪೊಲೀಸರು ಮತ್ತು ಸಾರ್ವಜನಿಕರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಭೇಟಿಕೊಟ್ಟ ಸಂಸದ ತೇಜಸ್ವಿ ಸೂರ್ಯ, ವರುಣ್ ಆರೋಗ್ಯ ವಿಚಾರಿಸಿ, ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ. 31 ವರ್ಷ ವಯಸ್ಸಿನ ವರುಣ್ ಸಂಘ ಮತ್ತು ಬಿಜೆಪಿಯ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾದ ಕಾರ್ಯಕರ್ತರಾಗಿದ್ದಾರೆ.

ನೆರೆ ರಾಷ್ಟ್ರಗಳ ಮೇಲೆ ಪರಿಣಾಮ

ಢಾಕಾ, ಡಿ. 22: ಪೌರತ್ವ ಕಾಯ್ದೆ, ಎನ್‍ಆರ್‍ಸಿ ಭಾರತದ ಆಂತರಿಕ ವಿಷಯಗಳೇ ಆಗಿದ್ದರೂ ಅದು ನೆರೆ ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಹೇಳಿದ್ದಾರೆ. ಈ ಕಾಯ್ದೆ ಹಾಗೂ ಎನ್‍ಆರ್‍ಸಿಯಿಂದ ದೇಶದಲ್ಲಿ ಉಂಟಾಗುವ ಅಸ್ಥಿರತೆ ನೆರೆ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಮಾತನಾಡಿದ್ದು, ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ಬಾಂಗ್ಲಾದೇಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ಭರವಸೆ ನೀಡಿದ್ದಾರೆಂದು ಮೊಮೆನ್ ಹೇಳಿದ್ದು, ಭಾರತವನ್ನು ನಂಬುವುದಾಗಿ ತಿಳಿಸಿದ್ದಾರೆ. ನಾವು ಭಾರತದ ನಂ. 1 ಮಿತ್ರ ರಾಷ್ಟ್ರ. ಅಲ್ಲೇನಾದರೂ ಅಸ್ಥಿರತೆ, ಅನಿಶ್ಚಿತತೆ ಉಂಟಾದರೆ ಅದು ನಮ್ಮ ಮೇಲೆಯೂ ಪರಿಣಾಮ ಬೀರಲಿದೆ. ಇದಷ್ಟೇ ನಮ್ಮ ಭಯ ಎಂದು ಅಲ್ಲಿನ ವಿದೇಶಾಂಗ ಸಚಿವರು ಹೇಳಿದ್ದಾರೆ.

ನೂತನ ಶಾಸಕರ ಪ್ರಮಾಣವಚನ

ಬೆಂಗಳೂರು, ಡಿ. 22: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಉಪ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಬಿಜೆಪಿಯ ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದು, ನೂತನ ಶಾಸಕರಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಮಾಣ ವಚನ ಬೋಧಿಸಿದರು. ಬಿಜೆಪಿಯ 12, ಕಾಂಗ್ರೆಸ್‍ನ 2 ಹಾಗೂ ಒಬ್ಬರು ಪಕ್ಷೇತರ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ಕೆ.ಆರ್. ಪುರಂನ ಭೈರತಿ ಬಸವರಾಜ್, ಮಹಾಲಕ್ಷ್ಮೀ ಲೇಔಟ್‍ನ ಗೋಪಾಲಯ್ಯ, ಕೆ.ಆರ್. ಪೇಟೆಯ ನಾರಾಯಣಗೌಡ, ಚಿಕ್ಕಬಳ್ಳಾಪುರದ ಸುಧಾಕರ್, ಹಿರೆಕೆರೂರು ಕ್ಷೇತ್ರದ ಬಿ.ಸಿ. ಪಾಟೀಲ್, ಕಾಗವಾಡ ಕ್ಷೇತ್ರದ ಶ್ರೀಮಂತ್ ಪಾಟೀಲ್, ಯಶವಂತಪುರದ ಎಸ್.ಟಿ. ಸೋಮಶೇಖರ್, ರಾಣೆಬೆನ್ನೂರು ಕ್ಷೇತ್ರದ ಅರುಣ್‍ಕುಮಾರ್, ಅಥಣಿಯ ಮಹೇಶ್ ಕುಮಠಳ್ಳಿ, ಹೊಸಕೋಟೆಯ ಶರತ್ ಬಚ್ಚೇಗೌಡ, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ವಿಜಯನಗರದ ಆನಂದ್ ಸಿಂಗ್, ಗೋಕಾಕ ಕ್ಷೇತ್ರದ ರಮೇಶ್ ಜಾರಕಿಹೊಳಿ, ಹುಣಸೂರಿನ ಮಂಜುನಾಥ್ ಇಂದು ಪ್ರಮಾಣ ವಚನ ಸ್ವೀಕರಿಸಿದರು.