ಮಡಿಕೇರಿ, ಡಿ.20 : ತಾ.26 ರಂದು ಬೆಳಿಗ್ಗೆ 8.05 ರಿಂದ 11.05 ರ ವರೆಗೆ ಸಂಭವಿಸಲಿರುವ ಅಪರೂಪದ ಕಂಕಣ ಸೂರ್ಯಗ್ರಹಣವನ್ನು ಕೊಡಗು ಜಿಲ್ಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸುರಕ್ಷಿತವಾಗಿ ವೀಕ್ಷಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕರೆ ನೀಡಿದ್ದಾರೆ.
ಕಂಕಣ ಸೂರ್ಯಗ್ರಹಣಕ್ಕೆ ಪೂರ್ವಭಾವಿಯಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಹೊರತಂದಿರುವ ಭಿತ್ತಿಪತ್ರವನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗ್ರಹಣವನ್ನು ಯಾರೂ ಕೂಡ ಬರೀಗಣ್ಣಿನಿಂದ ನೋಡದೆ ಸೌರ ಕನ್ನಡಕ ಮತ್ತು ಸುರಕ್ಷತಾ ಸಾಧನ/ಉಪಕರಣಗಳನ್ನು ಬಳಸಿ ಗ್ರಹಣ ವೀಕ್ಷಿಸುವಂತೆ ತಿಳಿಸಿದ್ದಾರೆ.
ಕುಟ್ಟದಲ್ಲಿ ಗ್ರಹಣ ವೀಕ್ಷಣೆ
ಗ್ರಹಣ ವೀಕ್ಷಣಾ ಕೇಂದ್ರವಾದ ಕುಟ್ಟದ ಕಾಯಿಮಾನಿ ಎಂಬ ಸ್ಥಳಕ್ಕೆ ಮಹಾರಾಷ್ಟ್ರದ ಪುಣೆ ಮಿತ್ತಿ ಸಂಸ್ಥೆ ಮತ್ತು ನೆರೆಯ ಕೇರಳದ ಖಗೋಳ ತಜ್ಞರು ಸೇರಿದಂತೆ ಮೈಸೂರು ಸೈನ್ಸ್ ಫೌಂಡೇಶನ್ ವತಿಯಿಂದ ಶಾಲಾ ಮಕ್ಕಳು, ಶಿಕ್ಷಕರು ಹಾಗೂ ನೆರೆಯ ಕೇರಳದ ಗಡಿಭಾಗದ ಖಗೋಳಾಸಕ್ತರು ಹಾಗೂ ಜಿಲ್ಲೆಯ ಗೋಣಿಕೊಪ್ಪ ಮತ್ತು ಸುತ್ತಮುತ್ತಲಿನ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಸೇರಿದಂತೆ 1,000 ಮಂದಿ ಸೇರುವ ನಿರೀಕ್ಷೆ ಇದೆ ಎಂದು ಸೂರ್ಯಗ್ರಹಣ ಕಾರ್ಯಕ್ರಮದ ಸಂಘಟಕರೂ ಆದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ.ಜಿ.ಪ್ರೇಮಕುಮಾರ್ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಮ್ಯಾನ್ಸ್ಸ್ ಕಾಂಪೌಡ್ ಬಳಿ ವೀಕ್ಷಣೆಗೆ ವ್ಯವಸ್ಥೆ
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ಜಿಲ್ಲಾ ಕೇಂದ್ರವಾದ ಮಡಿಕೇರಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಬಳಿಯ ಮ್ಯಾನ್ಸ್ ಕಾಂಪೌಂಡ್ ಬಳಿಯ ಮೈದಾನದಲ್ಲಿ ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ಸೂರ್ಯಗ್ರಹಣ ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದೂ ಅವರು ಹೇಳಿದರು.
ಶಾಲೆಗಳಲ್ಲಿ ಗ್ರಹಣ ವೀಕ್ಷಣೆ
ಸೂರ್ಯಗ್ರಹಣವನ್ನು ಶಾಲಾ ವಿದ್ಯಾರ್ಥಿಗಳು ಬರೀಗಣ್ಣಿನಿಂದ ವೀಕ್ಷಿಸದೆ ಸೌರ ಕನ್ನಡಕಗಳನ್ನು ಬಳಸಿಕೊಂಡು ಗ್ರಹಣವನ್ನು ಸುರಕ್ಷಿತವಾಗಿ ವೀಕ್ಷಿಸಲು ಶಾಲಾ ಶಿಕ್ಷಕರು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ ತಿಳಿಸಿದ್ದಾರೆ.
ಕಂಕಣ ಸೂರ್ಯಗ್ರಹಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಸಹಯೋಗದಲ್ಲಿ ಗ್ರಹಣಕ್ಕೆ ಪೂರ್ವಭಾವಿಯಾಗಿ ಶಾಲಾ ವಿದ್ಯಾರ್ಥಿಗಳು ಹಾಗೂ ನಾಗರಿಕರಲ್ಲಿ ಅರಿವು ಮೂಡಿಸುವ ಸಂಬಂಧ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಸೌರ ಕನ್ನಡಕಗಳನ್ನು ತರಿಸಿಕೊಂಡು ಸೂರ್ಯಗ್ರಹಣ ವೀಕ್ಷಣೆಗೆ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಶಾಲಾ ಮುಖ್ಯಸ್ಥರಿಗೆ ತಿಳಿಸಲಾಗಿದೆ.
ಸೂರ್ಯಗ್ರಹಣ ವೀಕ್ಷಣೆಗೆ ಸಂಬಂಧಿಸಿದಂತೆ ಶಾಲೆಗಳಲ್ಲಿ ಪೂರ್ವಭಾವಿಯಾಗಿ ಪೂರ್ವಸಿದ್ಧತೆ ನಡೆಸಿಕೊಂಡು ಸೌರ ವ್ಯವಸ್ಥೆ ಹಾಗೂ ಖಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಶಾಲಾ ಹಂತದಲ್ಲಿ ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸುವಂತೆ ಡಿಡಿಪಿಐ ತಿಳಿಸಿದ್ದಾರೆ.
ಶಿಕ್ಷಕರಿಗೆ ಕಾರ್ಯಾಗಾರ
ತಾ.23 ರಂದು ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‍ನಲ್ಲಿ ಬೆಳಿಗ್ಗೆ 9.30 ಕ್ಕೆ ಪ್ರೌಢಶಾಲಾ ವಿಜ್ಞಾನ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಸಂಪನ್ಮೂಲ ಶಿಕ್ಷಕರಿಗೆ ಸೂರ್ಯಗ್ರಹಣ ವೀಕ್ಷಣೆ ಹಾಗೂ ಖಗೋಳಶಾಸ್ತ್ರ ಕುರಿತು ಜಿಲ್ಲಾಮಟ್ಟದ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಮಚ್ಚಾಡೋ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸೂರ್ಯಗ್ರಹಣ ವೀಕ್ಷಣೆ ಕುರಿತು ಜನಜಾಗೃತಿ
ಕಂಕಣ ಸೂರ್ಯಗ್ರಹಣವನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳು ಸುರಕ್ಷಿತವಾಗಿ ವೀಕ್ಷಿಸುವ ಸಂಬಂಧ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಪೂರ್ವಭಾವಿಯಾಗಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಖಗೋಳಯಾನ ಜನಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸರ್ಕಾರಿ ಪಿಯೂ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೌರ ಕನ್ನಡಕಗಳನ್ನು ವಿತರಿಸಿ ಸೂರ್ಯಗ್ರಹಣವನ್ನು ಹೇಗೆ ವೀಕ್ಷಿಸಬೇಕು ಎಂಬ ಪ್ರಾತ್ಯಕ್ಷಿಕೆ ನಡೆಸಲಾಯಿತು. ವಿದ್ಯಾರ್ಥಿಗಳು ಸೌರ ಕನ್ನಡಕ ಬಳಸಿ ಖಗೋಳ ವೀಕ್ಷಿಸಿದರು.
ಹವ್ಯಾಸಿ ಖಗೋಳ ವೀಕ್ಷಕರೂ ಆದ ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಂಪನ್ಮೂಲ ವ್ಯಕ್ತಿ ಜಿ.ಶ್ರೀನಾಥ್ ಮಾತನಾಡಿ, ಈ ಶತಮಾನದಲ್ಲಿ ಸಂಭವಿಸಲಿರುವ ಕಂಕಣ ಸೂರ್ಯಗ್ರಹಣವು ಅಪರೂಪದ ಕೌತುಕ ವಿದ್ಯಾಮಾನವಾಗಿದೆ. ತಾ.26 ರಂದು ಸಂಭವಿಸಲಿರುವ ಕಂಕಣ ಸೂರ್ಯಗ್ರಹಣವನ್ನು ನಾವು 45 ವರ್ಷಗಳ ನಂತರ ಅಂದರೆ 2064 ರಲ್ಲಿ ವೀಕ್ಷಿಸಬಹುದಾಗಿದೆ. ಆದ್ದರಿಂದ ಈ ಅಪರೂಪದ ಸೂರ್ಯಗ್ರಹಣವನ್ನು ವಿದ್ಯಾರ್ಥಿಗಳು ಸೇರಿದಂತೆ ಖಗೋಳಾಸಕ್ತರು ಹಾಗೂ ನಾಗರಿಕರು ವೀಕ್ಷಿಸುವ ಮೂಲಕ ಖಗೋಳದ ಕೌತುಕ ಸನ್ನಿವೇಶವನ್ನು ಸವಿದು ಆನಂದಿಸಬೇಕು ಎಂದು ತಿಳಿಸಿದರು. ಸೂರ್ಯಗ್ರಹಣವನ್ನು ಸೌರ ಕನ್ನಡಕದ ಜತೆಗೆ ಕನ್ನಡಿ ಹಿಡಿದು ಸೂರ್ಯನ ಪ್ರತಿಬಿಂಬವನ್ನು ಗೋಡೆಗೆ ಹಿಡಿದು ಕೂಡ ವೀಕ್ಷಿಸಬಹುದು ಎಂದು ತಿಳಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ್ sಸೂರ್ಯಗ್ರಹಣ ವೀಕ್ಷಣೆ ಕುರಿತು ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಹೊರ ತಂದಿರುವ ಭಿತ್ತಿಪತ್ರ ಬಿಡುಗಡೆ ಗೊಳಿಸಿದರು. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಶಿವರಾಂ, ಉಪನ್ಯಾಸಕರಾದ ಎನ್.ಎಸ್.ಚಿದಾನಂದ, ಸಿದ್ಧರಾಜು, ನಾಗಪ್ಪ, ಚಂದ್ರಶೇಖರ್, ಅಂತೋಣಿ ಅಲ್ವಾರೀಸ್, ಶಿಕ್ಷಕಿ ಸೌಮ್ಯಲತಾ, ಶಾಲಾ – ಕಾಲೇಜಿನ ವಿದ್ಯಾರ್ಥಿಗಳು ಇದ್ದರು.
ಇದೇ ವೇಳೆ ಸೂರ್ಯಗ್ರಹಣ ವನ್ನು ಸೌರ ಕನ್ನಡಕ ಬಳಸಿ ಹೇಗೆ ವೀಕ್ಷಿಸಬೇಕು ಎಂಬ ಪ್ರಾತ್ಯಕ್ಷಿಕೆ ತೋರಿಸಲಾಯಿತು.
ಸೌರ ಕನ್ನಡಕ ಪೂರೈಕೆ
ಸೂರ್ಯಗ್ರಹಣ ವೀಕ್ಷಣೆ ಮತ್ತು ಸೌರ ಕನ್ನಡಕ ಪೂರೈಕೆ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಟಿ.ಜಿ. ಪ್ರೇಮಕುಮಾರ್ (ಮೊ.94485 88352), ಜಿ.ಶ್ರೀಹರ್ಷ (ಮೊ.948431263), ಜಿ.ಶ್ರೀನಾಥ್ (ಮೊ: 9448661470) ಸಂಪರ್ಕಿಸ ಬಹುದು. ಸೌರ ಕನ್ನಡಕಕ್ಕೆ ಸಂಬಂಧಿಸಿದಂತೆ ಡಿ.ಕೃಷ್ಣಚೈತನ್ಯ, ಗೋಣಿಕೊಪ್ಪ, (ಮೊ.9449202055), ಪಿ.ಆರ್. ಅಯ್ಯಪ್ಪ, ಇ.ಸಿ.ಓ. ಬಿಇಓ ಕಛೇರಿ, ವಿರಾಜಪೇಟೆ (ಮೊ. 9480309481), ಕೆ.ಯು.ರಂಜಿತ್, ಬಿ.ಆರ್.ಸಿ.ಕೇಂದ್ರ, ಮಡಿಕೇರಿ (ಮೊ.9482192964), ಕೆ.ಬಿ. ರಾಧಾಕೃಷ್ಣ, ಇ.ಸಿ.ಓ,ಬಿ.ಇ.ಓ.ಕಚೇರಿ, ಸೋಮವಾರಪೇಟೆ (ಮೊ. 9880099601), ಕೆ.ಮೂರ್ತಿ, ಶಿಕ್ಷಕರು, ಸರ್ಕಾರಿ ಜೂನಿಯರ್ ಕಾಲೇಜು, ಸೋಮವಾರಪೇಟೆ (ಮೊ: 9449403029) ಅವರನ್ನು ಸಂಪರ್ಕಿಸಬಹುದು.