ಕುಶಾಲನಗರ, ಡಿ. 20: ಕುಶಾಲ ನಗರ ಪಟ್ಟಣ ಪಂಚಾಯಿತಿಯ 16 ವಾರ್ಡ್‍ಗಳ ಚುನಾವಣಾ ಫಲಿತಾಂಶ ಹೊರಬಿದ್ದು ಒಂದು ವರ್ಷ ಕಳೆದರೂ ಇನ್ನೂ ಸ್ಥಳೀಯ ಆಡಳಿತ ಪ್ರಜಾಪ್ರತಿನಿಧಿಗಳ ಕೈಗೆ ದೊರಕದೆ ಆಡಳಿತಾಧಿಕಾರಿಗಳ ಅಂಕುಶದಲ್ಲಿ ಮುಂದುವರೆದಿದೆ. ರಾಜ್ಯದಲ್ಲಿ ಸ್ಥಳೀಯ ಆಡಳಿತಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಗೊಂದಲ ಪರಿಹಾರ ಗೊಳ್ಳದ ಹಿನ್ನೆಲೆ ಜನಪ್ರತಿನಿಧಿಗಳ ಅಧಿಕಾರಕ್ಕೆ ಕುತ್ತು ಬಂದಿದೆ.

ಅಕ್ಟೋಬರ್ 2018 ರಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಪ್ರತಿನಿಧಿಗಳಿಗೆ ಚುನಾವಣೆ ನಡೆದಿದ್ದು ಬಿಜೆಪಿ 6, ಕಾಂಗ್ರೆಸ್ 6 ಜೆಡಿಎಸ್ 4 ಸ್ಥಾನ ಗಳಿಸಿದೆ. ಈ ಮೂಲಕ ಯಾವ ಪಕ್ಷಕ್ಕೂ ಕೂಡ ಸ್ಪಷ್ಟ ಬಹುಮತ ದೊರೆಯದೆ ಅತಂತ್ರ ಸ್ಥಿತಿ ನಿರ್ಮಾಣಗೊಂಡಿತ್ತು. ಹಿಂದಿನ ಅವಧಿಯಲ್ಲಿ ಕುಶಾಲನಗರ ಪಟ್ಟಣ ಪಂಚಾಯ್ತಿಯ ಒಟ್ಟು 13 ಸ್ಥಾನಗಳಲ್ಲಿ ಬಿಜೆಪಿ 6, ಕಾಂಗ್ರೆಸ್ 3, ಜೆಡಿಎಸ್ 4 ಸ್ಥಾನ ಗಳಿಸಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಿತ್ತ್ತು.

ಹಿಂದಿನ ಅವಧಿಯಲ್ಲಿ ಸದಸ್ಯರಾಗಿದ್ದ ಡಿ.ಕೆ.ತಿಮ್ಮಪ್ಪ, ರೇಣುಕಾ, ಪ್ರಮೋದ್ ಮುತ್ತಪ್ಪ, ಸುರಯ್ಯ ಭಾನು ಈ ಬಾರಿ ಪುನರಾಯ್ಕೆಗೊಂಡಿದ್ದಾರೆ. ಮೀಸಲಾತಿ ಅನ್ವಯ 16 ಮಂದಿಯಲ್ಲಿ 7 ಮಹಿಳಾ ಅಭ್ಯರ್ಥಿಗಳು ಈ ಬಾರಿಯ ಆಡಳಿತ ಮಂಡಳಿಯಲ್ಲಿ ಜನಪ್ರತಿನಿಧಿಗಳಾಗಿದ್ದಾರೆ. ಈ ಬಾರಿ 12 ಮಂದಿ ಹೊಸ ಮುಖಗಳು ಪಂಚಾಯ್ತಿ ಆಡಳಿತ ಮಂಡಳಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅಧ್ಯಕ್ಷ ಸ್ಥಾನಕ್ಕೆ (ಬಿಸಿಎಂ ಎ), ಉಪಾಧ್ಯಕ್ಷ ಸ್ಥಾನಕ್ಕೆ (ಸಾಮಾನ್ಯ ಮಹಿಳೆ) ಮೀಸಲಾತಿ ನಿಗದಿಯಾಗಿತ್ತು. ಇದೀಗ ಮತ್ತೆ ಮೀಸಲಾತಿ ಬದಲಾ ವಣೆಗೊಂಡು ಇನ್ನೆರೆಡು ದಿನಗಳಲ್ಲಿ ಪ್ರಕಟಗೊಳ್ಳುವ ಸಾಧ್ಯತೆಯಿದೆ.

ಕಾಂಗ್ರೆಸ್, ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಲ್ಲಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಾಲಾಗುವುದು ಬಹುತೇಕ ಖಚಿತವಾಗಿದ್ದರೂ ಇತ್ತ ಬಿಜೆಪಿ ಪಾಳಯದಲ್ಲಿ ಹಿಂದಿನ ಅಧ್ಯಕ್ಷರಾದ ಡಿ.ಕೆ. ತಿಮ್ಮಪ್ಪ ರಾಜಕೀಯ ಕಸರತ್ತು ಮಾಡುವುದ ರೊಂದಿಗೆ ಮತ್ತೆ ಪಟ್ಟವನ್ನು ಒಲಿಸಿಕೊಳ್ಳುವ ಸಾಧ್ಯತೆಗಳು ಅಧಿಕ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಮೋದ್ ಮುತ್ತಪ್ಪ ಪಟ್ಟಣ ಪಂಚಾಯಿತಿಯಲ್ಲಿ ಎರಡನೇ ಬಾರಿ ಆಯ್ಕೆಗೊಂಡಿದ್ದು ಪ್ರಬಲ ಆಕಾಂಕ್ಷಿ ಯಾಗಿರುವುದಾಗಿ ಹೇಳಿ ಕೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನ ಮಾತ್ರ ಹೊಂದಾಣಿಕೆ ನಡುವೆ ಒಲಿಯುವ ಹುದ್ದೆಯಾಗಿದೆ. ಡಿಸೆಂಬರ್ ಅಂತ್ಯದೊಳಗೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಹೊರ ಬೀಳುವುದರೊಂದಿಗೆ ಕುಶಾಲನಗರ ಪಟ್ಟಣ ಪಂಚಾಯಿತಿಯ ಆಡಳಿತ ಚುಕ್ಕಾಣಿ ಸುಬೇದಾರರ ಕೈಯಿಂದ ಮತ್ತೆ ಪ್ರಜಾಪ್ರತಿನಿಧಿಗಳ ಕೈಗೆ ದೊರಕುವುದು ಖಚಿತಗೊಂಡಿದೆ.

- ಚಂದ್ರಮೋಹನ್