ಮಡಿಕೇರಿ, ಡಿ.21 : ಪೌರತ್ವ ತಿದ್ದುಪಡಿ ಹಾಗೂ ಪೌರತ್ವ ನೋಂದಣಿ ಕಾಯ್ದೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದರೂ, ಕೇಂದ್ರ ಸರಕಾರ ಜನರ ಅಹವಾಲನ್ನು ಆಲಿಸದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಜಾತ್ಯತೀತ ಸಂಘಟನೆಗಳ ಒಕ್ಕೂಟ, ಇದರ ವಿರುದ್ಧದ ಹೋರಾಟವನ್ನು ತಾರ್ಕಿಕ ಅಂತ್ಯ ಕಾಣುವವರೆಗೂ ಮುಂದುವರಿಸಲಿರುವುದಾಗಿ ಘೋಷಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರು, ನಿಷೇಧಾಜ್ಞೆಗಳ ಮೂಲಕ ಜನರ ಧ್ವನಿಯನ್ನು ಅಡಗಿಸುವ ಪ್ರಯತ್ನವನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಮಾಡುತ್ತಿವೆ ಎಂದು ಆರೋಪಿಸಿದರು. ನಿಷೇಧಾಜ್ಞೆಯ ಹಿನ್ನೆಲೆಯಲ್ಲಿ ಹೋರಾಟ ಸ್ಥಗಿತವಾಗಿದ್ದರೂ, ಅದು ಅಂತ್ಯವಾಗಿಲ್ಲ. ಬದಲಾಗಿ ಆರಂಭ ವಾಗಿದೆ, ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಹಿಂಪಡೆಯುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ಪೌರತ್ವವನ್ನು ಯಾವುದೇ ಧರ್ಮದ ಆಧಾರದಲ್ಲಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಹೀಗಿದ್ದರೂ, ಕೇಂದ್ರ ಸರಕಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದಲ್ಲಿರುವ ಅಧಿಕಾರದಲ್ಲಿ ರುವ ಬಿಜೆಪಿ ರಾಜಕೀಯ ಮೇಲುಗೈ ಸಾಧಿಸಲು ಈ ಕಾಯ್ದೆಗಳನ್ನು ಜಾರಿ ಗೊಳಿಸಿದೆಯಾದರೂ, ಅದು ಸಾಧ್ಯವಿಲ್ಲ ಎಂದು ಹೇಳಿದರು.
ಮಂಗಳೂರು ಘಟನೆಗೆ ಪೊಲೀಸ್ ಕಮೀಷನರ್ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಹಾಗೂ ಗೋಲಿಬಾರ್‍ನಿಂದ ಸಾವಿಗೀಡಾದವರ ಕುಟುಂಬಕ್ಕೆ ಸರಕಾರ ತಲಾ ರೂ. 25 ಲಕ್ಷ ಪರಿಹಾರ ನೀಡಬೇಕು. ಅಲ್ಲದೆ ಈ ಘಟನೆಗೆ ಸಂಬಂಧಿಸಿದಂತೆ ಸರಕಾರ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರುಗಳು ಒತ್ತಾಯಿಸಿದರು.
ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮೀನ್ ಮೊಹ್ಸಿನ್ ಮಾತನಾಡಿ ಪೌರತ್ವದ ತೀರ್ಮಾನ ಧರ್ಮ ಆಧಾರಿತವಾಗಿರಬಾರದು. ದೇಶದಲ್ಲಿ ರುವ ಅಕ್ರಮ ನುಸುಳುಕೋರರನ್ನು ಹೊರಗಟ್ಟಲು 1964ರಲ್ಲೇ ಕಾನೂನು ಜಾರಿಗೊಂಡು ಸುಮಾರು 2.50 ಲಕ್ಷ ಮಂದಿಯನ್ನು ಅಸ್ಸಾಂನಿಂದ ಹೊರಗಟ್ಟಲಾಗಿತ್ತು. ಅಲ್ಲದೆ ಇನ್ನು ಯಾವುದೇ ನುಸುಳುಕೋರರು ರಾಜ್ಯದಲ್ಲಿಲ್ಲ ಎಂಬುದನ್ನು ಅಲ್ಲಿನ ಅಂದಿನ ಮುಖ್ಯಮಂತ್ರಿಯೇ ಘೋಷಿಸಿದ್ದರು. ದೇಶದ ಗಡಿಗಳಲ್ಲಿ ಗಡಿಭದ್ರತಾ ಪಡೆಗಳು ಕಾರ್ಯ ನಿರ್ವಹಿಸುತ್ತಿದ್ದರೂ, ಮತ್ತೆ ದೇಶದೊಳಗೆ ಅಕ್ರಮವಾಗಿ ನುಸುಳಿ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಒಂದು ವೇಳೆ ದೇಶದಲ್ಲಿ ಆ ರೀತಿಯಾಗಿ ಅಕ್ರಮವಾಗಿ ನುಸುಳಿ ಬಂದವರಿದ್ದರೆ ಎಲ್ಲರನ್ನು ಹೊರ ಗಟ್ಟಬೇಕು. ಅದರ ಬದಲು ಧರ್ಮದ ಆಧಾರದಲ್ಲಿ ಕೆಲವರನ್ನು ಮಾತ್ರ ಹೊರಗಟ್ಟುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.
ಸಿಪಿಐಎಂಎಲ್ ರೆಡ್‍ಸ್ಟಾರ್ ಪಕ್ಷದ ರಾಜ್ಯ ಕಾರ್ಯದರ್ಶಿ ಡಿ.ಎಸ್. ನಿರ್ವಾಣಪ್ಪ ಮಾತನಾಡಿ, ದೇಶದಲ್ಲಿ ತಮ್ಮ ಹಕ್ಕುಗಳನ್ನು ಕೇಳಲು ಪ್ರತಿಯೊಬ್ಬ ಪ್ರಜೆಗೂ ಅಧಿಕಾರವಿದ್ದು, ಹಕ್ಕುಗಳನ್ನು ಕೇಳುವವರನ್ನೇ ಗುಂಡಿಟ್ಟು ಕೊಲ್ಲುವುದು ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಆರೋಪಿಸಿದರಲ್ಲದೆ, ಪೌರತ್ವ ಕಾಯ್ದೆಗೆ ಸಂಬಂಧಿಸಿದ ವಿವಾದ ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಟ ಮುಂದುವರಿಸುತ್ತೇವೆ.
ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಟಿ.ಹೆಚ್.ಅಬೂಬಕ್ಕರ್ ಮಾತನಾಡಿ, ಮಂಗಳೂರಿನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಗುಂಡು ಹಾರಿಸಿ ಕೊಲೆ ಮಾಡಿರುವುದರ ಹಿಂದೆ ಯಾವುದೋ ಕೈವಾಡವಿದೆ. ಸರಕಾರ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ಸಂಬಂಧಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸ ಬೇಕು ಎಂದು ಒತ್ತಾಯಿಸಿದರು.
ಬಹುಜನ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಸಣ್ಣಪ್ಪ ಅವರು ಮಾತನಾಡಿ, ಮಂಗಳೂರಿನಲ್ಲಿ ನಡೆದಿರುವುದು ಪೊಲೀಸರ ದೌರ್ಜನ್ಯ ಮತ್ತು ಕೊಲೆ ಎಂದು ಆರೋಪಿಸಿದರಲ್ಲದೆ, ಪೌರತ್ವ ಕಾಯ್ದೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಮುಸ್ಲಿಂ ಒಕ್ಕೂಟದ ಮುಖಂಡ ಪಿ.ಎಂ.ಖಾಸಿಂ ಮಾತನಾಡಿ, ಶಾಂತಿಯುತ ಪ್ರತಿಭಟನೆಯ ಮೂಲಕ ತಮ್ಮ ಹಕ್ಕುಗಳನ್ನು ಕೇಳುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ಆದರೆ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸುವ ಮೂಲಕ ರಾಜ್ಯ ಸರಕಾರ ಜನರ ಕೇಳುವ ಹಕ್ಕನ್ನು ಕಸಿದುಕೊಂಡಿದೆ ಎಂದು ದೂರಿದರು.
ಸಿಪಿಐಎಂಎಲ್‍ನ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ದೇಶದಾದ್ಯಂತ ಉದ್ವಿಗ್ನತೆಗೆ ಸರಕಾರವೇ ಕಾರಣವಾಗಿದ್ದು, ಜನರ ಪ್ರಶ್ನಿಸುವ ಹಕ್ಕನ್ನು ಸರಕಾರಗಳು ಮೊಟಕು ಗೊಳಿಸಿವೆ ಎಂದರಲ್ಲದೆ, ಪೌರತ್ವ ಕಾಯ್ದೆಯನ್ನು ಕೂಡಲೇ ರದ್ದುಪಡಿಸಬೇಕು ಎಂದರು.
ಕೇಂದ್ರ ಸರ್ಕಾರದ ವಿರುದ್ಧ ಜಿ.ಪಂ. ಸದಸ್ಯರ ಅಸಮಾಧಾನ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಜನರಿಗೆ ಬೇಡವಾದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಜಾತಿ, ಧರ್ಮಗಳ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಖಂಡನೀಯವೆಂದು ಕುಟ್ಟ ಕ್ಷೇತ್ರದ ಜಿ.ಪಂ ಸದಸ್ಯ ಮುಕ್ಕಾಟೀರ ಶಿವು ಮಾದಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರದ ಜನತೆಯನ್ನು ಒಗ್ಗೂಡಿಸಿ ದೇಶದ ಐಕ್ಯತೆ, ಸಮಗ್ರತೆಯನ್ನು ಕಂಡುಕೊಳ್ಳುವ ಪ್ರಯತ್ನಗಳಿಗೆ ಬದಲಾಗಿ ಕೇಂದ್ರ ಸರ್ಕಾರವು, ಜನವಿರೋಧಿ ನೀತಿಯ ಮೂಲಕ ರಾಜಕೀಯ ಮಾಡುತ್ತಿದೆ. ಈ ಬಗ್ಗೆ ಹೋರಾಟದ ಅಗತ್ಯ ವಿದೆಯೆಂದು ಅಭಿಪ್ರಾಯಿಸಿದರಲ್ಲದೆ, ಕಾಯ್ದೆಯನ್ನು ವಿರೋಧಿಸುವವರು ದೇಶದ್ರೋಹವೆನ್ನುವ ಬಿಜೆಪಿ ಹೇಳಿಕೆಯನ್ನು ಖಂಡಿಸಿದರು.
ಜನ ವಿರೋಧಿ ಕಾಯ್ದೆಗಳ ಮೂಲಕ ದೇಶ ವಾಸಿಗಳ ಪೌರತ್ವವನ್ನು ಪ್ರಶ್ನಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ. ಶ್ರೀ ಸಾಮಾನ್ಯನಿಗೆ ಬೇಡವಾದ ಕಾನೂನುಗಳನ್ನು ರೂಪಿಸಿ ಜಾರಿಗೆ ತರುವುದು ದೇಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆಂದು ಕಳವಳ ವ್ಯಕ್ತಪಡಿಸಿದರು.
ಸುಂಟಿಕೊಪ್ಪ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಲತೀಫ್ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಮುಸ್ಲಿಂ ಸಮುದಾಯ ವನ್ನು ಹೊರಗಿಟ್ಟಿರುವುದು ಸಮರ್ಪಕವಾದ ಕ್ರಮವಲ್ಲ ಎಂದರು.
ಅಸಮಾಧಾನ- ಕಾಯ್ದೆಯನ್ನು ವಿರೋಧಿಸಿ ಎಐಸಿಸಿಯೇ ಹೋರಾಟ ನಡೆಸುತ್ತಿದೆ. ಆದರೆ, ಕೊಡಗು ಜಿಲ್ಲಾ ಕಾಂಗ್ರೆಸ್ ಹೋರಾಟ ನಡೆಸದೆ ಮೌನವಾಗಿದೆಯೆಂದು ಲತೀಫ್ ಟೀಕಿಸಿ, ಈ ಬಗ್ಗೆ ಪ್ರಶ್ನಿಸಿದರೆ, ಹೈಕಮಾಂಡ್‍ನಿಂದ ಸೂಚನೆ ದೊರಕಿಲ್ಲ ಎನ್ನುವ ಕಾರಣ ನೀಡಲಾಗುತ್ತಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನಡೆ ಸರಿಯಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಮಂಗಲ ಕ್ಷೇತ್ರದ ತಾ.ಪಂ ಸದಸ್ಯ ಪಲ್ವಿನ್ ಪೂಣಚ್ಚ, ವೀರಾಜಪೇಟೆ ಪಟ್ಟಣ ಪಂಚಾಯ್ತಿ ಸದಸ್ಯ ಮಹಮ್ಮದ್ ರಫಿ ಹಾಗೂ ಹುದಿಕೇರಿ ವಲಯಾಧ್ಯಕ್ಷ ಮೀದೆರಿರ ನವೀನ್ ಉಪಸ್ಥಿತರಿದ್ದರು.