ಮಡಿಕೇರಿ, ಡಿ. 18: ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಪಿಂಚಣಿ ಬೇಡಿಕೆಯನ್ನು ಜ. 9 ರೊಳಗೆ ಈಡೇರಿಸದಿದ್ದಲ್ಲಿ ಜ. 10 ರಿಂದ ಬೆಂಗಳೂರಿನಲ್ಲಿ ಹೋರಾಟವನ್ನು ಆರಂಭಿಸಲಿರುವುದಾಗಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಘೋಷಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ಪೂಜಾರ್, 2006ರ ನಂತರ ನೇಮಕ ಹೊಂದಿ ವೇತನ ಪಡೆಯುತ್ತಿರುವ ಹಾಗೂ ಮೊದಲೇ ನೇಮಕಗೊಂಡು ನಂತರ ಅನುದಾನದಕ್ಕೆ ಒಳಪಟ್ಟು ವೇತನ ಪಡೆಯುತ್ತಾ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಹಳೆಯ ಪಿಂಚಣಿಯಾಗಲಿ, ಅಥವಾ ನೂತನ ಪಿಂಚಣಿ ಯೋಜನೆಯ ಸೌಲಭ್ಯವಿಲ್ಲದೆ ನಿವೃತ್ತಿಯಾಗುತ್ತಿದ್ದಾರೆ. ಇದರಿಂದಾಗಿ ಅನುದಾನಿತ ಸಂಸ್ಥೆಗಳ ಸಾವಿರಾರು ನೌಕರರು ಕೊನೆಯ ತಿಂಗಳ ಸಂಬಳ ಮಾತ್ರ ಪಡೆದು ಜೀವನ ನಿರ್ವಹಣೆ ಮಾಡಲಾಗದೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ ಎಂದು ನುಡಿದರು.
ಪ್ರತೀ ವರ್ಷ ಹೋರಾಟ ನಡೆಸಿದ ಸಂದರ್ಭದಲ್ಲೂ ಸರಕಾರಗಳು ಹುಸಿ ಭರವಸೆ ನೀಡಿ ಸಾವಿರಾರು ನೌಕರರಿಗೆ ಮೋಸ ಮಾಡುತ್ತಲೇ ಬಂದಿದ್ದು, ಸರಕಾರಗಳ ಹಠಮಾರಿ ಧೋರಣೆಗೆ ಬೇಸತ್ತು ಇದೀಗ ಕೊನೆಯ ಹೋರಾಟಕ್ಕೆ ಸಜ್ಜಾಗಿರುವುದಾಗಿ ಅವರು ತಿಳಿಸಿದರು. ಕಳೆದ ಸಾಲಿನ ಅಕ್ಟೋಬರ್‍ನಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಹೋರಾಟ ಮಾಡುತ್ತಿದ್ದ ಸಂದರ್ಭ ಅಂದು ವಿಪಕ್ಷ ನಾಯಕರಾಗಿದ್ದ ಇಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಮಗೆ ಬೆಂಬಲ ಸೂಚಿಸುವುದರೊಂದಿಗೆ ಪಿಂಚಣಿ ಪ್ರತಿಯೊಬ್ಬ ನೌಕರನ ಹಕ್ಕು, ಇದನ್ನು ಕಡ್ಡಾಯವಾಗಿ ನೀಡಲೇಬೇಕು ಎಂದು ಪ್ರತಿಪಾದಿಸುವುದರೊಂದಿಗೆ ಅಂದಿನ ಸರಕಾರದ ವಿರುದ್ಧ ಧ್ವನಿ ಎತ್ತಿದ್ದರು. ಇದೀಗ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿರುವುದರಿಂದ ನಮ್ಮ ನೋವನ್ನು ಅರಿತು ಕೂಡಲೇ ಸ್ಪಂದಿಸಬೇಕೆಂದು ಒತ್ತಾಯಿಸಿ ತಾ. 21 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸಾಂಕೇತಿಕವಾಗಿ ಮನವಿ ಸಲ್ಲಿಸಲಾಗುವುದು ಎಂದು ನುಡಿದರು. ಇದು ಪಿಂಚಣಿ ವಂಚಿತ ನೌಕರರು ಸರಕಾರಕ್ಕೆ ನೀಡುವ ಅಂತಿಮ ಗಡುವು ಆಗಿದ್ದು, ಮುಂಬರುವ ಜನವರಿ 9 ರೊಳಗಾಗಿ ಸರಕಾರ ಬೇಡಿಕೆ ಈಡೇರಿಸದಿದ್ದಲ್ಲಿ ರಾಜ್ಯದ ಸುಮಾರು 60 ಸಾವಿರಕ್ಕೂ ಅಧಿಕ ಮಂದಿ ಪಿಂಚಣಿ ವಂಚಿತ ನೌಕರರು ಜ. 10 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಪಡಿಞÁರಂಡ ಪ್ರಭುಕುಮಾರ್, ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ವಿಲ್ಫ್ರೆಡ್ ಕ್ರಾಸ್ತ, ನಿರ್ದೇಶಕ ಮದುಲೈಮುತ್ತು ಉಪಸ್ಥಿತರಿದ್ದರು.