ಮಡಿಕೇರಿ, ಡಿ. 19: ಅಧಿಕಾರಿವರ್ಗ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ನಿರಾಸಕ್ತಿಗಳಿಂದಾಗಿ ಬಡವರ್ಗದ ಮಂದಿ ಭೂಮಿಯ ಹಕ್ಕಿನಿಂದ ವಂಚಿತವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಶೀಘ್ರ ಜಿಲ್ಲೆಯಲ್ಲಿ ಅಕ್ರಮ ಸಕ್ರಮ ಸಮಿತಿಯನ್ನು ರಚಿಸಿ ಭೂಮಿಯ ಹಕ್ಕನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಭೂ ಹಕ್ಕುದಾರರರ ವೇದಿಕೆಯ ಜಿಲ್ಲಾ ಘಟಕ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾ ಸಂಚಾಲಕ ಸುನಂದ್ ಕುಮಾರ್, ಜಿಲ್ಲಾ ವ್ಯಾಪ್ತಿಯಲ್ಲಿ ಅಲ್ಪಸ್ವಲ್ಪ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅದರ ಸಕ್ರಮಕ್ಕಾಗಿ ಬಡ ರೈತಾಪಿ ವರ್ಗ, ಪರಿಶಿಷ್ಟ ಸಮೂಹ ಮತ್ತು ಗಿರಿಜನ ಸಮೂಹ ಸಲ್ಲಿಸಿರುವ 11 ಸಾವಿರ ಅರ್ಜಿಗಳು ವಿಲೇವಾರಿಯಾಗದೆ ಹಾಗೆಯೇ ಉಳಿದಿದೆಯೆಂದು ಬೇಸರ ವ್ಯಕ್ತಪಡಿಸಿ, ಅಕ್ರಮ ಸಕ್ರಮಕ್ಕಾಗಿ ಫಾರಂ ನಂ. 50, 53 ಮತ್ತು ಇತ್ತೀಚಿನ ಫಾರಂ ನಂ. 57 ರಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿಯಲ್ಲಿ ಶೇ. 10 ರಷ್ಟು ಪ್ರಗತಿಯೂ ಆಗಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಗಿರಿಜನರು, ಬಡ ಮತ್ತು ಸಣ್ಣ ರೈತರು ಸರ್ಕಾರಿ ಜಾಗದಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು, ಅರಣ್ಯ ಪರಿಸರ ಕಾಪಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಂತಹ ಮಂದಿ ತಮ್ಮ ಜಾಗದ ಸಕ್ರಮಕ್ಕೆ ಅರ್ಜಿಗಳನ್ನು ಸಲ್ಲಿಸಿ ದಶಕಗಳೇ ಕಳೆದಿದ್ದರೂ, ಭೂಮಿಯ ಹಕ್ಕುಪತ್ರ ದೊರಕಿಲ್ಲ. ಇದರಿಂದ ಸರ್ಕಾರದ ಸೌಲಭ್ಯಗಳನ್ನು ಹೊಂದಿಕೊಳ್ಳಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಕಳವಳ ವ್ಯಕ್ತಪಡಿಸಿ, ಪ್ರಸ್ತುತ ಸಾಕಷ್ಟು ಮಂದಿ ಭೂ ಸಕ್ರಮಕ್ಕಾಗಿ ಸಲ್ಲಿಸಿರುವ ಅರ್ಜಿಗಳೇ ತಹಶೀಲ್ದಾರ್ ಕಚೇರಿಯಲ್ಲಿ ನಾಪತ್ತೆಯಾಗಿರುವ ಘಟನೆಗಳು ಇದೆ. ತಾವು ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿ ಹೇಗಿದೆ ಎನ್ನುವ ಕನಿಷ್ಟ ಮಾಹಿತಿಯೂ ದೊರಕದ ಪರಿಸ್ಥಿತಿ ಇದೆ. ಆದಷ್ಟು ಶೀಘ್ರ ಅಕ್ರಮ ಸಕ್ರಮದಡಿ ಸಲ್ಲಿಕೆಯಾದ ಅರ್ಜಿಗಳನ್ನು ಜೇಷ್ಠತಾ ಆಧಾರದಲ್ಲಿ ವಿಲೆÉೀವಾರಿ ಮಾಡಬೇಕೆಂದು ಒತ್ತಾಯಿಸಿದರು. ಅರಣ್ಯ ಹಕ್ಕು ಕಾಯ್ದೆ ಜಾರಿಯಾಗಿದ್ದರೂ ಇಂದಿಗೂ ಅರಣ್ಯ ವಾಸಿ ಗಿರಿಜನರಿಗೆ ಸಮುದಾಯದ ಹಕ್ಕು, ವೈಯಕ್ತಿಕ ಹಕ್ಕನ್ನು ಸಂಪೂರ್ಣವಾಗಿ ನೀಡಿಲ್ಲ. ಈ ಬಗ್ಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ವೇದಿಕೆಯ ಜಿಲ್ಲಾಧ್ಯಕ್ಷ ಎಸ್.ಕೆ. ಪುಟ್ಟಸ್ವಾಮಿ ಮಾತನಾಡಿ, ಬಡ ವರ್ಗದ ಮಂದಿ ಸರ್ಕಾರದ ಮೂರು ಮುಕ್ಕಾಲು ಸೆಂಟ್ ಜಾಗವನ್ನಷ್ಟೆ ಹೊಂದಿಕೊಂಡು ಬದುಕು ನಡೆಸುತ್ತಿದ್ದು, ನಾಲ್ಕೈದು ಎಕರೆ ಜಾಗವನ್ನೇನು ಒತ್ತುವರಿ ಮಾಡಿಕೊಂಡಿಲ್ಲ. ಇರುವ ಜಾಗಕ್ಕೆ ಹಕ್ಕುಪತ್ರವನ್ನು ಪಡೆಯಲು ಇಲಾಖೆಗಳಿಗೆ ನೂರಾರು ಬಾರಿ ಸುತ್ತಾಡಿದರು ಪ್ರಯೋಜನ ದೊರಕದ ಪರಿಸ್ಥಿತಿ ಇದೆ. ಕೇವಲ ಪ್ರಭಾವಿಗಳು, ರಾಜಕಾರಣಿಗಳಿಗೆ ಬೇಕಾದವರಿಗೆ ಮಾತ್ರ ಹಕ್ಕುಪತ್ರ ಪಡೆಯುವ ಪರಿಸ್ಥಿತಿ ಇದೆಯೆಂದು ಆರೋಪಿಸಿ, ಆದಷ್ಟು ಶೀಘ್ರ ಅಕ್ರಮ-ಸಕ್ರಮ ಸಮಿತಿ ರಚಿಸಿ ಅರ್ಜಿಗಳ ವಿಲೇವಾರಿ ಮಾಡಿ ಬಡ ಮಂದಿಗೆ ನ್ಯಾಯ ದೊರಕಿಸಿಕೊಡಬೇಕೆಂದರು.
ವೇದಿಕೆಯ ಮಡಿಕೇರಿ ತಾಲೂಕು ಅಧ್ಯಕ್ಷ ಬಿ.ವಿ. ಚಂಗಪ್ಪ ಮಾತನಾಡಿ, ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರೂ ಭೂಮಿಯ ಹಕ್ಕುಪತ್ರ ದೊರಕದೆ ಬಡವರ್ಗದ ಮಂದಿ ಬೇಸತ್ತಿದ್ದಾರೆ. ಇಲ್ಲಿಯವರೆಗೆ ಜಾಗದ ಹಕ್ಕು ನೀಡಲು ಸಿ ಮತ್ತು ಡಿ ವರ್ಗದ ಜಾಗವೆಂದು, ಕಸ್ತೂರಿ ರಂಗನ್ ವರದಿಯೆಂದು ಸಬೂಬುಗಳನ್ನು ನೀಡಲಾಗುತ್ತಿತ್ತು. ಇನ್ನಾದರು ಬಡ ಮಂದಿಯ ಬೇಡಿಕೆ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಗೊಷ್ಠಿಯಲ್ಲಿ ವೇದಿಕೆಯ ಸದಸ್ಯರಾದ ಕೆ.ಕೆ. ಗಣೇಶ್ ಉಪಸ್ಥಿತರಿದ್ದರು.