ಸೋಮವಾರಪೇಟೆ, ಡಿ. 20: ಇಲ್ಲಿನ ಇಂದಿರಾಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಸ್ಥಳೀಯ ಸಾಕಮ್ಮನ ಬಂಗಲೆ ಎದುರಿನ ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿರುವ 33ನೇ ವರ್ಷದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕುಸುಬೂರು ಎಸ್ಟೇಟ್‍ನ ವ್ಯವಸ್ಥಾಪಕ ಕುಶಾಲಪ್ಪ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿ.ಪಂ. ಮಾಜಿ ಸದಸ್ಯ ಹೆಚ್.ಸಿ. ನಾಗೇಶ್ ಮಾತನಾಡಿ, ಉಕ್ಕಿನ ಮಹಿಳೆ ಎಂದೇ ಖ್ಯಾತನಾಮರಾಗಿದ್ದ ಇಂದಿರಾ ಗಾಂಧಿಯವರ ಹೆಸರಿನಲ್ಲಿ ಕಳೆದ 32 ವರ್ಷಗಳಿಂದ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿ ಕೊಂಡು ಬರುತ್ತಿರುವದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ರೀಡೆಗಳು ಪರಸ್ಪರ ಬಾಂಧವ್ಯ ಬೆಸೆಯುವ ವೇದಿಕೆಯಾಗಿದ್ದು, ಆ ಮೂಲಕ ದಿ. ಇಂದಿರಾಗಾಂಧಿ ಅವರ ಸಾಮಾಜಿಕ ಜೀವನವನ್ನು ಇಂದಿನ ಯುವ ಜನಾಂಗಕ್ಕೆ ಪರಿಚಯಿಸುವ ಕೆಲಸವನ್ನು ಸಂಘವು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ರೈತ ಸಂಘದ ಪ್ರಮುಖರಾದ ಡಿ.ಎಸ್. ನಿರ್ವಾಣಪ್ಪ, ಗ್ರಾಮೀಣ ಕ್ರೀಡೆಯೆಂದೇ ಕರೆಯಲ್ಪಡುತ್ತಿದ್ದ ಕಬಡ್ಡಿ ಪಂದ್ಯಾಟ ಇಂದು, ದೇಶ ವಿದೇಶಗಳಲ್ಲೂ ಜನಪ್ರಿಯತೆ ಗಳಿಸಿದೆ. ಸೋಮವಾರಪೇಟೆಯಲ್ಲಿ ಉತ್ತಮ ಕ್ರೀಡಾಂಗಣದ ಕೊರತೆಯ ನಡುವೆಯೂ ಕ್ರೀಡಾಪಟುಗಳು ಸಾಧನೆ ತೋರುತ್ತಿದ್ದಾರೆ. ಉತ್ತಮ ಸೌಕರ್ಯ ಲಭಿಸಿದರೆ ಇನ್ನಷ್ಟು ಸಾಧನೆ ತೋರಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಿಸಿದರು.

ಬೇಳೂರು ಗ್ರಾ.ಪಂ. ಸದಸ್ಯ ಯೋಗೇಂದ್ರ, ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜ ಅವರುಗಳು ಮಾತನಾಡಿ, ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದ್ದು, ಕ್ರೀಡಾಪಟುಗಳಿಗೆ ಇಂದಿರಾಗಾಂಧಿ ಅಭಿಮಾನಿಗಳ ಸಂಘವು ವೇದಿಕೆ ಒದಗಿಸುತ್ತಿರುವದು ಶ್ಲಾಘನೀಯ ಎಂದರು.

ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು ಮಾತನಾಡಿ, ಇಂದಿರಾಗಾಂಧಿ ಹುಟ್ಟುಹಬ್ಬದ ಪ್ರಯುಕ್ತ ಸಂಘ ಕಳೆದ 32 ವರ್ಷಗಳಿಂದ ಸತತವಾಗಿ ರಾಜ್ಯಮಟ್ಟದ ಕಬಡ್ಡಿ, ಥ್ರೋಬಾಲ್, ವಾಲಿಬಾಲ್, ಕುಸ್ತಿ, ಕೇರಂ, ಸೈಕಲ್ ಸ್ಪರ್ಧೆ, ರಸ್ತೆ ಓಟ, ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ನಡೆಸಿಕೊಂಡು ಬಂದಿದೆ. ಪ್ರಸಕ್ತ ಸಾಲಿನಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ತಾ. 21 ರಂದು ಸಾರ್ವಜನಿಕರಿಗೆ ಪ್ರತ್ಯೇಕವಾಗಿ ರಾಜ್ಯ ಮಟ್ಟದ ಕಬಡ್ಡಿ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ತಾ. 21ರಂದು(ಇಂದು) ಸಂಜೆ 6 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಉದ್ಯಮಿ, ದಾನಿಗಳಾದ ಹರಪಳ್ಳಿ ರವೀಂದ್ರ ಅವರನ್ನು ಸನ್ಮಾನಿಸಲಾಗುವದು. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವದು. ತಾ. 24ರಂದು ಸಂಘದ ವತಿಯಿಂದ ನಾಡಿನ ಸುಭೀಕ್ಷೆಗಾಗಿ ಪ್ರಾರ್ಥಿಸಲು ಪಟ್ಟಣದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸಲಾಗುವದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ನಳಿನಿ ಗಣೇಶ್, ಮೊಗೇರ ಸಮಾಜದ ಅಧ್ಯಕ್ಷ ದಾಮೋಧರ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಪ್ರಮುಖರಾದ ಕಿರಣ್, ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಬಿ. ರಾಜಪ್ಪ, ಸಂಚಾಲಕರಾದ ಗಿರೀಶ್, ಅಜಯ್, ಪದಾಧಿಕಾರಿಗಳಾದ ಮನೋಜ್, ಸಂತೋಷ್ ಸೇರಿದಂತೆ ಇತರರು ಉಪಸ್ಥಿತರಿದ್ದರು.