ಮಾನ್ಯರೆ, ರೈತರು ಬೆಳೆಯುವ ಯಾವುದೇ ಉತ್ಪನ್ನಗಳಿಗೆ ಬೆಲೆಯಿಲ್ಲದೆ ರೈತ ಕಂಗಾಲಾಗಿದ್ದಾನೆ. ಇಂತಹ ಸಮಯದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಅದನ್ನು ತಡೆಗಟ್ಟಲೂ ಯಾವುದೇ ಗಂಭೀರವಾದ ಆಲೋಚನೆ ಅರಣ್ಯ ಇಲಾಖೆಗೆ ಇದ್ದಂತಿಲ್ಲ.

ಅರಣ್ಯದಲ್ಲಿ ವಾಸಿಸಬೇಕಾಗಿದ್ದ ಆನೆಗಳು ಕಾಫಿ ತೋಟದಲ್ಲಿ ಮರಿ ಹಾಕಿಕೊಂಡು ಖಾಯಂ ವಾಸಸ್ಥಾನವಾಗಿ ಮಾಡಿಕೊಂಡಿದೆ. ಆನೆ ಹಾವಳಿಯಿಂದ ಕಾಫಿ ತೋಟಗಳು ನಾಶವಾಗುತ್ತಿವೆ. ತೋಟದಲ್ಲಿ ಕೆಲಸ ಮಾಡಲು ಕಾರ್ಮಿಕರು, ಮಾಲೀಕರು ಅಂಜುತ್ತಾರೆ. ಆನೆಯ ಭಯದಿಂದ ಭತ್ತದ ಕೃಷಿ, ಬಾಳೆ ಕೃಷಿಯನ್ನು ರೈತ ಕೈಬಿಟ್ಟಿದ್ದಾನೆ. ಇದರ ನಡುವೆ ಕಾಡುಹಂದಿ ಮತ್ತು ಮುಳ್ಳುಹಂದಿ ಹಾವಳಿಯನ್ನು ವರ್ಣಿಸಲು ಅಸಾಧ್ಯವಾಗಿದೆ. ರೈತ ಬೆಳೆದ ಬಾಳೆ, ಒಳ್ಳೆಮೆಣಸು, ಶುಂಠಿ, ಗೆಣಸು ಯಾವುದೇ ತರಕಾರಿಯನ್ನು ಬಿಡದೆ ನಾಶಪಡಿಸುತ್ತದೆ. ದೊರಕುತ್ತಿದ್ದ ಅಲ್ಪಸ್ವಲ್ಪ ಆದಾಯವು ಇಲ್ಲದಂತಾಗಿದೆ. ಇದರಿಂದ ಏನು ತೋಚದ ರೈತ ಕೃಷಿಯಿಂದ ಕೈಚೆಲ್ಲಿದ್ದಾನೆ. ರೈತನ ಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ. ಕಾಫಿ ಮತ್ತು ಒಳ್ಳೆಮೆಣಸಿಗೆ ಬೆಲೆ ಇಲ್ಲದ ಸಮಯದಲ್ಲಿ ತರಕಾರಿಯನ್ನಾದರೂ ಬೆಳೆದು ಜೀವಿಸುತ್ತಿದ್ದ ರೈತ ಅಸಹಾಯಕನಾಗಿದ್ದಾನೆ.

ಸರಕಾರ ಮತ್ತು ಅರಣ್ಯ ಇಲಾಖೆ ಈ ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಬೇಕಾಗಿದೆ. ಈ ಪ್ರಾಣಿಗಳು ಅರಣ್ಯದಲ್ಲಿ ವಾಸ ಮಾಡಲು ವ್ಯವಸ್ಥೆಯನ್ನು ಮಾಡಬೇಕಾಗಿದೆ.

- ಪಾಲೇಕಂಡ ರತ್ನ ಕರುಂಬಯ್ಯ, ಅರಮೇರಿ.