ಸೋಮವಾರಪೇಟೆ,ಡಿ.22: ಇಲ್ಲಿನ ಇಂದಿರಾಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಸಾಕಮ್ಮನ ಬಂಗಲೆ ಮೈದಾನದಲ್ಲಿ ಆಯೋಜಿಸಲಾಗಿದ್ದ 33ನೇ ವರ್ಷದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕುಶಾಲನಗರದ ನವೀನ್ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನದೊಂದಿಗೆ ಕಬಡ್ಡಿ ಕಪ್ನ್ನು ತನ್ನದಾಗಿಸಿಕೊಂಡಿತು.
ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯಾಟದಲ್ಲಿ ಮಲ್ಲಿಪಟ್ಟಣ ಫ್ರೆಂಡ್ಸ್ ತಂಡವನ್ನು 28-8 ಅಂಕಗಳಿಂದ ಮಣಿಸುವ ಮೂಲಕ ಕುಶಾಲನಗರ ತಂಡ ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನಕ್ಕೆ ಭಾಜನವಾಯಿತು.
ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನವೀನ್ ಫ್ರೆಂಡ್ಸ್ ತಂಡ ಅರುಣ್ ಫ್ರೆಂಡ್ಸ್ ತಂಡವನ್ನು 33-8ರಲ್ಲಿ ಸೋಲಿಸಿ ಅಂತಿಮ ಸುತ್ತಿಗೆ ಮುನ್ನೆಡೆಯಿತು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಮಲ್ಲಿಪಟ್ಟಣ ಫ್ರೆಂಡ್ಸ್ ತಂಡ ಕುಶಾಲನಗರದ ಜೆಬಿಎಸ್ಸಿ ತಂಡವನ್ನು 4-2 ಅಂಕಗಳಿಂದ ಸೋಲಿಸಿ ಅಂತಿಮ ಸುತ್ತಿಗೆ ಪ್ರವೇಶ ಪಡೆಯಿತು. ಮೂರನೆ ಸ್ಥಾನವನ್ನು ಕುಶಾಲನಗರದ ಜೆಬಿಎಸ್ಸಿ ತಂಡ, ಅರುಣ್ ಫ್ರೆಂಡ್ಸ್ ತಂಡದೊಂದಿಗೆ 15-8ಅಂಕ ಗಳಿಸುವ ಮೂಲಕ ಪಡೆದುಕೊಂಡಿತು.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸೋಮವಾರಪೇಟೆಯ ಎಸ್ಜೆಎಂ ಟೈಗರ್ ಬಾಯ್ಸ್ ತಂಡ ಪ್ರಥಮ ಹಾಗೂ ಬಳಗುಂದ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನವನ್ನು ಪಡೆಯಿತು. ಪ್ರೌಢಶಾಲಾ ವಿಭಾಗದಲ್ಲಿ ಸೋಮವಾರಪೇಟೆಯ ರಾಮದೂತ ಕಬಡ್ಡಿ ಕ್ಲಬ್ ಪ್ರಥಮ ಸ್ಥಾನ, ಸ್ಟಾರ್ ಬಾಯ್ಸ್ ದ್ವಿತೀಯ ಹಾಗೂ ಜೋಸೆಫ್ ಸ್ಟಾರ್ ತೃತೀಯ ಸ್ಥಾನ ಪಡೆಯಿತು. ಕಾಲೇಜು ವಿಭಾಗದಲ್ಲಿ ಸೋಮವಾರಪೇಟೆಯ ಪಾಡೋ ವಾರಿಯರ್ಸ್ ತಂಡ ಪ್ರಥಮ, ಹೆಬ್ಬಾಲೆ ಕಾಲೇಜು ದ್ವಿತೀಯ ಹಾಗೂ ಕುಶಾಲನಗರದ ತಂಡ ತೃತೀಯ ಸ್ಥಾನ ಪಡೆಯಿತು. ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಹರಪಳ್ಳಿ ರವೀಂದ್ರ ಅವರು ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭ ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು, ಹಿರಿಯ ವಕೀಲರಾದ ಈಶ್ವರಚಂದ್ರ ವಿದ್ಯಾಸಾಗರ್, ಉದ್ಯಮಿಗಳಾದ ಅರುಣ್ ಕೊತ್ನಳ್ಳಿ, ಪಿ.ಕೆ. ರವಿ, ಗಿರೀಶ್ ಮಲ್ಲಪ್ಪ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಸ್.ಡಿ. ವಿಜೇತ, ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ಉಪಾಧ್ಯಕ್ಷ ರಂಗಸ್ವಾಮಿ, ಕಾಫಿ ಬೆಳೆಗಾರ ಚಂಗಪ್ಪ, ನಂಗಾರು ಹೇಮಂತ್, ಕೃಷಿ ಪತ್ತಿನ ಸಹಕಾರ ಸಂಘದ ಶ್ರೀಧರ್, ಕರ್ಕಳ್ಳಿಯ ಇಸಾಕ್ ಉಪಸ್ಥಿತರಿದ್ದರು. ತೀರ್ಪುಗಾರ ರಾಗಿ ಗೌಡಳ್ಳಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಪ್ರವೀಣ್, ನಿಶಾಂತ್, ರಾಜಪ್ಪ ಕಾರ್ಯ ನಿರ್ವಹಿಸಿದರು. ಇದೇ ಸಂದರ್ಭ ಸಂಘದ ವತಿಯಿಂದ ಉದ್ಯಮಿ ಹರಪಳ್ಳಿ ರವೀಂದ್ರ ಅವರನ್ನು ಸನ್ಮಾನಿಸಲಾಯಿತು.