ಸೋಮವಾರಪೇಟೆ, ಡಿ. 21: ತಾಲೂಕಿನ ಗೌಡಳ್ಳಿ, ನಿಡ್ತ, ಶನಿವಾರಸಂತೆ, ದುಂಡಳ್ಳಿ, ಹಂಡ್ಲಿ, ಬೆಸೂರು ಹಾಗೂ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ರೂ. 10.44 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ವಿವಿಧ ರಸ್ತೆ ಹಾಗೂ ಕಟ್ಟಡ ಕಾಮಗಾರಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6 ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರೂ. 4.29 ಕೋಟಿ ಅನುದಾನ ಬಿಡುಗಡೆಯಾಗಿದ್ದು, ರೂ. 99ಲಕ್ಷ ವೆಚ್ಚದ ಚನ್ನಾಪುರ-ಹಿರಿಕರ ಗ್ರಾಮ ಸಂಪರ್ಕ ರಸ್ತೆ, ರೂ. 1.25ಕೋಟಿ ವೆಚ್ಚದ ಕೊರ್ಲಳ್ಳಿ ಗ್ರಾಮದ ರಸ್ತೆ, ರೂ. 95ಲಕ್ಷ ವೆಚ್ಚದ ಹೆಗ್ಗಳ-ಕೂಗೂರು ಸಂಪರ್ಕ ರಸ್ತೆ, ರೂ. 80 ಲಕ್ಷ ವೆಚ್ಚದ ಮಟ್ನಹಳ್ಳಿ ರಸ್ತೆ, ರೂ. 10 ಲಕ್ಷ ವೆಚ್ಚದ ಶುಂಠಿ ರಸ್ತೆ ಅಭಿವೃದ್ಧಿಗೆ ಶಾಸಕರು ಚಾಲನೆ ನೀಡಿದರು. ನಂತರ ಮಾತನಾಡಿದ ರಂಜನ್, ರಸ್ತೆ ಕಾಮಗಾರಿ ಕಳಪೆಯಾಗದಂತೆ ಗ್ರಾಮಸ್ಥರು ಎಚ್ಚರ ವಹಿಸಬೇಕು. ರಸ್ತೆ ನಿರ್ಮಾಣಕ್ಕಿಂತ ಮೊದಲು ಚರಂಡಿಯನ್ನು ಕಡ್ಡಾಯವಾಗಿ ನಿರ್ಮಿಸಬೇಕು. ಮಳೆ ನೀರು ರಸ್ತೆಯಲ್ಲೇ
(ಮೊದಲ ಪುಟದಿಂದ) ಹರಿದರೆ ರಸ್ತೆ ಹಾಳಾಗುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸುವ ಸಂದರ್ಭ ಗ್ರಾಮಸ್ಥರು ಅಲ್ಪಸ್ವಲ್ಪ ಜಾಗವನ್ನು ಒಳ್ಳೆ ಉದ್ದೇಶಕ್ಕೆ ಬಿಟ್ಟುಕೊಡಬೇಕು. ಗ್ರಾಮಾಭಿವೃದ್ಧಿ ಮಂಡಳಿಯ ಪದಾಧಿಕಾರಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಕುಸುಮಾ ಅಶ್ವಥ್, ಗೌಡಳ್ಳಿ ಗ್ರಾಪಂ ಅಧ್ಯಕ್ಷೆ ನಾಗರತ್ನ, ಪ್ರಮುಖರಾದ ಸಿ.ಎನ್. ಅಶ್ವಥ್, ಎಸ್.ಬಿ.ಭರತ್ ಕುಮಾರ್, ಗೌಡಳ್ಳಿ ಸುನಿಲ್, ಎಚ್.ಎನ್. ಶಿವರಾಜ್, ಎಚ್.ಆರ್. ಮುತ್ತಣ್ಣ, ಎಚ್.ಪಿ. ರಾಜಪ್ಪ, ಎಸ್.ಆರ್. ಸೋಮೇಶ್, ಎಚ್.ಎಂ. ಜಿತೇಂದ್ರ, ಹೇಮಂತ್, ಧರ್ಮಾಚಾರಿ, ವಿಠಲ್, ಪ್ರೇಮ್, ಇಂಜಿನಿಯರ್ ವೆಂಕಟೇಶ್ ನಾಯಕ್, ಗುತ್ತಿಗೆದಾರ ಪುರುಷೋತ್ತಮ್ ಮತ್ತಿತರರು ಇದ್ದರು.
ನಂತರ ನಿಡ್ತ ಗ್ರಾ.ಪಂ. ವ್ಯಾಪ್ತಿಯಲ್ಲಿ 25 ಲಕ್ಷ, ಶನಿವಾರಸಂತೆ ಗ್ರಾ.ಪಂ. ವ್ಯಾಪ್ತಿಯಲ್ಲಿ 1.45 ಕೋಟಿ, ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ 1.75 ಕೋಟಿ, ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ 98 ಲಕ್ಷ, ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ 68 ಲಕ್ಷ ಹಾಗೂ ಬೆಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿ 95 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳಿಗೆ ಚಾಲನೆ ನೀಡಿದರು.