ಕೂಡಿಗೆ, ಡಿ. 19: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು, ಕಾಳಿದೇವನಹೊಸೂರು, ಮಾವಿನಹಳ್ಳ, ಸೀಗೆಹೊಸೂರು ವ್ಯಾಪ್ತಿಯಲ್ಲಿ ಕಳೆದ ಹದಿನೈದು ದಿನಗಳಿಂದ ಕಾಡಾನೆ ಹಿಂಡು ಭಾರಿ ಬೆಳೆಗಳನ್ನು ನಾಶ ಪಡಿಸುತ್ತಿದೆ. ಈ ಭಾಗದಲ್ಲಿ 12 ಎಕರೆ ಪ್ರದೇಶದ ಭತ್ತದ ಬೆಳೆಯನ್ನು ಸಂಪೂರ್ಣ ನಾಶ ಮಾಡಿವೆ. ರೈತರ, ಗ್ರಾಮಸ್ಥರ ದೂರಿನ ಮೇರೆಗೆ ಸ್ಥಳಕ್ಕೆ ಡಿಎಫ್‍ಒ ಪ್ರಭಾಕರ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಬೆಳೆ ನಾಶವಾಗಿರುವುದನ್ನು ಪರಿಶೀಲಿಸಿದರು.

ಕಾಡಾನೆಗಳು ಆನೆಕಾಡಿನಿಂದ ಬೆಂಡೆಬೆಟ್ಟ ಮಾರ್ಗವಾಗಿ ಹಾರಂಗಿ ನದಿಯನ್ನು ದಾಟಿ ಇತ್ತ ಹುದುಗೂರು ವ್ಯಾಪ್ತಿಗಳಲ್ಲಿ ಅಡ್ಡಾಡುತಿದ್ದು, ರೈತರು ಬೆಳೆದಿದ್ದ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ನಷ್ಟಪಡಿಸಿರುವ ಹಿನ್ನೆಲೆಯಲ್ಲಿ ಹಾರಂಗಿ ನದಿ ದಡದಲ್ಲಿ ವೀಕ್ಷಿಸಿದ ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಆಲಿಸಿದರು.

ಈ ವ್ಯಾಪ್ತಿಯಲ್ಲಿ ಸುಮಾರು 35ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಭತ್ತವನ್ನು ಬೆಳೆದಿದ್ದು, ಬೆಳೆಯು ಈಗಾಗಲೇ ಕೊಯ್ಲಿಗೆ ಬಂದಿದೆ. ಕೊಯ್ಲಿಗೆ ಬಂದಿರುವ ಬೆಳೆಯನ್ನು ಕಾಡಾನೆಗಳು ದಿನಂಪ್ರತಿ ನಾಶ ಪಡಿಸುತ್ತಿವೆ. ಕೈಗೆ ಬಂದಿರುವ ಬೆಳೆಯನ್ನು ಆನೆಗಳಿಂದ ನಾಶಪಡಿಸದಂತೆ ನೋಡಿಕೊಳ್ಳಲು ರಾತ್ರಿ ಕಾವಲು ಕಾದರೂ ಸಹ ಕಾಡಾನೆಗಳ ಹಿಂಡು ಬೆಳೆಯನ್ನು ನಾಶ ಪಡಿಸುತ್ತಲೇ ಇವೆ. ಒಂದು ಕಡೆಯಿಂದ ಕಾಡಾನೆಗಳನ್ನು ಓಡಿಸಿದರೆ ಮತ್ತೆ ಅವು ಮತ್ತೊಂದು ಗ್ರಾಮಗಳತ್ತ ಧಾವಿಸುತ್ತವೆ ಅಲ್ಲಿ ಓಡಿಸಿದರೇ ಇನ್ನೊಂದು ಗ್ರಾಮಗಳತ್ತ ಹೋಗುತ್ತಿವೆ. ಆನೆಗಳನ್ನು ಕಾಯುವುದೇ ಕೆಲಸವಾಗಿ ಹೋಗಿದೆ. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ದೂರು ನೀಡಿದರೆ, ಕಾಡಾನೆಗಳನ್ನು ಕಾಡಿಗಟ್ಟಲಾಗುತ್ತಿದೆ ಎಂದು ಹೇಳುತ್ತಾರೆ. ಆದರೆ, ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಬೆಳೆಯು ಸಂಪೂರ್ಣವಾಗಿ ನಾಶವಾಗಿದ್ದು, ಬೆಳೆ ಪರಿಹಾರವನ್ನು ಇಲಾಖೆ ವತಿಯಿಂದ ನೀಡಬೇಕು ಎಂದು ಅಧಿಕಾರಿಗಳೊಂದಿಗೆ ಗ್ರಾಮಸ್ಥರು ಮಾತಿನ ಚಕಮಕಿ ನಡೆಸಿದರು.

ಈಗಾಗಲೇ ಹುದುಗೂರು ವ್ಯಾಪ್ತಿಯ ನಾಲ್ಕು ಗ್ರಾಮಗಳಲ್ಲಿ ಕಾಡಾನೆಗಳು ರಾತ್ರಿ, ಹಗಲು ಸಮಯದಲ್ಲಿಯೂ ಹೊಳೆಯ ದಡದಲ್ಲಿಯೇ ಇದ್ದು, ಅವುಗಳನ್ನು ಆನೆಕಾಡಿನತ್ತ ಓಡಿಸಲು ಅರಣ್ಯ ಇಲಾಖೆಯು ಸೂಕ್ತ ಕ್ರಮಕೈಗೊಳ್ಳಬೇಕು. ಗ್ರಾಮಗಳತ್ತ ಬರುತ್ತಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕು. ಕಾಡಾನೆಗಳು ಗ್ರಾಮಗಳತ್ತ ಬರುವ ದಾರಿಗಳನ್ನು ಪರಿಶೀಲಿಸಿ ಅಲ್ಲಿಗೆ ಕಂದಕಗಳನ್ನು, ಸೋಲಾರ್ ವ್ಯವಸ್ಥೆ ಮಾಡಬೇಕು. ಅರಣ್ಯ ಇಲಾಖೆ ಸಿಬ್ಬಂದಿಗಳು ರಾತ್ರಿವೇಳೆ ಬೀಟ್ ನಡೆಸಿ, ಕಾಡಾನೆಗಳು ಗ್ರಾಮಗಳತ್ತ ಬರದಂತೆ ಪಟಾಕಿ ಸಿಡಿಸಿ ಕಾಡಿಗಟ್ಟಬೇಕು. ಅರಣ್ಯ ಇಲಾಖೆಯ ಸಿಬ್ಬಂದಿ ನಮ್ಮೊಂದಿಗೆ ಸ್ಪಂದಿಸಿದಲ್ಲಿ ಸಿಬ್ಬಂದಿಗಳೊಂದಿಗೆ ಕಾಡಾನೆಗಳನ್ನು ಕಾಡಿಗಟ್ಟಲು ನಾವು ಕೂಡ ಸಹಕಾರ ನೀಡುತ್ತೇವೆ ಎಂದು ಗ್ರಾಮಸ್ಥರು ಅಧಿಕಾರಿಗಳೊಂದಿಗೆ ಹೇಳಿದರು. ಸೀಗೆ ಹೊಸೂರು ಗ್ರಾಮದ ರೈತರು ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭ ಎ.ಸಿ.ಎಫ್. ನೆಹರು, ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿ ಶಮ ಹುದುಗೂರು ಉಪ ವಲಯ ಅರಣ್ಯ ಅಧಿಕಾರಿ ಸತೀಶ್, ಹಾಗೂ ಈ ಭಾಗದ ಗ್ರಾಮಸ್ಥರುಗಳಾದ ಪ್ರಭಾಕರನ್, ರವಿ, ನಾಗರಾಜ, ಬಿ. ಚಿಣ್ಣಪ್ಪ, ಮಣಿ, ಸೋಮಯ್ಯ, ದಿನೇಶ್, ದೇವರಾಜ, ರಾಜಣ್ಣ ಸೇರಿದಂತೆ ನೂರಾರು ರೈತರು ಹಾಜರಿದ್ದರು.

ಡಿಎಫ್‍ಒ ಪ್ರಭಾಕರನ್ ಸುದ್ದಿಗಾರರೊಂದಿಗೆ ಮಾತನಾಡಿ, ಈ ಭಾಗದಲ್ಲಿ ಕಾಡಾನೆಗಳು ಭಾರೀ ನಷ್ಟಪಡಿಸಿವೆ. ಕಾಡಾನೆಗಳು ಬರುವ ಹಾರಂಗಿ ನದಿ ದಡದ 3-4 ಕಿ.ಲೋ. ಮೀಟರ್ ವ್ಯಾಪ್ತಿಯಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಈ ಭಾಗಗಳಿಗೆ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು ಅಲ್ಲದೆ ರೈತರ ಬೆಳೆ ಪರಿಹಾರವನ್ನು ಅತಿ ಶೀಘ್ರದಲ್ಲಿ ನೀಡಲಾಗುವುದು ಎಂದರು.