ಮಡಿಕೇರಿ, ಡಿ. 20: ದೇಶದ ಅಲ್ಲಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಸಂಬಂಧ ಪ್ರತಿಭಟನೆ ಹಿನ್ನೆಲೆ; ರಾಜ್ಯದೆಲ್ಲೆಡೆ ಪೊಲೀಸ್ ಕಾಯ್ದೆ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಿದ್ದು; ಕೊಡಗಿಗೂ ಅನ್ವಿಯಿಸಲಿರುವ ಕಾರಣ; ಯಾವದೇ ಸಾರ್ವಜನಿಕ ಸಭೆ, ಮೆರವಣಿಗೆ, ಪ್ರತಿಭಟನೆಗಳಿಗೆ ಈಗಿನ ಪರಿಸ್ಥಿತಿಯಲ್ಲಿ ಅವಕಾಶ ಇರುವದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಸ್ಪಷ್ಟಪಡಿಸಿದ್ದಾರೆ.ಸುದ್ದಿಗಾರರು ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವದೇ ಕಾರ್ಯಕ್ರಮ ರೂಪಿಸುವ ಮುನ್ನ ಸಂಬಂಧಪಟ್ಟವರು ಪೊಲೀಸ್ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕೆಂದು ನೆನಪಿಸಿದರು. ಪೊಲೀಸ್ ಅನುಮತಿ ಹೊರತಾಗಿ ಯಾರೂ ಪ್ರತಿಭಟನೆಗೆ ಮುಂದಾಗಬಾರದು ಎಂದು ತಿಳಿ ಹೇಳಿದ ಅವರು; ಇಂತಹ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಕಾನೂನಿನ ಚೌಕಟ್ಟಿನಲ್ಲಿ ಅಗತ್ಯ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.(ಮೊದಲ ಪುಟದಿಂದ) ಶಾಂತಿ ಪ್ರಿಯರು : ಕೊಡಗಿನ ಜನತೆ ಯಾವದೇ ವದಂತಿಗಳಿಗೆ ಕಿವಿಗೊಡದೆ ಸದಾ ಶಾಂತಿಪ್ರ್ರಿಯರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು; ಪ್ರಸ್ತುತ ಸನ್ನಿವೇಶದಲ್ಲಿ ಇಲಾಖೆ ಮತ್ತು ಜಿಲ್ಲಾಡಳಿತದೊಂದಿಗೆ ಕೈಜೋಡಿಸ ಬೇಕೆಂದು ಸಲಹೆ ಮಾಡಿದರು. ಅಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ತಾ. 21 ರಂದು ಕೂಡ ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ಎಸ್ಪಿ ನೆನಪಿಸಿದರು.