ಸೋಮವಾರಪೇಟೆ, ಡಿ. 21: ಗದ್ದೆಯನ್ನು ಉತ್ತು, ಬಿತ್ತು ಫಸಲಿಗಾಗಿ ಕಾಯುತ್ತಿದ್ದ ಕೃಷಿಕ ವರ್ಗ ಇದೀಗ ಧಾನ್ಯ ಲಕ್ಷ್ಮೀಯನ್ನು ಮನೆ ತುಂಬಿಸಿಕೊಳ್ಳುವತ್ತ ಚಿತ್ತ ಹರಿಸಿದೆ.

ಭತ್ತದ ಕಣಜವೆಂದೇ ಹೆಸರು ಪಡೆದಿರುವ ಸೋಮವಾರಪೇಟೆ ತಾಲೂಕಿನಾದ್ಯಂತ ಭತ್ತ ಕೊಯ್ಲು ಭರದಿಂದ ಸಾಗುತ್ತಿದ್ದು, ಕಟಾವು ಮಾಡಿದ ಭತ್ತವನ್ನು ಬಡಿದು, ‘ಹಡ್ಲು ಹೊಡೆಯುವ’ ಕಾರ್ಯ ಎಲ್ಲೆಡೆ (ಹುಲ್ಲಿನಿಂದ ಭತ್ತವನ್ನು ಬೇರ್ಪಡಿಸುವದು) ಕಂಡುಬರುತ್ತಿದೆ.

ಕಳೆದ ಒಂದು ತಿಂಗಳಿನಿಂದ ಅಕಾಲಿಕ ಮಳೆ ಹಾಗೂ ಮೋಡದ ವಾತಾವರಣದಿಂದ ಭತ್ತ ಕೊಯ್ಲ ಹಾಗೂ ಕಾಫಿ ಕೊಯ್ಲು ವಿಳಂಬ ಮಾಡಲಾಗಿತ್ತು. ಕಳೆದ ಎರಡು ವಾರದಿಂದ ಬಿಸಿಲಿನ ವಾತಾವರಣವಿದ್ದು, ಕಾಫಿ ಕೊಯ್ಲು ಭರದಿಂದ ಸಾಗುತ್ತಿರುವ ಮಧ್ಯೆಯೇ ಭತ್ತದ ಕೊಯ್ಲು ಸಹ ಬಿರುಸು ಪಡೆದುಕೊಂಡಿದೆ.

ಸ್ಥಳೀಯ ಕಾರ್ಮಿಕರು ಕಾಫಿ ಕೊಯ್ಲು ಮತ್ತು ಭತ್ತದ ಕೊಯ್ಲು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೆ, ಹೊರ ಜಿಲ್ಲೆಗಳಿಂದ ಆಗಮಿಸಿರುವ ಕಾರ್ಮಿಕರು ಕಾಫಿ ಕೊಯ್ಲಿನಲ್ಲಿ ತೊಡಗಿಸಿಕೊಂಡಿದ್ದಾರೆ.

ಕೆಲ ವರ್ಷಗಳ ಹಿಂದೆ ಭತ್ತ ಕೊಯ್ಲಿನ ಸಂದರ್ಭದಲ್ಲಿ ಬಯಲುಸೀಮೆಯಿಂದ ಕಾರ್ಮಿಕರ ತಂಡಗಳು ಗ್ರಾಮಗಳಿಗೆ ಬಂದು ತಿಂಗಳುಗಟ್ಟಲೆ ಇದ್ದು, ಭತ್ತ ಕೆಲಸ ಮುಗಿಸಿ ಹೋಗುತ್ತಿದ್ದರು. ಇದೀಗ ಅಂತಹ ಕಾರ್ಮಿಕರು ಕಾಫಿ ಕೊಯ್ಲಿನತ್ತ ಹೆಚ್ಚಿನ ಆಸಕ್ತಿ ವಹಿಸಿರುವ ಪರಿಣಾಮ, ಸ್ಥಳೀಯ ಕಾರ್ಮಿಕರನ್ನೇ ಭತ್ತದ ಕೊಯ್ಲಿಗೆ ನೆಚ್ಚಿಕೊಳ್ಳುವಂತಾಗಿದೆ.

ಇನ್ನು ಗ್ರಾಮೀಣ ಭಾಗದ ಕೆಲವೆಡೆಗಳನ್ನು ಸ್ಥಳೀಯರೇ ಹೊಂದಾಣಿಕೆಯಿಂದ ಭತ್ತದ ಕೊಯ್ಲಿನಲ್ಲಿ ತೊಡಗಿಸಿಕೊಂಡಿದ್ದಾರೆ. ‘ಮುಯ್ಯಾಳು’ ಮಾದರಿಯಲ್ಲಿ ಕೆಲಸ ನಡೆಯುತ್ತಿದೆ. ತಾಲೂಕಿನಲ್ಲಿ 9240 ಹೆಕ್ಟೇರ್‍ನಲ್ಲಿ ಭತ್ತ ಕೃಷಿ ಮಾಡಲಾಗಿದೆ. ತುಂಗ, ತನು, ಐ.ಆರ್.64, ಬಾಂಗ್ಲಾ ರೈಸ್, ಅತೀರಾ ತಳಿಗಳು ಈಗಾಗಲೇ ಕೊಯ್ಲಿಗೆ ಬಂದಿವೆ.

ಶಾಂತಳ್ಳಿ ಹೋಬಳಿಯ ಕೊತ್ನಳ್ಳಿ, ಕುಡಿಗಾಣ, ಮಲ್ಲಳ್ಳಿ, ನಾಡ್ನಳ್ಳಿ, ಬೆಂಕಳ್ಳಿ, ಕೂತಿ, ತೋಳೂರುಶೆಟ್ಟಳ್ಳಿ, ಯಡೂರು, ಹುದುಗೂರು, ಯಡವನಾಡು, ಮದಲಾಪುರ, ಅಬ್ಬೂರುಕಟ್ಟೆ, ಗಣಗೂರು, ಗೋಣಿಮರೂರು ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಕೊಯ್ಲು ಬಿರುಸುಗೊಂಡಿದೆ.

ಈ ಮಧ್ಯೆ ಕಾಡುಹಂದಿ, ಕಾಡೆಮ್ಮೆ, ಕಾಡಾನೆಗಳ ಧಾಳಿಯಿಂದಾಗಿ ತಾಲೂಕಿನ ಸೂರ್ಲಬ್ಬಿ, ಕಿಕ್ಕರಳ್ಳಿ, ಕುಂಬಾರಗಡಿಗೆ, ಮಂಕ್ಯಾ, ಹರಗ, ಮೂವತ್ತೊಕ್ಕಲು, ಹೆಗ್ಗಡಮನೆ, ಬಾಣಾವರ, ಅರಶಿಣಗುಪ್ಪೆ. ಅಳಿಲುಗುಪ್ಪೆ, ಸಿದ್ದಲಿಂಗಪುರ ಗ್ರಾಮಗಳಲ್ಲಿ ಭತ್ತದ ಕೃಷಿಗೆ ಹಾನಿಯಾಗಿದ್ದು, ರೈತರು ನಷ್ಟ ಅನುಭವಿಸಿದ್ದಾರೆ. ಇದರೊಂದಿಗೆ ಕೊಡ್ಲಿಪೇಟೆ ಶನಿವಾರಸಂತೆ ಹೋಬಳಿಗಳ ಅನೇಕ ಗ್ರಾಮಗಳಲ್ಲಿ ಕಾಡಾನೆಗಳು ಕಾಟದಿಂದ ಫಸಲು ಹಾನಿಯಾಗಿದೆ.

ಬಿಸಿಲು ಇರುವದರಿಂದ ಈಗ ಭತ್ತ ಕೊಯ್ಲಿಗೆ ಸೂಕ್ತ ಸಮಯವಾಗಿದೆ. ಶೇ.17ರಷ್ಟು ತೇವಾಂಶದಲ್ಲಿ ಭತ್ತವನ್ನು ಒಣಗಿಸಬೇಕು. ಸಾಮಾನ್ಯ ಭತ್ತಕ್ಕೆ ಕ್ವಿಂಟಲ್‍ಗೆ 1815 ರೂ., ಎ.ಗ್ರೇಡ್ ಭತ್ತಕ್ಕೆ 1835 ರೂ. ನಂತೆ ಸರ್ಕಾರವೇ ಖರೀದಿ ಮಾಡುತ್ತದೆ. ಆಹಾರ ಮತ್ತು ಸರಬರಾಜು ಇಲಾಖೆ ಸದ್ಯದಲ್ಲೇ ಖರೀದಿ ಕೇಂದ್ರವನ್ನು ತೆರೆಯಲಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ತಿಳಿಸಿದ್ದಾರೆ.