(ಸಂದರ್ಶನ : ಟಿ. ಎಲ್. ಶ್ರೀನಿವಾಸ್)
‘ಬಲಗೈಯಲ್ಲಿ ದಾನ ನೀಡಿದ್ದು ಎಡಗೈಗೆ ಗೊತ್ತಾಗಬಾರದು’ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಹೀಗೇ ಬದುಕಿದವರು ಅದೆಷ್ಟೋ ಮಂದಿ. ಇವರೆಲ್ಲಾ ಎಲೆ ಮರೆಯ ಕಾಯಿಯಾ ಗಿಯೇ ಉಳಿಯಲು ಬಯಸುವ ಧೀಮಂತ ವ್ಯಕ್ತಿತ್ವದವರು. ಸಮಾಜ ಸೇವೆ ಮಾಡದೆಯೇ ಕೇವಲ ಪ್ರಚಾರಕ್ಕಾಗಿಯೇ ಹಪಹಪಿಸುವ ನೂರಾರು ‘ಕಿರಿಕ್ ಪಾರ್ಟಿ’ಗಳನ್ನು ನಾವು ದಿನನಿತ್ಯವೂ ನೋಡಬಹುದು. ಶಾಲಾ ಶಿಕ್ಷಕರಾಗಿ, ಸಹಕಾರಿಯಾಗಿ, ಪ್ರಗತಿಪರ ಚಿಂತಕರಾಗಿ, ರಾಜಕಾರಣಿಯಾಗಿ, ಕೊಡವ ಸಮಾಜದ ಸ್ಥಾಪಕರಾಗಿ, ಎಲ್ಲದಕ್ಕೂ ಮಿಗಿಲಾಗಿ ಉತ್ತಮ ಕೃಷಿಕರಾಗಿ ಬಾಳಿ ಬದುಕುತ್ತಿರುವವರನ್ನು ಕಾಣುವದು ಬಹಳ ವಿರಳ. ಇಂತಹ ಒಂದು ವ್ಯಕ್ತಿತ್ವ ಹುದಿಕೇರಿ ಸಮೀಪ ಕೋಣಗೇರಿಯಲ್ಲಿ ತಮ್ಮ 82 ನೇ ಇಳಿವಯಸ್ಸಿನಲ್ಲಿ ವ್ಯಕ್ತಿಯೊಬ್ಬರು ತಾವು ನಡೆದು ಬಂದ ಹಾದಿಯ ಬಗ್ಗೆ ಅವಲೋಕನ ಮಾಡುತ್ತಾ ಕುಳಿತಿದ್ದಾರೆ. 1977 ರಲ್ಲಿ ತುರ್ತು ಪರಿಸ್ಥಿತಿ ಸಂದರ್ಭ ಸರ್ಕಾರದ ನೀತಿಯನ್ನು ವಿರೋಧಿಸಿ ಭಾಷಣ ಮಾಡಿ ಜೈಲು ಸೇರಿದ್ದ ವ್ಯಕ್ತಿ ನಂತರ ತಮ್ಮ ಜೀವಿತಾವಧಿಯಲ್ಲಿ ಸಾಧನೆ ಮೆಟ್ಟಿಲೇರುತ್ತಾ ಹೋಗಿರುವದು ವಿಶೇಷ. ಈ ಬಗ್ಗೆ ಪ್ರಗತಿಪರ ಕೃಷಿಕ, ಚಿಂತನ ಶೀಲ ವ್ಯಕ್ತಿತ್ವದ ಚೆಕ್ಕೇರ ಸೋಮಯ್ಯ ಕುಶಾಲಪ್ಪ ಅವರ ಪರಿಚಯ ಮಾಡುವ ಒಂದು ಪ್ರಯತ್ನ ಮಾಡಲಾಗಿದೆ.
ಚೆಕ್ಕೇರ ಸೋಮಯ್ಯ ಅವರೀಗ 83ರ ಹೊಸ್ತಿಲಲ್ಲಿ ಇದ್ದಾರೆ. ಸರ್ಕಾರಿ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿಯೂ ವ್ಯಾಸಂಗ ಮಾಡಿದ ಇವರ ಸಾಮಾಜಿಕ ಕಳಕಳಿ 1965 ರಲ್ಲಿ ಹರಿಹರ ಗ್ರಾ.ಪಂ.ಸದಸ್ಯರಾಗಿ ಆಯ್ಕೆಯಾದ ನಂತರ ಆರಂಭವಾಗುತ್ತದೆ. ನಂತರ 1967ರಲ್ಲಿ ತಾಲೂಕು ಬೋರ್ಡ್ ಸದಸ್ಯರಾಗಿ 2 ವರ್ಷ ಸೇವೆ. ಶ್ರೀಮಂಗಲ ನಾಡು ಸಹಕಾರ ಬ್ಯಾಂಕ್ ನಿರ್ದೇಶಕರಾಗಿ, ವೀರಾಜಪೇಟೆ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾರೆ. ಹುದಿಕೇರಿ ಜನತಾ ಪ್ರೌಢಶಾಲೆ, ಪಿ.ಯು.ಕಾಲೇಜಿನ ಅಧ್ಯಕ್ಷರಾಗಿ ಸುಮಾರು 15 ವರ್ಷ ಸೇವೆ ಸಲ್ಲಿಸಿದ್ದಾರೆ.
1977 ರ ನಂತರ ಕೊಡಗು ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿಯೂ ಉತ್ತಮ ಸೇವೆ ಸಲ್ಲಿಸಿದವರು. ಕೊಡಗು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, ಗೋಣಿಕೊಪ್ಪಲು ಕಾವೇರಿ ಕಾಲೇಜು ನಿರ್ದೇಶಕರಾಗಿ ಅದರ ಏಳಿಗೆಗೆ ಶ್ರಮಿಸಿದ್ದಾರೆ.
ಹುದಿಕೇರಿ ಕೊಡವ ಸಮಾಜದ ಸ್ಥಾಪಕ ಅಧ್ಯಕ್ಷರಾಗಿ 2001ರಲ್ಲಿ ಆಯ್ಕೆ ಯಾಗುತ್ತಾರೆ. ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ನ್ಯಾಯಪೀಠದ ನಿರ್ದೇಶಕರಾಗಿ ಹಲವು ಕೌಟುಂಬಿಕ ವ್ಯಾಜ್ಯಗಳನ್ನು ಪರಿಹರಿಸಿರುವದು ಇವರ ಹೆಗ್ಗಳಿಕೆ. ಗೋಣಿಕೊಪ್ಪಲು ಕಾವೇರಿ ಕಾಲೇಜು ಅಸ್ತಿತ್ವದಲ್ಲಿ ಪ್ರಮುಖ ಪಾತ್ರವಹಿಸಿರುವ ದಾನಿ ಚಕ್ಕೇರ ಮುತ್ತಣ್ಣ ಅವರಂತೆಯೇ ಮೃದು ಹೃದಯದ, ನೇರ, ದಿಟ್ಟ, ನಿಷ್ಠುರವಾದಿ ಬದುಕನ್ನು ಸವೆಸಿರುವ ಚೆಕ್ಕೇರ ಸೋಮಯ್ಯ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದವರು. ಶಿರಡಿ ಸಾಯಿಬಾಬಾ ಭಕ್ತರಾಗಿರುವ ಇವರು, ಕೊಡಗು ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಹಲವು ರೈತರು ತಮ್ಮ ಭತ್ತದ ಮಡಿಗಳನ್ನು ಪಾಳು ಬಿಟ್ಟಿದ್ದರೂ ‘ಸೋಮಯ್ಯ ಅಂಕಲ್’ ಈಗಲೂ ಸುಮಾರು 10 ಎಕರೆ ಮಡಿಗಳಲ್ಲಿ ಭತ್ತದ ಉತ್ಪಾದನೆ ಮಾಡುತ್ತಿದ್ದಾರೆ. ಅಂತರ್ಜಲ ಮಟ್ಟ ಕುಸಿಯದಂತೆ ಕಾಪಾಡಲು, ಇಂಗು ಗುಂಡಿಯಂತೆ ಕೆಲಸ ಮಾಡುವ ಭತ್ತದ ಕೃಷಿಯನ್ನು ಯಾರೂ ಕೈಬಿಡಬೇಡಿ ಎಂಬದು ಇವರ ಕಳಕಳಿಯ ಮನವಿ.
ರಾಜಕೀಯವಾಗಿಯೂ ಹೋರಾಟ: ಸೋಮಯ್ಯ ಅವರು ವಿವಿಧ ರಾಜಕೀಯ ಪಕ್ಷದಲ್ಲಿಯೂ ಗುರುತಿಸಿಕೊಂಡಿದ್ದರೂ, ಯಾವದೇ ರಾಜಕೀಯ ಪಕ್ಷದಲ್ಲಿ ಅಧಿಕಾರಕ್ಕಾಗಿ ಚೀಟಿ ಕುಳಿತುಕೊಂಡಿಲ್ಲ ಎನ್ನಬಹುದು. ಮೊದಲಿಗೆ ಜನಸಂಘದೊಂದಿಗೆ ರಾಜಕೀಯ ಜೀವನ ಪ್ರಾರಂಭಿಸಿದ ಇವರು, ನಂತರ ಜನತಾ ಪಕ್ಷ, ಭಾರತೀಯ ಜನತಾ ಪಕ್ಷ, ಕನ್ನಡ ನಾಡು ಪಕ್ಷದ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಕಾಂಗ್ರೆಸ್ ಪಕ್ಷದಲ್ಲಿದ್ದು, ಮಾಜಿ ಶಾಸಕ, ಹಿರಿಯ ವಕೀಲ ದಿ. ಎ. ಕೆ. ಸುಬ್ಬಯ್ಯನವರ ನಿಕಟವರ್ತಿ ಎಂದು ಹೇಳಲಾಗುತ್ತಿದ್ದರೂ ಎಲ್ಲಿಯೂ ವಿವಾದಾತ್ಮಕ ವ್ಯಕ್ತಿಯಾಗಿ ಕಂಡು ಬಂದಿಲ್ಲದಿರುವದು ಇವರ ರಾಜಕೀಯ ಮುತ್ಸದ್ದಿತನಕ್ಕೆ ಉದಾಹರಣೆ.
ಚೆಕ್ಕೇರ ಸೋಮಯ್ಯ ವೈಯಕ್ತಿಕ ಪರಿಚಯ: ಬಿ.ಶೆಟ್ಟಿಗೇರಿ ಕಾಳೇಂಗಡ ಮನೆಯಲ್ಲಿ 17-07-1937 ರಲ್ಲಿ ಜನನ. ಚೆಕ್ಕೇರ ಕುಶಾಲಪ್ಪ ದಂಪತಿಯ ಏಕೈಕ ಪುತ್ರ. ಬಿ. ಶೆಟ್ಟಿಗೇರಿ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ವೀರಾಜಪೇಟೆ ಸರ್ಕಾರಿ ಪ್ರೌಢಶಾಲೆ ಮುಂದುವರಿದು ಹುದಿಕೇರಿ ಜನತಾ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.ವ್ಯಾಸಂಗ ಮತ್ತು ಶಾಲಾ ನಾಯಕನಾಗಿಯೂ ಕಾರ್ಯನಿರ್ವಹಿಸುತ್ತಾರೆ. ಮೈಸೂರು ಸಂತ ಫಿಲೋಮಿನಾ ಪಿ.ಯು.ಕಾಲೇಜಿನಲ್ಲಿ ವ್ಯಾಸಂಗ ನಂತರ ಎರಡು ವರ್ಷ ಸರ್ಕಾರಿ ಶಾಲಾ ಶಿಕ್ಷಕರಾಗಿಯೂ ಸೇವೆ ಸಲ್ಲಿಸುತ್ತಾರೆ. ಇವರ ಮಾವ ಕಾಳೇಂಗಡ ಚಿಣ್ಣಪ್ಪನವರು ಸ್ವಾತಂತ್ರ್ಯ ಹೋರಾಟಗಾರರು. 1964 ರಲ್ಲಿ ನಾಲ್ಕೇರಿಯ ಪಾರುವಂಗಡ ಪಾರ್ವತಿ ಅವರೊಂದಿಗೆ ವಿವಾಹ. ಪತಿಯ ಯಶಸ್ಸಿನಲ್ಲಿ ಪತ್ನಿಯ ತ್ಯಾಗ ಮನೋಭಾವನೆಯನ್ನೂ ಉಲ್ಲೇಖಿಸಬೇಕಾಗುತ್ತದೆ. ಇವರಿಗೆ ಅರುಣ, ಸುಧೀರ್ ಹಾಗೂ ಗಣಪತಿ ಮೂವರು ಪುತ್ರರು.
ತಮ್ಮ ಕಠಿಣ ಪರಿಶ್ರಮ ಹಾಗೂ ಕೃಷಿಯಲ್ಲಿ ನಂಬಿಕೆ ಇರಿಸಿದ ಸೋಮಯ್ಯ ಅವರು ಮೂರು ಎಕರೆ ಜಮೀನಿನೊಂದಿಗೆ ತಮ್ಮ ಕಾಫಿ ಮತ್ತು ಭತ್ತದ ಉತ್ಪಾದನೆ ಕೈಗೊಳ್ಳುತ್ತಾರೆ. ಇದೀಗ ಕೋಣಗೇರಿ, ಬೆಳ್ಳೂರು, ಹೈಸೊಡ್ಲೂರು ಒಳಗೊಂಡಂತೆ ತಮ್ಮ ಗಂಡು ಮಕ್ಕಳ ಸಹಕಾರದೊಂದಿಗೆ ಗದ್ದೆ ಒಳಗೊಂಡಂತೆ ತೋಟವನ್ನು 70 ಎಕರೆವರೆಗೆ ವಿಸ್ತರಿಸಿ ಸಾಧನೆ ಮಾಡಿದ್ದಾರೆ. ಚೆಕ್ಕೇರ ಕುಟುಂಬದಲ್ಲಿಯೇ ಹೆಸರು ಮಾಡಿದ ಕೆಲವೇ ಕೆಲವು ಸದಸ್ಯರಲ್ಲಿ ಇವರೂ ಒಬ್ಬರಾಗಿದ್ದಾರೆ. ‘ಕಾಯಕವೇ ಕೈಲಾಸ’ ಎಂದು ನಂಬಿರುವ ಕೊಡಗು ಜಿಲ್ಲೆಯ ಕೆಲವೇ ಯಶಸ್ವಿ ಕೃಷಿಕರಲ್ಲಿ ಇವರೂ ಒಬ್ಬರು. ಚೆಕ್ಕೇರ ಕುಟುಂಬಸ್ಥರು ಹಾಗೂ ಇವರಿಂದ ಅಭಿವೃದ್ಧಿ ಹೊಂದಿದ ಸಂಘ ಸಂಸ್ಥೆಗಳು, ಸಮಾಜಗಳು ಇವರನ್ನು ಸನ್ಮಾನಿಸಿ ಗುರುತಿಸುವ ಕೆಲಸ ಮಾಡಬೇಕಾಗಿದೆ.