ಸೋಮವಾರಪೇಟೆ, ಡಿ. 21: ಜೀವನದಲ್ಲಿ ವಿದ್ಯಾರ್ಥಿಗಳು ವಿನಯ ಶೀಲತೆಯನ್ನು ಅಳವಡಿಸಿಕೊಂಡರೆ ಮಾತ್ರ ತಾವು ಕಲಿತ ವಿದ್ಯೆಗೆ ಬೆಲೆ ಇರುತ್ತದೆ ಎಂದು ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ನುಡಿದರು.

ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವಮಾನವ ಕುವೆಂಪು ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯೆಯ ಜೊತೆಗೆ ವಿನಯ, ಸಂಸ್ಕಾರ, ಸಂಸ್ಕøತಿಯನ್ನು ಅಳವಡಿಸಿಕೊಂಡಾಗ ದೇಶಕ್ಕೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬಹುದು. ಮಕ್ಕಳು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಪೋಷಕರೂ ಸಹ ಮಕ್ಕಳ ಆಸಕ್ತಿಗೆ ಪ್ರೋತ್ಸಾಹ ನೀಡಬೇಕು. ಮಕ್ಕಳ ಮನಸ್ಸು ಕಲ್ಮಶವಾಗಬಾರದು ಎಂದರು.

ಮುಖ್ಯ ಅತಿಥಿಯಾಗಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್. ಮಚ್ಚಾಡೋ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಕ್ರೀಡೆಯತ್ತಲೂ ಆಸಕ್ತಿ ಮೂಡಿಸಬೇಕು. ದೇಹ ಸದೃಢವಿದ್ದರೆ ಮನಸ್ಸೂ ಸಹ ಸದೃಢವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ನಿಸ್ವಾರ್ಥತೆಯನ್ನು ಮೂಡಿಸುವ ಕಾರ್ಯ ಶಿಕ್ಷಕರು ಮತ್ತು ಪೋಷಕರಿಂದ ಆಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗರ ಸಂಘ ಹಾಗೂ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾತನಾಡಿ, ಮಕ್ಕಳ ಕಲಿಕೆ ಬಗ್ಗೆ ಪೋಷಕರು ಹೆಚ್ಚಿನ ಗಮನ ಹರಿಸಬೇಕು. ಕ್ರೀಡೆಗಳಿಗೂ ಪ್ರೋತ್ಸಾಹಿಸಬೇಕು ಎಂದರು.

ಶಾಲಾ ವಾರ್ಷಿಕ ವರದಿಯನ್ನು ಮುಖ್ಯಶಿಕ್ಷಕಿ ಮಿಲ್ಫ್ರೆಡ್ ಗೋನ್ಸಾಲ್ವೇಸ್ ಮಂಡಿಸಿದರು. ಕಾರ್ಯಕ್ರಮದಲ್ಲಿ ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಚ್ಚಾಡೋ ಅವರುಗಳನ್ನು ವಿದ್ಯಾಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ರಾಘವ, ಕಾರ್ಯದರ್ಶಿ ಗಣಪತಿ, ಖಜಾಂಚಿ ಸಿ.ಎಸ್. ಸುರೇಶ್, ಬಾತ್ಮೀದಾರ ಜಗದೀಶ್, ನಿರ್ದೇಶಕರುಗಳಾದ ಪೊನ್ನಪ್ಪ, ಶಿವಯ್ಯ, ಬಸಪ್ಪ, ಪಾಪಯ್ಯ, ಭಾರತಿ ಜೋಯಪ್ಪ, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.