ಕುಶಾಲನಗರ, ಡಿ. 20: ಕುಶಾಲನಗರ ಮಹಾತ್ಮಾಗಾಂದಿ ಮೆಮೋರಿಯಲ್ ಪದವಿ ಕಾಲೇಜು ಆಶ್ರಯದಲ್ಲಿ ರಾಜ್ಯಮಟ್ಟದ ಎಂಜಿಎಂ ಕಪ್ ವಾಲಿಬಾಲ್ ಪಂದ್ಯಾವಳಿ ನಡೆಯಿತು. ತಾವರೆಕೆರೆ ಬಳಿ ಗುಂಡುರಾವ್ ಬಡಾವಣೆಯ ಕಾಲೇಜು ಆವರಣದಲ್ಲಿ ನಡೆದ ಪಂದ್ಯಾಟಕ್ಕೆ ಎಂಜಿಎಂ ಪದವಿ ಕಾಲೇಜು ಮತ್ತು ವಿವೇಕಾನಂದ ಪಿಯು ಕಾಲೇಜಿನ ಪ್ರಾಂಶುಪಾಲ ಎಂ.ನಾಗೇಶ್ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವ ಅವಕಾಶದಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸೇರಿದಂತೆ ಇತರ ಕಾಲೇಜು ತಂಡಗಳಿಗೆ ತಮ್ಮ ಕಾಲೇಜಿನ ಮೂಲಕ ವೇದಿಕೆ ಸೃಷ್ಟಿಸಲಾಗಿದೆ. ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ ಎಂದ ಅವರು, ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಪ್ರಮುಖವಾಗಿದೆ ಎಂದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಶಂಭುಲಿಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಾಲೇಜಿನ ಕ್ರೀಡಾ ವಿಭಾಗದ ಪ್ರಮುಖರಾದ ಎಚ್.ಎಸ್. ಸಂದೇಶ್, ಕೆ.ಕೆ.ಶರಣ್, ದೇವೇಂದ್ರ, ಮಹೇಶ್ ಅಮೀನ್ ಮತ್ತಿತರರು ಇದ್ದರು.

ಕೊಡಗು ಜಿಲ್ಲೆಯ ಪದವಿ ಮತ್ತು ಪದವಿಪೂರ್ವ ಕಾಲೇಜುಗಳ ತಂಡ ಸೇರಿದಂತೆ ನೆರೆ ಜಿಲ್ಲೆಗಳ 20ಕ್ಕೂ ಅಧಿಕ ವಿದ್ಯಾರ್ಥಿಗಳ ತಂಡ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು.

ಪ್ರಥಮ ತಂಡಕ್ಕೆ ರೂ. 10 ಸಾವಿರ ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ತಂಡಕ್ಕೆ ರೂ. 5 ಸಾವಿರ ಮತ್ತು ಪಾಲ್ಗೊಂಡ ಎಲ್ಲಾ ತಂಡಗಳಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ಪ್ರಾಂಶುಪಾಲರಾದ ಎಂ.ನಾಗೇಶ್ ತಿಳಿಸಿದ್ದಾರೆ.