ಸಿದ್ದಾಪುರ, ಡಿ. 21: ಕಳೆದ ಎರಡು ದಿನಗಳಿಂದ ತ್ಯಾಗತ್ತೂರು ಗ್ರಾಮದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಕಾಡಾನೆ ಸಾವನ್ನಪ್ಪಿದೆ. ತ್ಯಾಗತ್ತೂರು ಗ್ರಾಮದ ಕಾಫಿ ತೋಟವೊಂದರಲ್ಲಿ ಹೆಣ್ಣು ಕಾಡಾನೆಯೊಂದು ಅನಾರೋಗ್ಯದಿಂದ ಕಳೆದೆರಡು ದಿನಗಳ ಹಿಂದೆ ಕುಸಿದು ಬಿದ್ದು ಜೀವನ್ಮರಣ ಸ್ಥಿತಿಯಲ್ಲಿತ್ತು. ಕುಸಿದು ಬಿದ್ದಿದ್ದ ಕಾಡಾನೆಗೆ ವನ್ಯ ಜೀವಿ ವೈದ್ಯಾಧಿಕಾರಿ ಡಾ. ಮುಜೀಬ್ ಅವರು ಚಿಕಿತ್ಸೆ ನೀಡಿದ್ದರು. ಆದರೆ ಕಾಡಾನೆಯು ಚಿಕಿತ್ಸೆಗೆ ಯಾವುದೇ ರೀತಿಯಲ್ಲಿ ಸ್ಪಂದಿಸದೆ ಆಹಾರ ಮತ್ತು ನೀರನ್ನು ಸೇವಿಸದೆ ಸಂಪೂರ್ಣವಾಗಿ ಬಳಲಿತ್ತು. ಬಿದ್ದ ಜಾಗದಿಂದ ಮೇಲಕ್ಕೇಳಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಹೆಚ್ಚಿನ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ದುಬಾರೆಯ ಸಾಕಾನೆ ಶಿಬಿರದಿಂದ ಐದು ಸಾಕಾನೆಗಳನ್ನು ಕರೆಸಿ ನೆಲಕ್ಕುರುಳಿದ್ದ ಕಾಡಾನೆಯನ್ನು ಮೇಲೆಕೆತ್ತಲು ಅರಣ್ಯ ಇಲಾಖೆ ಪ್ರಯತ್ನಿಸಿತು. ಆದರೆ ಕಾಡಾನೆ ಮೇಲೇಳಲೇ ಇಲ್ಲ. ಹೆಚ್ಚಿನ ಚಿಕಿತ್ಸೆ ನೀಡಿದರೂ ಕೂಡ ಚಿಕಿತ್ಸೆಗೆ ಸ್ಪಂದಿಸದ ಕಾಡಾನೆಯು ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದೆ.ಸಾವನ್ನಪ್ಪಿದ ಕಾಡಾನೆಯ ಮೃತದೇಹವನ್ನು ವನ್ಯ ಜೀವಿ ವೈದ್ಯಾಧಿಕಾರಿ ಡಾ. ಮುಜೀಬ್ ಅವರು ಆನೆ ಬಿದ್ದ ಜಾಗದ ಬಳಿ ನಿತ್ರಾಣಗೊಂಡಿದ್ದ ಕಾಡಾನೆ ಸಾವು(ಮೊದಲ ಪುಟದಿಂದ) ಮರಣೋತ್ತರ ಪರೀಕ್ಷೆ ನಡೆಸಿ, ನಂತರ ಕಾಡಾನೆಯ ಮೃತದೇಹಕ್ಕೆ ಪೂಜೆ ಸಲ್ಲಿಸಿ ಜೆಸಿಬಿಯ ಮುಖಾಂತರ ತೆಗೆದಿದ್ದ ಗುಂಡಿಯಲ್ಲಿ ಹೂಳಲಾಯಿತು.
ಈ ಸಂದರ್ಭದಲ್ಲಿ ಕುಶಾಲನಗರ ವಲಯ ಎಸಿಎಫ್ ನೆಹರು, ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಸುಬ್ರಾಯ, ಅರಣ್ಯ ರಕ್ಷಕ ಚರಣ್ ಕುಮಾರ್, ಗ್ರಾಮದ ಪ್ರಮುಖರಾದ ಎಂ.ಎಂ ಬಿದ್ದಪ್ಪ, ಎಂ.ಎಂ ಶಿವ ಕುಮಾರ್, ಮನು ಮಹೇಶ್, ಎಂ.ಕೆ ಗಿರೀಶ್, ಎಂ.ಎ ಸುದೀಶ್, ದಾಮೋದರ, ರಮೇಶ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.