ವೀರಾಜಪೇಟೆ, ಡಿ. 20: ವೀರಾಜಪೇಟೆ ಬಳಿಯ ಚೆಂಬೆಬೆಳ್ಳೂರು ಗ್ರಾಮದ ಶ್ರೀ ಭದ್ರಕಾಳಿ ದೇವಸ್ಥಾನದ ಹೆಸರಿನಲ್ಲಿ ಅನಾಮಧೇಯ ತಂಡವೊಂದು ಗೋಣಿಕೊಪ್ಪಲಿನ ಸುತ್ತಮುತ್ತ ಅಕ್ರಮವಾಗಿ ಚಂದಾ ವಸೂಲಾತಿಯಲ್ಲಿ ತೊಡಗಿರುವುದು ಪತ್ತೆಯಾಗಿದೆ. ಈ ಸಂಬಂಧ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮಂಡೇಪಂಡ ಮುತ್ತಪ್ಪ ತಿಳಿಸಿದ್ದಾರೆ.

ಭದ್ರಕಾಳಿ ದೇವಾಲಯದ ವತಿಯಿಂದ ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಅನಾಮಧೇಯ ತಂಡದ ಕಾರನ್ನು ಪತ್ತೆಹಚ್ಚಲಾಗಿದೆ. ಈ ತಂಡ ಭಕ್ತಾದಿಗಳಿಂದ ಚಂದಾ ವಸೂಲಿಗೆ ಬಂದಾಗ ಹತ್ತಿರದ ಪೊಲೀಸ್ ಠಾಣೆ ಇಲ್ಲವೇ ಅಧ್ಯಕ್ಷರ ಮೊಬೈಲ್ 9449255048ಗೆ ಸುಳಿವು ನೀಡುವಂತೆ ಮನವಿ ಮಾಡಿದ್ದಾರೆ.

ಚೆಂಬೆಬೆಳ್ಳೂರಿನ ಕೊಡವ ಕಲ್ಚರಲ್ ಸಮಿತಿ ಅಧ್ಯಕ್ಷ ಚಾರಿಮಂಡ ಬಾನು ಬೋಪಣ್ಣ ಮಾತನಾಡಿ ಆರು ತಿಂಗಳ ಹಿಂದೆಯೂ ಇದೇ ರೀತಿಯ ಅನಾಮಧೇಯ ತಂಡ ಅಕ್ರಮವಾಗಿ ಚಂದಾ ವಸೂಲಿ ಮಾಡುತ್ತಿದ್ದ ಕುರಿತು ಆಡಳಿತ ಮಂಡಳಿಗೆ ದೂರು ಬಂದಿದೆ. ಈಗ ಅದೇ ಚಾಳಿಯನ್ನು ಈ ತಂಡ ಮುಂದುವರೆಸಿದೆ, ಈ ಅನಾಮಧೇಯ ತಂಡದ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದರು.

ಗೋಷ್ಠಿಯಲ್ಲಿ ಸೋಮೆಯಂಡ ಸಂಪತ್, ಚಾರಿಮಂಡ ಜೀವನ್ ಹಾಗೂ ಚಂಬಾಂಡ ಭೀಮಯ್ಯ ಹಾಜರಿದ್ದರು.