ಮಡಿಕೇರಿ, ಡಿ. 19: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ವತಿಯಿಂದ ತಾ. 27 ರಿಂದ 31 ರವರೆಗೆ ಕೇರಳದ ತಿರುವನಂತಪುರದಲ್ಲಿ ನಡೆಯಲಿರುವ 27ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನಕ್ಕೆ ಕೊಡಗಿನ 3 ಶಾಲೆಗಳಿಂದ ಮೂವರು ಕಿರಿಯ ವಿಜ್ಞಾನಿಗಳು ಆಯ್ಕೆಯಾಗಿದ್ದಾರೆ.

ಮಡಿಕೇರಿ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿ ಕೆ.ವಿ.ಅಭಯ್ ಕೌಶಿಕ್ (ನಗರ ಹಿರಿಯ ವಿಭಾಗ), ಹಾರಂಗಿ ಬಳಿಯ ಅತ್ತೂರು ಜ್ಞಾನಗಂಗಾ ಶಾಲೆಯ ದೀಪ್ತಿ ಸಿ.ಜೆ. (ಗ್ರಾಮೀಣ ಹಿರಿಯ ವಿಭಾಗ) ಹಾಗೂ ಕುಶಾಲನಗರ ಫಾತಿಮ ಕಾನ್ವೆಂಟ್ ಶಾಲೆಯ ಕೆ. ಗಾಯತಿ ್ರ(ಗ್ರಾಮೀಣ ಕಿರಿಯ ವಿಭಾಗ) ಈ ಮೂವರು ಕಿರಿಯ ವಿಜ್ಞಾನಿಗಳು ಕರ್ನಾಟಕದ 30 ಮಂದಿ ಕಿರಿಯ ವಿಜ್ಞಾನಿಗಳ ಪೈಕಿ ಕೊಡಗು ಜಿಲ್ಲೆಯಿಂದ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಕಾರ್ಯದರ್ಶಿ ವಿಜ್ಞಾನ ಸಮಾವೇಶದ ಸಂಘಟಕ ಟಿ.ಜಿ. ಪ್ರೇಮಕುಮಾರ್ ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವಿದ್ಯಾಸಂಸ್ಥೆಯಲ್ಲಿ ನಡೆದ ರಾಜ್ಯಮಟ್ಟದ 27ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿ ವೈಜ್ಞಾನಿಕ ಯೋಜನಾ ಪ್ರಬಂಧವನ್ನು ಅತ್ಯುತ್ತಮವಾಗಿ ಮಂಡಿಸಿ ರಾಷ್ಟ್ರೀಯ ಮಕ್ಕಳ ಸಮ್ಮೇಳನಕ್ಕೆ ಆಯ್ಕೆಯಾಗಿದ್ದಾರೆ.

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಈ ಕಿರಿಯ ವಿಜ್ಞಾನಿಗಳು ಇಸ್ರೋ ವಿಜ್ಞಾನಿ ಟಿ.ಎನ್. ಸುರೇಶ್‍ಕುಮಾರ್ ಅವರಿಂದ ಪ್ರಶಸ್ತಿ ಪತ್ರ ಸ್ವೀಕರಿಸಿದರು. ಇದೇ ವೇಳೆ ಸಮಾವೇಶದ ಕೊಡಗು ಜಿಲ್ಲಾ ಸಂಯೋಜಕ ಜಿ. ಶ್ರೀಹರ್ಷ ಅವರನ್ನು ಸಮಾವೇಶದ ಪರವಾಗಿ ಸನ್ಮಾನಿಸಲಾಯಿತು.

ಮಡಿಕೇರಿ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿ ಕೆ.ವಿ.ಅಭಯ್ ಕೌಶಿಕ್ ತನ್ನ ಸಹಪಾಠಿ ಸಹೋದರ ಕೆ.ವಿ. ಆಶ್ರಯ್ ಕೌಶಿಕ್ ಜತೆಗೂಡಿ ಶಿಕ್ಷಕಿ ಕೆ.ಎಸ್. ಸುಮಿತ್ರ ಅವರ ಮಾರ್ಗದರ್ಶನದಲ್ಲಿ ‘ಜೀವಿ ಪರಿಸರ ಮತ್ತು ಪರಿಸರ ಸೇವೆಗಳು’ ಎಂಬ ಉಪ ವಿಷಯದಡಿ ‘ಲಾವಂಚ ಹುಲ್ಲು ಬೆಳೆಯುವುದರಿಂದ ಕೊಡಗಿನ ಮಣ್ಣಿನ ರಕ್ಷಣೆ’ ಎಂಬ ಯೋಜನೆ ಕುರಿತು ರೂಪಿಸಿದ್ದ ಪ್ರಬಂಧ ಮಂಡನೆ ಆಯ್ಕೆಯಾಗಿದೆ. ವಿದ್ಯಾರ್ಥಿ ಕೆ.ವಿ.ಅಭಯ್ ಕೌಶಿಕ್, ಮಡಿಕೇರಿ ನಗರದ ಕಾಫಿ ಬೆಳೆಗಾರ ಕರಿಮೆಣಸು ಬೆಳೆಗಾರರ ಸಂಘದ ದಕ್ಷಿಣ ಭಾರತದ ಸಮನ್ವಯ ಸಮಿತಿಯ ಸಂಯೋಜಕ ಕೆ.ಕೆ. ವಿಶ್ವನಾಥ್ ಮತ್ತು ರಾಧಿಕಾ ದಂಪತಿಯ ಪುತ್ರ.

ಹಾರಂಗಿ ಬಳಿಯ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯ ದೀಪ್ತಿ.ಸಿ.ಜೆ ತನ್ನ ಸಹಪಾಠಿ ವರ್ಷಿತ ಬಿ. ದಿನೇಶ್ ಜತೆಗೂಡಿ ಶಿಕ್ಷಕಿ ಎಂ.ಪಿ. ರಜಿನಿ ಮಾರ್ಗದರ್ಶನದಲ್ಲಿ ‘ಜೀವಿ ಪರಿಸರ ಮತ್ತು ಪರಿಸರ ಸೇವೆಗಳು’ ಎಂಬ ಉಪ ವಿಷಯದಡಿ ‘ಸಾವಯವ ಸೊಳ್ಳೆಬತ್ತಿ ತಯಾರಿಕೆ ಹಾಗೂ ನಿಯಂತ್ರಣ’ ಎಂಬ ಯೋಜನೆ ಕುರಿತು ರೂಪಿಸಿದ್ದ ಪ್ರಬಂಧ ಆಯ್ಕೆಯಾಗಿದೆ. ವಿದ್ಯಾರ್ಥಿನಿ ದೀಪ್ತಿ ಸಿ.ಜೆ, ಮಂಗಳೂರು ವಿಶ್ವವಿದ್ಯಾನಿಲಯದ ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರದ ಜೀವರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರೂ ಆದ ಕುಶಾಲನಗರ ನಿವಾಸಿ ಡಾ|| ಚಂದ್ರಶೇಖರ್ ಜಿ. ಜೋಶಿ ಮತ್ತು ವಿಜಯಲಕ್ಷ್ಮಿ ಜೋಶಿ ದಂಪತಿಯ ಪುತ್ರಿ.

ಕುಶಾಲನಗರ ಫಾತಿಮ ಕಾನ್ವೆಂಟ್ ಶಾಲೆಯ ಕೆ.ಗಾಯತ್ರಿ ತನ್ನ ಸಹಪಾಠಿ ಸೈಯದ್ ನೀಹಾಲ್ ಜತೆಗೂಡಿ ಶಿಕ್ಷಕಿ ಜೆ.ಆರ್. ಗಂಗಮ್ಮ ಮಾರ್ಗದರ್ಶನದಲ್ಲಿ ‘ತ್ಯಾಜ್ಯದಿಂದ ಸಂಪತ್ತು’ ಎಂಬ ಉಪ ವಿಷಯದಡಿ ‘ಪ್ಲಾಸ್ಟಿಕ್‍ನಿಂದ ವಿದ್ಯುತ್ ಉತ್ಪಾದನೆ’ ಎಂಬ ಯೋಜನೆ ಕುರಿತು ರೂಪಿಸಿದ್ದ ಪ್ರಬಂಧ ಆಯ್ಕೆಯಾಗಿದೆ. ವಿದ್ಯಾರ್ಥಿನಿ ಕೆ. ಗಾಯತ್ರಿ, ಕುಶಾಲನಗರದ ನಿವಾಸಿ ಪಿ. ಕಾರ್ತಿಶೀಯನ್ ಮತ್ತು ಫ್ಲೋರೆನ್ಸ್ ದಂಪತಿಯ ಪುತ್ರಿ.

ರಾಜ್ಯಮಟ್ಟದ ಸಮ್ಮೇಳನಕ್ಕೆ ಕೊಡಗು ಜಿಲ್ಲಾ ತಂಡದ ನೇತೃತ್ವ ವಹಿಸಿದ್ದ ಸಮಾವೇಶದ ಜಿಲ್ಲಾ ಸಂಯೋಜಕ ಜಿ. ಶ್ರೀಹರ್ಷ, ಮಾರ್ಗದರ್ಶಿ ಶಿಕ್ಷಕಿಯರಾದ ಡಿ.ಎಂ. ರೇವತಿ, ರೇಖಾ, ಕಾರ್ಲೋಸ್ ಮತ್ತಿತರ ಶಿಕ್ಷಕರು ತೆರಳಿದ್ದರು.