ಕುಶಾಲನಗರ, ಡಿ. 20: ಕುಶಾಲನಗರ ಸಮೀಪದ ಗುಡ್ಡೆಹೊಸೂರಿನಲ್ಲಿರುವ ಕೂರ್ಗ್ ಕ್ಲೇ ಮಾರ್ಟ್ ಕರಕುಶಲ ಮಳಿಗೆ ವತಿಯಿಂದ ನಡೆಸಲಾಗುವ ಪಾಟರಿ ಫೆಸ್ಟಿವೆಲ್ ಅಂಗವಾಗಿ ಶಾಲಾ ವಿದ್ಯಾರ್ಥಿಗಳು, ಸಂಘಸಂಸ್ಥೆಗಳ ಸದಸ್ಯರಿಗೆ ಉಚಿತವಾಗಿ ಪಾಟರಿ ತಯಾರಿ ಮೇಳವನ್ನು ತಾ.23 ರಿಂದ ಎರಡು ದಿನಗಳ ಕಾಲ ಹಮ್ಮಿಕೊಳ್ಳ ಲಾಗಿದೆ ಎಂದು ಸಂಸ್ಥೆ ಮಾಲೀಕ ಶಫಿ ಕೋನಾಡತ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 1 ಸಾವಿರಕ್ಕೂ ಅಧಿಕ ಬಗೆಯ ಮಣ್ಣಿನ ಉತ್ಪನ್ನಗಳನ್ನು ನಮ್ಮಲ್ಲಿ ತಯಾರಿಸಲಾಗುತ್ತಿದೆ. ಪ್ಲಾಸ್ಟಿಕ್ ಹಾವಳಿಯಿಂದ ಕುಂಠಿತಗೊಂಡಿದ್ದ ಮಣ್ಣಿನ ಮಡಿಕೆ ಮತ್ತಿತರ ಉತ್ಪನ್ನಗಳ ಬಗ್ಗೆ ಇಂದಿನ ಯುವ ಪೀಳಿಗೆ ಅರಿತುಕೊಳ್ಳಬೇಕಿದೆ. ಪ್ಲಾಸ್ಟಿಕ್‍ಗೆ ಪರ್ಯಾಯವಾಗಿ ನೈಸರ್ಗಿಕವಾಗಿ ಮಣ್ಣಿನಿಂದ ತಯಾರಿಸಿದ ಮಡಿಕೆ, ಹೂಜಿ, ಪಾಟ್, ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಬಗ್ಗೆ ನುರಿತ ತಜ್ಞರು ತರಬೇತಿ ನೀಡಲಿದ್ದಾರೆ. ಜಿಲ್ಲೆಯ ವಿವಿಧೆಡೆಯ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಈ ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಪ್ರಮುಖರಾದ ಕಳಂಜನ ದಾದಪ್ಪ ಮಾತನಾಡಿ, ನಶಿಸಿ ಹೋಗುತ್ತಿರುವ ಮಣ್ಣಿನ ಕಲೆಗಳನ್ನು ಪಸರಿಸುವ ಉದ್ದೇಶದಿಂದ ಈ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಉಚಿತವಾಗಿ ಎರಡು ದಿನಗಳ ಕಾಲ ವಿವಿಧ ಹಂತದಲ್ಲಿ ಸಂಪೂರ್ಣ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ತಾ. 23 ರಂದು ಡಿವೈಎಸ್ಪಿ ಪಿ.ಕೆ.ಮುರಳೀಧರ್ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ.

ಕೇರಳ ರಾಜ್ಯದ ಲಲಿತಾ ಕಲಾ ಅಕಾಡೆಮಿ ಪ್ರಶಸ್ತಿ ವಿಜೇತ ಕಲಾವಿದ ವಿ.ಕೆ.ಜಯನ್ ತರಬೇತಿ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷೆ ಭಾರತಿ, ಪಿಡಿಓ ಶ್ಯಾಂ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಕರಕುಶಲ ಮಳಿಗೆ ಪ್ರಮುಖರಾದ ಶಂಷೀರ್, ಹಬೀಬ್ ಇದ್ದರು.