ಗೋಣಿಕೊಪ್ಪಲು, ಡಿ.20: ದ.ಕೊಡಗಿನಲ್ಲಿ ವ್ಯಾಘ್ರನ ಅಟ್ಟಹಾಸಕ್ಕೆ ಹಸುಗಳು ನಿರಂತರ ಬಲಿಯಾಗುತ್ತಿದ್ದು ಸುತ್ತ ಮುತ್ತಲಿನ ಗ್ರಾಮದ ಜನತೆ ಆತಂಕದಲ್ಲಿ ದಿನ ಕಳೆಯುವ ಪರಿಸ್ಥಿತಿ ಎದುರಾಗಿದೆ. ಸರಾಸರಿ ಎರಡು,ಮೂರು ದಿನಗಳಿಗೊಮ್ಮೆ ಹಸುಗಳನ್ನು ಬೇಟೆಯಾಡುತ್ತಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೋನ್‍ಅನ್ನು ಅಳವಡಿಸಿ ಹುಲಿಯ ಸೆರೆಗೆ ಪ್ರಯತ್ನಿಸಿದರೂ ಬೋನಿಟ್ಟ ಕಡೆ ವ್ಯಾಘ್ರನ (ಮೊದಲ ಪುಟದಿಂದ) ಸುಳಿವು ಇಲ್ಲದಿರುವುದು ಅಧಿಕಾರಿಗಳ ನಿದ್ರೆ ಗೆಡಿಸಿದೆ.ರೈತರ ಕೊಟ್ಟಿಗೆಗಳಿಗೆ ಮುಂಜಾನೆ ವೇಳೆ, ಭತ್ತದ ಗದ್ದೆ ಬಳಿ ಹಗಲಿನ ವೇಳೆಯೇ ಲಗ್ಗೆ ಇಡುವ ಹುಲಿರಾಯ ಕಟ್ಟಿಹಾಕಿದ್ದ ಹಸು ಗಳನ್ನು ಕೊಂದು ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತ ಮತ್ತೊಂದು ಪ್ರದೇಶದತ್ತ ತನ್ನ ಸ್ಥಳವನ್ನು ಬದಲಾಯಿಸುತ್ತ ತೆರಳುತ್ತಿದೆ. ರೈತರ ಮನೆಯ ಸಮೀಪವೇ ಇಂತಹ ಘಟನೆಗಳು ಮುಂಜಾನೆ ನಡೆಯು ವುದರಿಂದ ಗ್ರಾಮಸ್ಥರು ಆತಂಕ ಕ್ಕೀಡಾಗಿದ್ದಾರೆ. ಅಲ್ಲದೆ ಭಯದ ವಾತಾವರಣದಲ್ಲಿಯೇ ಕೊಟ್ಟಿಗೆಯ ಬಳಿ ತೆರಳುವ ಪ್ರಮೇಯ ಎದುರಾಗಿದೆ.

ದ.ಕೊಡಗಿನ ಬಾಳೆಲೆ, ಶ್ರೀಮಂಗಲ, ತಿತಿಮತಿ, ಬೀರುಗ, ತೆರಾಲು, ಬಿರುನಾಣಿ, ಕೊಟ್ಟಗೇರಿ ನಲ್ಲೂರು, ನಿಟ್ಟೂರು, ಮಾಯಮುಡಿ, ಹೈಸೊಡ್ಲೂರು, ರಾಜಪುರ, ವೆಸ್ಟ್‍ನೆಮ್ಮಲೆ, ಟಿ.ಶೆಟ್ಟಿಗೇರಿ ಬಳಿಯ ಹರಿಹರ ಹಾಗೂ ಕುಮಟೂರು ಭಾಗಗಳಲ್ಲಿ ಹುಲಿಯ ಸಂಚಾರ ಹೆಚ್ಚಾಗಿದ್ದು ರೈತರ ಜಾನುವಾರುಗಳು ಹುಲಿ ಬಾಯಿಗೆ ಆಹಾರವಾಗುತ್ತಿವೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಹಾಗೂ ರೈತರ ನಡುವೆ ಸಂಘರ್ಷ ನಡೆದಿದ್ದು; ಹುಲಿ ಸೆರೆ ಹಿಡಿಯಲು ಅಧಿಕಾರಿಗಳಿಗೆ ಸಾಧ್ಯವಾಗದ ಹಿನ್ನೆಲೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವೆಸ್ಟ್‍ನೆಮ್ಮಲೆಯ ರೈತರಾದ ಚಟ್ಟಂಗಡ ನವೀನ್ ಅವರ ಹಸುವನ್ನು ಹೊತ್ತೊಯ್ದು ತಿಂದಿರುವ ಹುಲಿಯನ್ನು ಸೆರೆಹಿಡಿಯಲು ಇವರ ಕಾಫಿ ತೋಟದಲ್ಲಿ ಅರಣ್ಯ ಇಲಾಖೆಯು ಬೋನ್‍ಅನ್ನು ಅಳವಡಿಸಿದ್ದು ಹುಲಿ ಸೆರೆಗೆ ಎದುರು ನೋಡುತ್ತಿದ್ದಾರೆ. ಆದರೆ ಇತ್ತ ಬೋನಿನತ್ತ ಸುಳಿಯುತ್ತಿಲ್ಲ. ಇದೀಗ ಕೊಡಗಿನಲ್ಲಿ ಕಾಡಾನೆ ಸಮಸ್ಯೆಯಂತೆ ಹುಲಿ ಹಾವಳಿಯು ಮಿತಿ ಮೀರಿದ್ದು ಅಧಿಕಾರಿಗಳು ಹೊಸ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ.

ನಾಗರ ಹೊಳೆ ಅರಣ್ಯ ವ್ಯಾಪ್ತಿಯಿಂದ ಸಮೀಪದ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿರುವ ಹುಲಿಗಳು ಈ ಭಾಗದ ರೈತರ ಜಾನುವಾರುಗಳನ್ನು ಕೊಂದು ಹಾಕುತ್ತಿವೆ. ಇದರಿಂದ ಶಾಶ್ವತ ಪರಿಹಾರ ಕಂಡು ಹಿಡಿಯಲು ಇಲಾಖೆ ವಿಫಲವಾಗಿದ್ದು ಕೇವಲ ಹತ್ತು ಸಾವಿರ ಪರಿಹಾರದ ಹಣ ನೀಡಿ ಕೈ ತೊಳೆದುಕೊಳ್ಳುತ್ತಿದೆ. ದಾಳಿಯ ಪ್ರಮಾಣ ಕಡಿಮೆಮಾಡಲು ಅರಣ್ಯ ಇಲಾಖೆಯು ವಿನೂತನ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮೃತಪಟ್ಟ ಜಾನುವಾರುಗಳಿಗೆ ಹೆಚ್ಚಿನ ಪರಿಹಾರ ಕಲ್ಪಿಸಲು ಮುಂದಾಗ ಬೇಕಾಗಿದೆ.

ಟಿ.ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ವೆಸ್ಟ್‍ನೆಮ್ಮಲೆ ಗ್ರಾಮದ ನಿವಾಸಿ ಚೊಟ್ಟೆಯಂಡಮಾಡ ಉದಯ್ ಎಂಬುವರ ಮನೆಯ ಹಿಂಭಾಗದಲ್ಲಿ ಹುಲಿ ಹೆಜ್ಜೆ ಕಂಡು ಬಂದಿದ್ದು ಹುದಿಕೇರಿ ಹೋಬಳಿಯ ಹೈಸೊಡ್ಲೂರು ಭಾಗದಲ್ಲಿ ಹುಲಿ ಸಂಚಾರವಿರುವ ಬಗ್ಗೆ ಹುಲಿಯ ಹೆಜ್ಜೆ ಗುರುತುಗಳು ಕಂಡು ಬಂದಿವೆ. ಗ್ರಾಮದ ಹೊಟ್ಟೆಂಗಡ ಕಾಶಿ, ಚೋೀನಿರ ಈಶ್ವರ ಎಂಬುವರ ತೋಟ,ಗದ್ದೆ ಹಾಗೂ ಲೈನ್‍ಮನೆಗಳ ಬಳಿ ಹುಲಿ ಕಾಣಿಸಿಕೊಂಡಿದ್ದು ಕಾರ್ಮಿಕರು ಭಯದ ವಾತಾವರಣದಲ್ಲಿ ಜೀವನ ಕಳೆಯು ವಂತಾಗಿದೆ ಎಂದು ಹುದಿಕೇರಿ ಗ್ರಾಮ ಪಂಚಾಯ್ತಿ ಸದಸ್ಯ ಮಿದೇರಿರ ನವೀನ್ ಅಭಿಪ್ರಾಯಪಟ್ಟಿದ್ದಾರೆ.

(ವಿಶೇಷ ವರದಿ : ಹೆಚ್.ಕೆ. ಜಗದೀಶ್)