ಶ್ರೀಮಂಗಲ, ಡಿ. 20 : ಕೊಡಗು ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಬೆಳೆ ನಷ್ಟ ಪರಿಹಾರಕ್ಕಾಗಿ ಈಗಾಗಲೇ ರೂ. 95 ಕೋಟಿ ಅರ್ಜಿದಾರರ ಖಾತೆಗೆ ಸಂದಾಯ ಮಾಡಲಾಗಿದೆ. ಬಹುತೇಕ ಎಲ್ಲಾ ಬೆಳೆ ನಷ್ಟ ಪರಿಹಾರ ಅರ್ಜಿಗಳಿಗೆ ಪರಿಹಾರ ಬಿಡುಗಡೆ ಮಾಡಲಾಗಿದ್ದು, ಇನ್ನೂ ಪರಿಹಾರ ಸಿಗದವರು ತಮ್ಮ ಆದಾರ್ ಸಂಖ್ಯೆಯನ್ನು ಕಂದಾಯ ಇಲಾಖೆಯ ಕಚೇರಿಯಲ್ಲಿ ಪರಿಶೀಲಿಸಿ ವಿವರ ಪಡೆಯಬಹುದೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದ್ದಾರೆ.

ಮಡಿಕೇರಿಯಲ್ಲಿ ಕೊಡಗು ಬೆಳೆಗಾರರ ಒಕ್ಕೂಟದ ನಿಯೋಗದಿಂದ ಸಲ್ಲಿಸಿದ ಮನವಿಗೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಮೊದಲ ಹಂತದಲ್ಲಿ ಬೆಳೆ ನಷ್ಟಪರಿಹಾರ ಬಿಡುಗಡೆ ಮಾಡಲಾಗಿದೆ. ಇದಾದನಂತರ ಭೂಕುಸಿತದಿಂದ ಉಂಟಾಗಿರುವ ಭೂಮಿ ನಷ್ಟ ಮತ್ತು ಮನೆ ಹಾನಿಗೆ ಪರಿಹಾರ ಬಿಡುಗಡೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದೆಂದು ಹೇಳಿದರು.

ಕೃಷಿಯಂತೆ ಕಾಫಿ ತೋಟಕ್ಕೂ 10 ಹೆಚ್.ಪಿ. ಯವರೆಗೆ ಪಂಪ್ ಸೆಟ್‍ಗÀಳಿಗೆ ಉಚಿತ ವಿದ್ಯುತ್ ನೀಡುವ ಮತ್ತು ಮೇಲ್ಪಟ್ಟ ಹೆಚ್.ಪಿಯ ಪಂಪ್ ಸೆಟ್‍ಗಳಿಗೆ ಕೃಷಿಯಂತೆ ರಿಯಾಯಿತಿ ನೀಡುವ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದ್ದು, ಈ ಬಗ್ಗೆ ಅಧಿಕೃತವಾಗಿ ಯಾವುದೇ ಆದೇಶ ಬಂದಿಲ್ಲ. ಸದ್ಯದಲ್ಲಿಯೇ ಅಧಿಕೃತ ಆದೇಶ ಬರಲಿದೆ. ರೈತರ ಪಂಪ್‍ಸೆಟ್‍ಗಳ ಬಿಲ್‍ಗಳನ್ನು ಪಾವತಿಸಲು ವಿದ್ಯುತ್ ಇಲಾಖೆ ಯಾವುದೇ ಒತ್ತಡ ಏರದಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯ ಪಟ್ಟೆದಾರ ಪೌತಿ ಖಾತೆಯಿಂದ ಹೆಸರು ತೆಗೆಯುವ ಸರ್ಕಾರದ ಆದೇಶದಂತೆ ಈಗಾಗಲೇ ಪೆÇನ್ನಂಪೇಟೆ, ವಿರಾಜಪೇಟೆಗಳಲ್ಲಿ ಕಂದಾಯ ಆದಾಲತ್‍ಗಳನ್ನು ಮಾಡಲಾಗಿದೆ. ಈ ಆದಾಲತ್‍ನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಇತರೆಡೆಯು ಆದಾಲತ್‍ಗಳನ್ನು ಮಾಡಿ ಈ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಜಿಲ್ಲಾಧಿಕಾರಿಯವರು ನೀಡಿದರು.

ಕೊಡಗಿನ ಮೂಲ ನಿವಾಸಿಗಳಿಗೆ ಆಧಾರ್ ಕಾರ್ಡ್ ಮಾಡಿಸಲು ಯಾವುದೇ ದಾಖಲೆ ಇಲ್ಲದೇ ಇರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದ ಒಕ್ಕೂಟದ ನಿಯೋಗಕ್ಕೆ ಈ ಬಗ್ಗೆ ಟಿ. ಶೆಟ್ಟಿಗೇರಿ ಮತ್ತು ಬಿರುನಾಣಿಯಲ್ಲಿ ಸಂಚಾರ ಆಧಾರ್ ಕಾರ್ಡ್ ಘಟಕವನ್ನು ಮುಂದಿನ ಜನವರಿ 15ರೊಳಗೆ ಕಳುಹಿಸಿ ಆಧಾರ್ ಕಾರ್ಡ್ ಮಾಡಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಜಿಲ್ಲೆಯ ಕಾಫಿ ಬೆಳೆಗಾರರ ಆದಾಯವನ್ನು ಅವೈಜ್ಞಾನಿಕವಾಗಿ ಮತ್ತು ವಾಸ್ತವಾಂಶಕ್ಕೆ ಇಲ್ಲದೇ ಕಂದಾಯ ಇಲಾಖೆ ನಮೂದಿಸುತ್ತಿದ್ದು, ಇದರಿಂದ ಸಣ್ಣ ಕಾಫಿ ಬೆಳೆಗಾರರ ಆದಾಯ ದೃಢೀಕರಣ ಪತ್ರದಲ್ಲಿ ಹೆಚ್ಚಿನ ಆದಾಯ ತೋರಿಸುತ್ತಿದೆ. ತಪ್ಪು ಮಾನದಂಡದಲ್ಲಿ ಆದಾಯ ನಿಗದಿಪಡಿಸಲಾಗುತ್ತಿದ್ದು, ಇದರಿಂದ ಬಿ.ಪಿ.ಎಲ್. ಕಾರ್ಡ್‍ಗೆ ಅರ್ಹರಾಗಿರುವ ಸಣ್ಣ ಕಾಫಿ ಬೆಳೆಗಾರರು ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಆದಾಯ ನಿಗದಿಪಡಿಸಲು ಸೂಕ್ತ ರೀತಿಯಲ್ಲಿ ಪರಿಷ್ಕರಣೆ ಮಾಡಲು ಜಿಲ್ಲಾಧಿಕಾರಿಯವರ ಗಮನ ಸೆಳೆಯಲಾಯಿತು.

ದಕ್ಷಿಣ ಕೊಡಗಿನಾದ್ಯಂತ ಹುಲಿ ದಾಳಿಗೆ ರೈತರು ಸಾಕಿದ ಜಾನುವಾರುಗಳು ತುತ್ತಾಗಿ ಬಲಿಯಾಗುತ್ತಿದ್ದು, ಕಳೆದ ಎರಡು ತಿಂಗಳಲ್ಲಿ ಸುಮಾರು 30ಕ್ಕೂ ಅಧಿಕ ಜಾನುವಾರುಗಳು ಬಲಿಯಾಗಿವೆ. ಆದರೆ ಅರಣ್ಯ ಇಲಾಖೆಗೆ ಹುಲಿ ಸೆರೆಗೆ ಯಾವುದೇ ಅನುಮತಿ ಇಲ್ಲದಿದ್ದರೂ ಜನರ ಕಣ್ಣೋರೆಸುವ ತಂತ್ರವಾಗಿ ಹುಲಿ ಸೆರೆಗೆ ಬೋನ್ ಇರಿಸಲಾಗುತ್ತಿದೆ. ಹುಲಿ ಸೆರೆಗೆ ಅನುಮತಿ ಪಡೆದು ಕಾರ್ಯಾಚರಣೆ ಕೈಗೊಳ್ಳುವಂತೆಯೂ ಒಕ್ಕೂಟದಿಂದ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಯಿತು.

ಕಾಫಿ ಹಾಗೂ ಕೃಷಿಗೆ ನದಿ ನೀರನ್ನು ಬಳಸಲು ಯಾವುದೇ ತಡೆ ಮಾಡದಂತೆ ಹಾಗೂ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದಂತೆ ನದಿ ನೀರು ಸಂಗ್ರಹ ಮಾಡಲು ಮತ್ತು ಈ ಮೂಲಕ ಅಂತರ್ಜಲ ಕುಸಿಯದಂತೆ ಸೂಕ್ತ ರೀತಿಯ ತಾತ್ಕಾಲಿಕ ಚೆಕ್ ಡ್ಯಾಂಗಳನ್ನು ನಿರ್ಮಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಯಿತು.

ನಿಯೋಗದಲ್ಲಿ ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್‍ಅಪ್ಪಯ್ಯ, ಕಾರ್ಯದರ್ಶಿ ಅಣ್ಣೀರ ಹರೀಶ್‍ಮಾದಪ್ಪ, ಖಜಾಂಚಿ ಮಾಣೀರ ವಿಜಯ್‍ನಂಜಪ್ಪ, ಸದಸ್ಯರಾದ ಅರಮಣಮಾಡ ಸತೀಶ್ ದೇವಯ್ಯ, ಚೊಟ್ಟೆಯಂಡಮಾಡ ಪ್ರಜಾಮುದ್ದಯ್ಯ ಹಾಜರಿದ್ದರು.