ಮಡಿಕೇರಿ, ಡಿ. 21: ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ಪೌರತ್ವ ಕಾಯ್ದೆ ಹಾಗೂ ಮಂಗಳೂರು ಗೋಲಿಬಾರ್ ಪ್ರಕರಣ ಖಂಡಿಸಿ, ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮುಸ್ಲಿಂ ವರ್ತಕರು ಇಂದು ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಸ್ವಯಂ ಪ್ರೇರಿತ ಬಂದ್ ನಡೆಸಿದರು.ಇಂದು ಬೆಳಿಗ್ಗೆಯಿಂದಲೇ ಜಿಲ್ಲಾ ಕೇಂದ್ರ ಮಡಿಕೇರಿಯ ಈ ಸಮುದಾಯದ ವರ್ತಕರು ತಮ್ಮ ದೈನಂದಿನ ವ್ಯಾಪಾರ ನಿರ್ವಹಿಸದೆ ವ್ಯಾಪಾರೋದ್ಯಮಗಳನ್ನು ಸ್ಥಗಿತಗೊಳಿಸಿ ಮೌನ ಪ್ರತಿಭಟನೆ ಸಲ್ಲಿಸಿರುವುದು ಗೋಚರಿಸಿತು. ನಗರದ ಬಸ್ ನಿಲ್ದಾಣ ಸುತ್ತಮುತ್ತ, ಶಾಲಾ-ಕಾಲೇಜು ರಸ್ತೆ, ಇಂದಿರಾಗಾಂಧಿ ವೃತ್ತ, ಚಿಕ್ಕಪೇಟೆ, ಕೊಹಿನೂರು ರಸ್ತೆ, ರೇಸ್ ಕೋರ್ಸ್ ರಸ್ತೆ, ಮಾರುಕಟ್ಟೆ ಪ್ರದೇಶ, ಮಹದೇವಪೇಟೆ ಮುಂತಾದೆಡೆಗಳಲ್ಲಿ ಎಲ್ಲ ವ್ಯಾಪಾರ ವಹಿವಾಟುಗಳನ್ನು ಮುಸ್ಲಿಂ ಸಮುದಾಯ ಸ್ಥಗಿತಗೊಳಿಸಿದ ಚಿತ್ರಣ ಕಂಡುಬಂತು.
ಕಡಂಗ: ಅಲ್ಲದೆ ವೀರಾಜಪೇಟೆ ತಾಲೂಕಿನ ಕಡಂಗ ಪಟ್ಟಣದಲ್ಲಿ ಕೂಡ ಮುಸ್ಲಿಂ ಸಮುದಾಯದ ವರ್ತಕರು ಎಲ್ಲ ಮಳಿಗೆಗಳನ್ನು ಮುಚ್ಚುವದರೊಂದಿಗೆ, ಪೌರತ್ವ ಕಾಯ್ದೆ ಹಾಗೂ ಮಂಗಳೂರಿನಲ್ಲಿ ಘಟಿಸಿರುವ ಗೋಲಿಬಾರ್ ಪ್ರಕರಣ ವಿರುದ್ಧ ಮೌನ ಪ್ರತಿಭಟನೆ ನಡೆಸಿರುವ ದೃಶ್ಯ ಎದುರಾಯಿತು. ಈ ಎರಡು ಕಡೆಗಳಲ್ಲಿ ದೈನಂದಿನ ಜನಜಂಗುಳಿ ಗೋಚರಿಸಲಿಲ್ಲ. ಪೊಲೀಸ್ ಇಲಾಖೆ ಕಟ್ಟೆಚ್ಚರದೊಂದಿಗೆ ಶಾಂತಿ ಕದಡದಂತೆ ಮುಂಜಾಗ್ರತಾ ಕ್ರಮಕೈಗೊಂಡಿತ್ತು.
ಅಲ್ಲಲ್ಲಿ ಸೂಕ್ಷ್ಮ ಸ್ಥಳಗಳನ್ನು ಗುರುತಿಸಿ ಪೊಲೀಸ್ ಸಿಬ್ಬಂದಿ ಹಾಗೂ ಕರ್ನಾಟಕ ಮೀಸಲು ಪೊಲೀಸ್ ತುಕಡಿ ನಿಯೋಜನೆಗೊಳಿಸಿದ್ದು ಕಂಡುಬಂತು.