ವೀರಾಜಪೇಟೆ, ಡಿ. 21: ವೀರಾಜಪೇಟೆಯ ಜೂನಿಯರ್ ಕಾಲೇಜಿನ ಒತ್ತಾಗಿ ಕಳೆದ ಒಂಭತ್ತು ವರ್ಷಗಳಿಂದ ನಿರ್ಮಾಣ ಗೊಳ್ಳುತ್ತಿರುವ ಆಧುನಿಕ ಒಳಾಂಗಣ ಕ್ರೀಡಾಂಗಣ ಮುಂದಿನ ಫೆಬ್ರವರಿ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಅದೇ ತಿಂಗಳು ಇದನ್ನು ಸಾರ್ವಜನಿಕ ಸೇವೆಗೆ ಅರ್ಪಿಸಲಾಗುವುದೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.ಮಡಿಕೇರಿಯ ಜಿಲ್ಲಾ ಯುವಜನ ಹಾಗೂ ಸೇವಾ ಕ್ರೀಡಾ ಇಲಾಖೆಯಿಂದ ನಿರ್ಮಿಸಲಾದ ಈ ಕ್ರೀಡಾಂಗಣಕ್ಕೆ 2011ರಲ್ಲಿ ಚಾಲನೆ ನೀಡಲಾಗಿತ್ತು. 2011ರ ರಾಜ್ಯ ಸರಕಾರದ ಬಡ್ಜೆಟ್‍ನಲ್ಲಿ ಈ ಆಧುನಿಕ ಕ್ರೀಡಾಂಗಣಕ್ಕೆ ರೂ. 5 ಕೋಟಿ ಅನುದಾನ ಕಲ್ಪಿಸಿದ ನಂತರ ರೂ. ಮೂರು ಕೋಟಿ ಹದಿನೈದು ಲಕ್ಷಕ್ಕೆ ಗುತ್ತಿಗೆ ನೀಡಲಾಗಿತ್ತು.ಈ ಕ್ರೀಡಾಂಗಣ ನಿರ್ವಹಣೆ ಯನ್ನು ಸ್ಥಳೀಯ ಪಟ್ಟಣ ಪಂಚಾಯಿತಿಗೆ ವಹಿಸಲಾಗುವುದು. ಕ್ರೀಡಾಂಗಣದ ಉಸ್ತುವಾರಿಗೆ ಜಿಲ್ಲೆಯ ಪ್ರಮುಖರನ್ನೊಳಗೊಂಡಂತೆ ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ಜಿಲ್ಲಾ ಸಮಿತಿಯನ್ನು ರಚಿಸಲಾಗುವುದು. ಈಗಾಗಲೇ ಶೇ. 90 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ಸಣ್ಣಪುಟ್ಟ ಕಾಮಗಾರಿಗಳು ಇನ್ನು ಕೇವಲ 30 ದಿನಗಳ ಅವಧಿಯಲ್ಲಿ ಮುಗಿಯಲಿದೆ. ಕ್ರೀಡಾಂಗಣದಲ್ಲಿ ಆಯ್ದ ಪಂದ್ಯಾಟಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಜಿಲ್ಲಾಧಿಕಾರಿ ಅವರೊಂದಿಗೆ ಜಿಲ್ಲಾ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿ ಜಯಲಕ್ಷ್ಮಿ, ಕೊಡಗು ಫುಟ್‍ಬಾಲ್ ಅಸೋಶಿಯೇಶನ್‍ನ (ಮೊದಲ ಪುಟದಿಂದ) ಅಧ್ಯಕ್ಷ ಎನ್.ಯು. ಮೋಹನ್ ಅಯ್ಯಪ್ಪ, ತಾಲೂಕು ತಹಶೀಲ್ದಾರ್ ಮಹೇಶ್, ವೀರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಮತ್ತಿತರರು ಭೇಟಿ ನೀಡಿದರು.
ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿಯ ಸಮ್ಮುಖದಲ್ಲಿ ನಡೆದ ಕಂದಾಯ ಅಧಿಕಾರಿಗಳು, ಸಿಬ್ಬಂದಿಗಳ ಸಭೆಯಲ್ಲಿ ವೀರಾಜಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಪರಿಹಾರ ಕಾರ್ಯದ ಕುರಿತು ಪರಿಶೀಲನೆ ನಡೆಸಿದ ನಂತರ ಜಿಲ್ಲಾಧಿಕಾರಿ ಅನೀಸ್ ಅವರು ಇಲ್ಲಿನ ಒಳಾಂಗಣ ಕ್ರೀಡಾಂಗಣದ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.