ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳು ಪ್ರತಿಯೊಂದು ಅಮಾವಾಸ್ಯೆ ಮತ್ತು ಹುಣ್ಣಿಮೆಗಳ ದಿವಸ ಜಗತ್ತಿನ ಒಂದಲ್ಲಾ ಒಂದು ಕಡೆ ಸಂಭವಿಸುತ್ತಿರುವ ಸ್ವಾಭಾವಿಕ ವಿದ್ಯಮಾನ. ಭೂಮಿಯ ಪರಿಭ್ರಮಣದ ಕಾರಣದಿಂದ ದಿನಂಪ್ರತಿ ಉಂಟಾಗುವ ಸೂರ್ಯೋದಯ ಮತ್ತು ಸೂರ್ಯಾಸ್ತಗಳಂತೆ ನಿಸರ್ಗದಲ್ಲಿ ಅನಾದಿಕಾಲದಿಂದಲೂ ಗ್ರಹಣಗಳು ಉಂಟಾಗುತ್ತಿವೆ. ಆದರೆ ಸೂರ್ಯ ಅಥವಾ ಚಂದ್ರಗ್ರಹಣಗಳಲ್ಲಿ ಆಕಸ್ಮಿಕವಾಗಿ ಹೊಂದಾಣಿಕೆಯ ದೂರದಲ್ಲಿ, ಪರಸ್ಪರ ಚಲನೆಯ ಅವಧಿಯಲ್ಲಿ, ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಅಡ್ಡ ಹಾಯುವ ಅಮಾವಾಸ್ಯೆ ದಿನದಂದು ಸೂರ್ಯಗ್ರಹಣ ಉಂಟಾಗುತ್ತದೆ.ಹಾಗೆಯೇ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಅಡ್ಡ ಹಾಯುವ ಹುಣ್ಣಿಮೆಯ ದಿವಸದಂದು ಚಂದ್ರಗ್ರಹಣ ಆಗುತ್ತದೆ. ಇದನ್ನು ಸರಳವಾಗಿ ಹೇಳುವುದಾದರೆ, ಕೋಣೆಯಲ್ಲಿ ಮೇಜಿನ ಮೇಲೆ ಉರಿಯುತ್ತಿರುವ ಮೇಣದ ಬತ್ತಿ ಬೆಳಕಿಗೆ ಎದುರಾಗಿ ಒಂದು ಕ್ರಿಕೆಟ್ ಚೆಂಡನ್ನು ತುಸುದೂರದಲ್ಲಿ ಹಿಡಿದಾಗ ಮೇಣದ ಬತ್ತಿಯ ಬೆಳಕು ಕ್ರಿಕೆಟ್ ಚೆಂಡಿನ ಒಂದು ಬದಿಯನ್ನು ಬೆಳಗುತ್ತಿರುವ ಆಗ ಚಂಡಿನ ಹಿಂಭಾಗ ಕತ್ತಲಾಗಿದ್ದು, ಅದರಾಚೆಗೆ ನೆರಳು ಎದುರಿನ ಗೋಡೆಯಲ್ಲಿ ಗೋಳಾಕೃತಿಯಲ್ಲಿ ಕತ್ತಲಾಗಿ ಕಾಣಿಸುತ್ತದೆ. ಚೆಂಡನ್ನು ದೀಪದ ಹತ್ತಿರ ತಂದಾಗ ನೆರಳು ವಿಸ್ತಾರವಾದರೆ ತುಸುದೂರ ತಂದಾಗ ಕಡಿಮೆಯಾಗುತ್ತಾ ಕೊನೆಗೆ ಕ್ಷೀಣವಾಗುತ್ತದೆ. ಇದೇ ತತ್ವದಂತೆ ಚಂದ್ರನ ಗಾತ್ರ ಚಿಕ್ಕದಾಗಿದ್ದರೂ ಭೂಮಿಯ ಮೇಲಿನಿಂದ ನಿಂತು ನೋಡುವ ನಮಗೆ ಸೂರ್ಯನ ಬೆಳಕನ್ನು ಕಾಣಿಸದಂತೆ ತಡೆಹಿಡಿಯುವ ಚಂದ್ರ ಅಡ್ಡ ಹಾಯ್ದಾಗ ಪೂರ್ಣ ಸೂರ್ಯಗ್ರಹಣ, ಇಲ್ಲವೇ ತುಸು ಕಡಿಮೆ ದೂರದಲ್ಲಿದ್ದರೆ ಕಂಕಣ ಸೂರ್ಯಗ್ರಹಣ ಅಥವಾ ಸ್ವಲ್ಪ ಓರೆಯಾಗಿದ್ದರೆ ಪಾಶ್ರ್ವ ಸೂರ್ಯಗ್ರಹಣ ಉಂಟಾಗುತ್ತದೆ.

ಸಂಪೂರ್ಣ ಸೂರ್ಯಗ್ರಹಣ ಆಗುವ ಸಮಯದಲ್ಲಿ, ನಮ್ಮ ಪೂರ್ವಜರಿಗೆ ಹಗಲಿನ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಕತ್ತಲಿನ ಅನುಭವದ ಸಂದರ್ಭದಲ್ಲಿ ಮೃಗ ಪಕ್ಷಿಗಳು ಗೂಡಿಗೆ ಮರಳುವ ವಿದ್ಯಮಾನ ಮುಂತಾದವುಗಳಿಂದ ಗಾಬರಿಯ ಸನ್ನಿವೇಶಗಳು ಉಂಟಾಗಿ ಮುಂದೆ ಸ್ವಲ್ಪ ಸಮಯದ ಬಳಿಕ ಎಂದಿನಂತೆ ಬೆಳಗುವ ವಿಸ್ಮಯದಿಂದ ಭಯಭೀತನಾಗಿ ಗ್ರಹಣದ ಬಗ್ಗೆ ಎಲ್ಲಿಲ್ಲದ ಹೆದರಿಕೆ ಜೊತೆಯಲ್ಲಿ ಮೂಢ ನಂಬಿಕೆಗಳನ್ನು ಹೊಂದಿರುತ್ತಿದ್ದರು. ಖಗೋಳ ವಿಜ್ಞಾನ ಈಗ ಸಾಕಷ್ಟು ಮುಂದುವರೆದಿದ್ದು ಮಾನವ ತನ್ನ ಹತ್ತಿರದ ಆಕಾಶಕಾಯಗಳಾದ ಚಂದ್ರ, ಮಂಗಳ, ಶುಕ್ರ, ಸೌರಮಂಡಲಗಳ ಸಾಕಷ್ಟು ಹತ್ತಿರದ ಅಧ್ಯಯನ ಮಾಡಿ ಜನಸಾಮಾನ್ಯರ ಮೂಢನಂಬಿಕೆಗಳಿಗೆ ಆಧಾರವಿಲ್ಲವೆಂದು ಸಾಬೀತುಪಡಿಸಲಾಗಿದೆ. ಹೆಚ್ಚೆಂದರೆ ಗ್ರಹಣದ ಸಮಯದಲ್ಲಿ ಸೂರ್ಯಕಿರಣದ ಪ್ರಖರತೆ ಹೆಚ್ಚಾಗುವುದರಿಂದ ಆ ಸಮಯದಲ್ಲಿ ಸೂರ್ಯನನ್ನು ನೇರವಾಗಿ ಬರಿಗಣ್ಣಿನಿಂದ ನೋಡಬಾರದು. ಆದರೆ ನಮ್ಮಲ್ಲಿ ಪರಂಪರೆಯಿಂದ ಬಂದಿರುವ ಜ್ಯೋತಿಷ್ಯವು ಕೆಲವು ನಂಬಿಕೆಗಳಿಗೆ ವೈಜ್ಞಾನಿಕವಲ್ಲದ ಊಹಾಪೋಹಗಳನ್ನು ಸೇರಿಸಿ ಜನಸಾಮಾನ್ಯರನ್ನು ಭಯಭೀತರನ್ನಾಗಿಸಿದೆ. ಇದು ಅವರವರ ನಂಬಿಕೆ ಮತ್ತು ತಿಳುವಳಿಕೆಗೆ ಬಿಟ್ಟಿರುವ ವಿಚಾರ.

ಅಪರೂಪದ ಸನ್ನಿವೇಶ: ಡಿಸೆಂಬರ್ 26 ರಂದು ಬೆಳಿಗ್ಗೆ 8 ಗಂಟೆಯಿಂದ 11.00 ನಡುವಿನ ಅವಧಿಯಲ್ಲಿ ಸಂಭವಿಸುವ ಕಂಕಣ ಸೂರ್ಯಗ್ರಹಣ ಒಂದು ಅಪರೂಪದ ಗ್ರಹಣ. ಕಂಕಣ ಎಂದರೆ ಬಳೆ. ಚಂದ್ರ ತನ್ನ ಚಲನೆಯ ಕ್ಷಣಗಳಲ್ಲಿ ನಾವು ಭೂಮಿಯ ಮೇಲೆ ನಿಂತು ನೋಡುವ ಕೋನವನ್ನು ಆಧರಿಸಿದಂತೆ ಸೂರ್ಯನನ್ನು ಮರೆ ಮಾಡಿದರೂ, ನೆರಳಿನ ಸುತ್ತಲೂ ವರ್ತುಲಾಕಾರ (ಕಂಕಣ)ವಾಗಿ ಸೂರ್ಯನ ಪಾಶ್ರ್ವದ ಅಂಚುಗಳು ಬೆಳಗುತ್ತಿರುವ ವಿದ್ಯಮಾನ ಇದು ಆಗಿರುತ್ತದೆ. ಅಂದರೆ ಚಂದ್ರ ತುಸು ಸೂರ್ಯನತ್ತ ಚಲಿಸುವ ಕಕ್ಷೆಯಲ್ಲಿ ಇದ್ದಿದ್ದರೆ (ಮೇಲೆ ಹೇಳಿದ ಮೇಣದ ಬತ್ತಿಯ ಬೆಳಕು ಮತ್ತು ಕ್ರಿಕೆಟ್ ಚೆಂಡಿನ ಪ್ರಯೋಗ ನೆನಪಿಸಿಕೊಳ್ಳಿ) ಸೂರ್ಯನನ್ನು ಸಂಪೂರ್ಣ ಮರೆಮಾಚಿದಂತೆ ನಮಗೆ ಸಂಪೂರ್ಣ ಸೂರ್ಯಗ್ರಹಣ (1980 ನೇ ಇಸವಿಯಲ್ಲಿ ಗಟಿಸಿದಂತೆ,) ಕಾಣುತ್ತಿತ್ತು. ಈ ಸಲ ಕೊಡಗಿನ ಕುಟ್ಟ ಪ್ರದೇಶದಲ್ಲಿ ಕಂಕಣ ಸೂರ್ಯಗ್ರಹಣ ಕಾಣಿಸುತ್ತದೆ ಎಂದು ವಿಜ್ಞಾನಿಗಳು ನಿರ್ಧರಿಸಿದ್ದಾರೆ. ಹಾಗಿದ್ದರೆ ಅಲ್ಲಿಂದ ದೂರ ಸರಿದಂತೆ ಬೇರೆ ಪ್ರದೇಶಗಳಲ್ಲಿ ಮೈಸೂರು, ಬೆಂಗಳೂರು ಮುಂತಾದ ಪ್ರದೇಶಗಳ ಜನರಿಗೆ ನಾವು ನಿಂತ ಸ್ಥಳ ಮತ್ತು ಸೂರ್ಯ ಭೂಮಿಯ ನಡುವೆ ಚಂದ್ರ ಹಾಯ್ದು ಹೋದಾಗ ಉಂಟಾಗುವ ಕೋನದ ಅಳತೆಗೆ ಸಂಬಂಧಿಸಿದಂತೆ; ಸೂರ್ಯನನ್ನು ಆವರಿಸುವ ಗ್ರಹಣದ ನೆರಳು ಅದರ ವಿಸ್ತಾರ ಮತ್ತು ಅವಧಿ ನಿರ್ಧಾರವಾಗುತ್ತದೆ.

ಸ್ನೇಹಿತರೆ, 1980ನೇ ಇಸವಿಯಲ್ಲಿ ಸಂಭವಿಸಿದ ಸಂಪೂರ್ಣ ಸೂರ್ಯಗ್ರಹಣ ಕೊಡಗಿನ ವ್ಯಾಪ್ತಿಯಲ್ಲಿ ಹಗಲಿನಲ್ಲಿಯೇ ಕತ್ತಲಾದುದನ್ನು ನಾನು ಅನುಭವಿಸಿರುತ್ತೇನೆ. ಪಕ್ಷಿಗಳು ಗಡಿಬಿಡಿಯಿಂದ ಗೂಡಿಗೆ ಹಿಂತಿರುಗುತ್ತ ಹಾರುವುದನ್ನು ಗಮನಿಸಿದ್ದೇನೆ. ಈಗ ಕಂಕಣ ಸೂರ್ಯಗ್ರಹಣದಲ್ಲಿ ಅಷ್ಟೊಂದು ಕತ್ತಲಾಗುವ ಸಂದರ್ಭ ಗಡಿಬಿಡಿ ಇಲ್ಲದಿದ್ದರೂ ನಿಸರ್ಗದ ಅಪರೂಪದ ವಿದ್ಯಮಾನವನ್ನು ಅನುಭವಿಸುವ ಸುಸಂದರ್ಭ ಒದಗಿದೆ. ಬರಿಗಣ್ಣಿನಿಂದ ಸೂರ್ಯನತ್ತ ದೃಷ್ಟಿಯಿಟ್ಟು ನೋಡದೆ, ಪ್ರಕೃತಿಯ ವಿಸ್ಮಯವನ್ನು ಅನುಭವಿಸಿ.

-ವಿಶ್ವನಾಥ್‍ಎಡಿಕೇರಿ