ಮಡಿಕೇರಿ, ಡಿ. 19: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ತಾಲೂಕಿನ ಕೋಟೆ ಪೆರಾಜೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಮಕ್ಕಳ ವಿಜ್ಞಾನ ಹಬ್ಬ 2019 ನಡೆಯಿತು.
ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಸದಸ್ಯರಾದ ನಾಗೇಶ್ ಕುಂದಲ್ಪಾಡಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಈ ಕಾರ್ಯಕ್ರಮವು ಒಂದು ಮಾದರಿ ಕಾರ್ಯಕ್ರಮವಾಗಿ ರೂಪುಗೊಂಡಿದೆ. ವಿಜ್ಞಾನವು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ ಎಂದರು.
ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಮಾತನಾಡಿ, ವಿದ್ಯಾರ್ಥಿಗಳಿಗೆ ವಿಜ್ಞಾನ ಎಲ್ಲಿದೆ, ಯಾಕೆ ಬೇಕು ಎಂಬ ಮಾಹಿತಿ ನೀಡಿದರು. ಎಸ್‍ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆಯಲ್ಲಿ ಈ ರೀತಿಯ ಕಾರ್ಯಕ್ರಮಗಳು ಹಮ್ಮಿಕೊಂಡಿರು ವುದರಿಂದ ಸಂತೋಷ ತಂದಿದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಮಾತನಾಡಿದರು. ಮಡಿಕೇರಿ ತಾಲೂಕು ಪ್ರೌಢಶಾಲಾ ವಿಭಾಗದ ಬಿಆರ್‍ಪಿ ರಂಜಿತ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ರಾದ ಚಿನ್ನಪ್ಪ ಅಡ್ಕ, ಶಿವಕುಮಾರ್ ಅಮೆಚೂರ್, ಉದಯಚಂದ್ರ ಕುಂಬಳಚೇರಿ, ಪೆರಾಜೆ ಜ್ಯೋತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ದೊಡ್ಡಣ್ಣ ಬರೆಮೇಲು ಭಾಗವಹಿಸಿದ್ದರು. ಸಿಆರ್‍ಪಿ ಯು.ಎಸ್. ರೇಖಾ ಸ್ವಾಗತಿಸಿದರೆ, ಮುಖ್ಯ ಶಿಕ್ಷಕರಾದ ಶ್ರೀನಿವಾಸ್ ರಾವ್ ವಂದಿಸಿದರು. ವಿಜ್ಞಾನ ಹಬ್ಬದ ಅಂಗವಾಗಿ ಮೆರವಣಿಗೆ ನಡೆಯಿತು. ಮೆರವಣಿಗೆ ಯಲ್ಲಿ ಪೆರಾಜೆ ಕ್ಲಸ್ಟರಿನ 6-8ನೇ ತರಗತಿ ವಿದ್ಯಾರ್ಥಿಗಳು ವಿವಿಧ ವಿನೋಧಾವಳಿಗಳಿಂದ ರಂಜಿಸಿದರೆ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.