ಮಡಿಕೇರಿ, ಡಿ.21: ಬುದ್ಧ, ಬಸವ, ಅಂಬೇಡ್ಕರ್ ಮತ್ತು ಕುವೆಂಪು ಅವರ ಆಶಯದಂತೆ ಜಾತಿ ಹಾಗೂ ಧರ್ಮ ರಹಿತ ಸಮಾಜ ನಿರ್ಮಾಣ ಅಗತ್ಯ ಎಂದು ಮಕ್ಕಳ ತಜ್ಞ ಡಾ.ಬಿ.ಸಿ.ನವೀನ್ ಕುಮಾರ್ ಅವರು ಪ್ರತಿಪಾದಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು, ಕಸಾಪ ಮಡಿಕೇರಿ ಘಟಕ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ 115 ನೇ ಜನ್ಮ ದಿನಾಚರಣೆ ಪ್ರಯುಕ್ತ ಕುವೆಂಪು ಅವರ ‘ಬದುಕು ಬರಹ’ ಶೀರ್ಷಿಕೆಯಡಿ ಜಿಲ್ಲೆಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನಗರದ ಡಿ.ದೇವರಾಜ ಅರಸು ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕುವೆಂಪು ಅವರ ಕಥೆ, ಕವನ, ಸಾಹಿತ್ಯ, ಇಡೀ ಸಮಾಜಕ್ಕೆ ಬೆಳಕು ಚೆಲ್ಲುತ್ತದೆ. ಹಾಗೆಯೇ ರಾಮಾಯಣ ದರ್ಶನಂ ಸಾಹಿತ್ಯಕ್ಕೆ ಪುರಾಣದ ಬದಲಾಗಿ ಅವರು ಆಧ್ಯಾತ್ಮಿಕತೆಯ ಸ್ಪರ್ಶ ನೀಡಿದ್ದರು ಎಂದು ಡಾ.ಬಿ.ಸಿ.ನವೀನ್‍ಕುಮಾರ್ ಪ್ರತಿಪಾದಿಸಿದರು.

ಕನ್ನಡ ಭಾಷೆಯ ಆಸ್ಮಿತೆಯನ್ನು ಉಳಿಸಬೇಕು. ಸಾಹಿತ್ಯ ಕ್ಷೇತ್ರ ಸಂಘಟನಾತ್ಮಕವಾಗಿ ಬೆಳೆಯಬೇಕು. ಸಾಹಿತ್ಯವು ಹಲವು ಭೌದ್ಧಿಕ ವಿಕಸನಕ್ಕೆ ಸಹಕಾರಿಯಾಗಿದೆ ಎಂದು ಅವರು ಹೇಳಿದರು.

ಹಿರಿಯ ಪತ್ರಕರ್ತ ಎಚ್.ಟಿ.ಅನಿಲ್ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪುಸ್ತಕ ಮಳಿಗೆ ತೆರೆಯುವಂತಾಗಬೇಕು ಎಂದು ಸಲಹೆ ಮಾಡಿದರು.

ಹೊಸ ಹೊಸ ಕನ್ನಡ ಪುಸ್ತಕಗಳು ಬಂದಾಗ ಸಾಹಿತ್ಯಾಸಕ್ತರು ಮತ್ತು ಓದುಗರು ಕೊಂಡುಕೊಳ್ಳಲು ಪುಸ್ತಕ ಮಳಿಗೆ ಅತ್ಯಗತ್ಯವಾಗಿದ್ದು, ಮಳಿಗೆ ತೆರೆಯುವಂತಾಗಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್.ಎಂ.ಚಂಗಪ್ಪ ಮಾತನಾಡಿ ಕುವೆಂಪು ಸೇರಿದಂತೆ ಎಲ್ಲಾ ದಾರ್ಶನಿಕರ ಜೀವನ ಚರಿತ್ರೆಯನ್ನು ಯುವಜನರಿಗೆ ಪರಿಚಯಿಸುವಂತಾಗಬೇಕು ಎಂದು ಸಲಹೆ ಮಾಡಿದರು.

ಕನ್ನಡ ಸಾಹಿತ್ಯ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ಸಾಹಿತ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪರಿಷತ್ತು ಹೆಚ್ಚಿನ ಶ್ರಮ ವಹಿಸುತ್ತಿದೆ. ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದವರಿಗೆ ಪ್ರೋತ್ಸಾಹಿಸಿಕೊಂಡು ಬರಲಾಗಿದೆ ಎಂದರು.

ಇದೇ ಪ್ರಥಮ ಬಾರಿಗೆ ಕುವೆಂಪು ಅವರ ಬದುಕು ಬರಹ ಕುರಿತು ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾ. 29 ರಂದು ಕುವೆಂಪು ಜನ್ಮ ದಿನಾಚರಣೆ ಸಂದರ್ಭದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿದರು. ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಗೌರವ ಕಾರ್ಯದರ್ಶಿ ಬಾಳೆಯಡ ಕಿಶನ್ ಪೂವಯ್ಯ, ಡಾ.ದಯಾನಂದ, ಅಮೆಚೂರು ಲೋಕನಾಥ್, ಕೋಡಿ ಚಂದ್ರಶೇಖರ್, ಉ.ರಾ.ನಾಗೇಶ್, ಎಸ್.ಪಿ. ಪ್ರಸನ್ನ ಪ್ರಧಾನ ಕಾರ್ಯದರ್ಶಿ ಇತರರು ಇದ್ದರು.

ಎಸ್.ಎಂ.ಚಂಗಪ್ಪ, ಡಾ.ಬಿ.ಸಿ. ನವೀನ್ ಕುಮಾರ್, ಅಂಬೆಕಲ್ಲು ಕಶಾಲಪ್ಪ, ಎಚ್.ಟಿ.ಅನಿಲ್, ಮೋಹನ್ ಕುಮಾರ್ ಅವರನ್ನು ಕಸಾಪ ವತಿಯಿಂದ ಗೌರವಿಸಲಾಯಿತು. ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್ ಸ್ವಾಗತಿಸಿದರೆ, ಜಿಲ್ಲಾ ನಿರ್ದೇಶಕಿ ಉಷಾ ರಾಣಿ ನಿರೂಪಿಸಿ, ವಂದಿಸಿದರು. ಸಾಹಿತಿ ಎಸ್.ಎಲ್.ಶೇಷಗಿರಿ ರಾವ್ ನಿಧನಕ್ಕೆ ಇದೇ ಸಂದರ್ಭದಲ್ಲಿ ಸಂತಾಪ ಸೂಚಿಸಲಾಯಿತು.