*ಸಿದ್ದಾಪುರ, ಡಿ. 19 : ಎಲ್ಲೆಂದರಲ್ಲಿ ಕೊಳೆತ ತ್ಯಾಜ್ಯದ ರಾಶಿ, ರಸ್ತೆಯುದ್ದಕ್ಕೂ ಮೀನು ವಾಸನೆ, ಹೆಜ್ಜೆ ಹೆಜ್ಜೆಗೂ ಸತ್ತು ನೇತಾಡುತ್ತಿರುವ ಕೋಳಿ, ಕುರಿ, ಆಡು ಮಾಂಸಗಳಿಂದ ಹೊರ ಹೊಮ್ಮುವ ದುರ್ವಾಸನೆ, ರಸ್ತೆಯುದ್ದಕ್ಕೂ ಪ್ಲಾಸ್ಟಿಕ್‍ಗಳು, ಕಾವೇರಿ ಒಡಲು ಸೇರುತ್ತಿರುವ ಕಲುಶಿತ ಚರಂಡಿ.., ಇದ್ಯಾವುದೇ ಮಾರ್ಕಟ್‍ನ ಅಥವ ಮೀನು-ಮಾಂಸ ಮಾರುಕಟ್ಟೆಯ ಚಿತ್ರಣವಲ್ಲ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸೋ.ಪೇಟೆ ತಾಲೂಕಿನ ಗಡಿ ಗ್ರಾಮವಾದ ನೆಲ್ಯಹುದಿಕೇರಿಯ ಚಿತ್ರಣ.

ಒಂದು ಕಾಲದಲ್ಲಿ ಭತ್ತ ವ್ಯಾಪಕ ಭತ್ತ ಬೆಳೆಯುವ ಪ್ರದೇಶವಾಗಿ ಕೃಷಿ ಗದ್ದೆಗಳಿಂದ ವಿಸ್ತಾರವಾಗಿದ್ದ ನೆಲ್ಯಹುದಿಕೇರಿ ಗ್ರಾಮ ಇಂದು ಬಹುತೇಕ ಅವೈಜ್ಞಾನಿಕವಾಗಿ ಮತ್ತು ಅನಧಿಕೃತವಾಗಿ ನಿರ್ಮಾಣವಾಗಿರುವ ಕಟ್ಟಗಳಿಂದ ಕೂಡಿರುವ ವಾಣಿಜ್ಯ ಪಟ್ಟಣವಾಗಿ ಬೆಳೆದಿದೆ. ಪಟ್ಟಣ ಬೆಳೆದಷ್ಟೇ ಇಲ್ಲಿನ ತ್ಯಾಜ್ಯ ವಿಲೇವಾರಿ ಸಮಸ್ಯೆ ಕೂಡ ಬೆಟ್ಟದಷ್ಟೆ ಬೆಳೆದು ನಿಂತಿದೆ. ತ್ಯಾಜ್ಯ ವಿಲೇವಾರಿ ಸಮಸ್ಯೆ ಯನ್ನು ವೈಜ್ಞಾನಿಕವಾಗಿ ಬಗೆಹರಿಸ ಬಹುದಾದ ಎಲ್ಲಾ ವ್ಯವಸ್ಥೆಗಳು ನೆಲ್ಯಹುದಿಕೇರಿ ಗ್ರಾಮದಲ್ಲಿದ್ದರೂ ನಿಷ್ಕ್ರೀಯ ಆಡಳಿತ ವ್ಯವಸ್ಥೆಯಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸ ಲಾಗದಷ್ಟು ಬಿಗಡಾಯಿಸಿದೆ. ಇದರ ಪರಿಣಾಮ ಪಟ್ಟಣದ ತುಂಬೆಲ್ಲಾ ತ್ಯಾಜ್ಯ ರಾಶಿ ಮಾರಕ ರೋಗಗಳನ್ನು, ಸಾಂಕ್ರಾಮಿಕ ರೋಗಗಳನ್ನೂ ತಂದೊಡ್ಡುವಷ್ಟು ಅಪಾಯಕಾರಿ ಯಾಗಿ ಬೆಳೆಯುತ್ತಿದೆ. ಮಡಿಕೇರಿ ಸಾಗುವ ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ಕೊಳೆತ ತ್ಯಾಜ್ಯದ ರಾಶಿಯೇ ಬಿದ್ದಿದೆ. ನೆಲ್ಯಹುದಿಕೇರಿ ಪಟ್ಟಣದ ತ್ಯಾಜ್ಯ ನೆರೆಯ ವೀರಾಜಪೇಟೆ ತಾಲೂಕಿನ ಸಿದ್ದಾಪುರದವರೆಗೆ ಇತ್ತ ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಭ್ಯತ್‍ಮಂಗಲದವರೆಗೂ ವ್ಯಾಪಿಸಿದೆ.

ಈ ಹಿಂದೆ ತ್ಯಾಜ್ಯ ವಿಲೇವಾರಿ ಗಾಗಿ ಜಿಲ್ಲಾಡಳಿತದ ಆದೇಶದಂತೆ ಜಾಗ ಗುರುತ್ತಿಸುವ ಪ್ರಕ್ರೀಯೆಗೆ ಚಾಲನೆ ನೀಡಲಾಗಿತ್ತಾದರೂ ಗ್ರಾಮ ಪಂಚಾಯತ್ ಸದಸ್ಯರ ನಡುವೆ ಪರಸ್ಪರ ನಡೆದ ಸಮಾಲೋಚನೆಯಲ್ಲಿ ಒಮ್ಮತ ಮೂಡದ ಹಿನ್ನಲೆಯಲ್ಲಿ ಜಾಗ ಗುರುತ್ತಿಸುವ ಪ್ರಕ್ರೀಯೆಗೆ ತಡೆ ಬಿದ್ದಿತ್ತು. ಇನ್ನು ಗ್ರಾಮಾಡಳಿತವು ಯಾವುದೇ ವೈಜ್ಞಾನಿಕ ತಳಹದಿ ಅನುಸರಿಸದೇ ಕುಂಬಾರಗುಂಡಿಯ ಜನವಸತಿ ಮತ್ತು ಜಲಮೂಲ ಇರುವ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿನ ಘಟಕ ಸ್ಥಾಪಿಸಲು ಆಡಳಿತ ಮುಂದಾದಾಗ ಗ್ರಾಮಸ್ಥರು ತೀರ್ವ ಪ್ರತಿರೋಧ ಒಡ್ಡಿದರು.

ಒಟ್ಟಿನಲ್ಲಿ ಆಡಳಿತ ವೈಫಲ್ಯವೇ ಇಂದು ನೆಲ್ಯಹುದಿಕೇರಿ ಗಬ್ಬೆದ್ದು ನಾರುವುದಕ್ಕೆ ಕಾರಣವಾಗಿದೆ. ಜನವಸತಿ ಪ್ರದೇಶಗಳ ಪಕ್ಕದಲ್ಲೇ, ಮಕ್ಕಳು, ವಿದ್ಯಾರ್ಥಿಗಳು ಓಡಾಡುವ ಪ್ರದೇಶದಲ್ಲೇ ತ್ಯಾಜ್ಯ ರಾಶಿ ಬಿದ್ದಿದ್ದು ಗ್ರಾಮಸ್ಥರು ಆಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಕಳೆದ ಎರಡು ದಶಕಗಳ ಹಿಂದೆ ಮಂಡಲ ಪಂಚಾಯತ್ ಆಡಳಿತ ಇದ್ದ ಸಂದರ್ಭ ವಾಲ್ನೂರು-ತ್ಯಾಗತ್ತೂರು ಮತ್ತು ನೆಲ್ಯಹುದಿಕೇರಿ ಒಂದೇ ಆಗಿತ್ತು. ಎರಡು ಗ್ರಾಮಕ್ಕೂ ಒಂದೇ ಪಂಚಾಯತ್ ಅದು ವಾಲ್ನೂರು-ತ್ಯಾಗತ್ತೂರು ಪಂಚಾಯತ್ ಆಗಿತ್ತು. ನಂತರ ಜನಸಂಖ್ಯೆ ಆಧಾರದ ಮೇಲೆ ಗ್ರಾಮವನ್ನು ವಿಗಂಡಿಸಿ ನೆಲ್ಯಹುದಿ ಕೇರಿಗೆ ಪ್ರತ್ಯೇಕ ಪಂಚಾಯತ್ ಕಲ್ಪಿಸ ಲಾಗಿತ್ತು. ಕಳೆದ 20 ವರ್ಷಗಳಿಂದ ಆಡಳಿತ ವ್ಯವಸ್ಥೆ ಕೇವಲ ಪಟ್ಟಣವನ್ನು ದಿಕ್ಕು ದೆಶೆ ಇಲ್ಲದೇ ಬೆಳೆಯಲು ಬಿಟ್ಟಿತ್ತೇ ಹೊರತು ಗ್ರಾಮದ ನಿವಾಸಿ ಗಳಿಗೆ ಯಾವುದೇ ಮೂಲ ಭೂತ ವ್ಯವಸ್ಥೆ ಒದಗಿಸದೇ ಪರಾಭವ ಗೊಂಡಿದೆ.

ಈ ಹಿಂದೆ ಸುವರ್ಣ ಗ್ರಾಮ ಯೋಜನೆಯಡಿ ತ್ಯಾಜ್ಯ ವಿಲೇವಾರಿ ಜಾಗ ಖರೀಧಿಸಲು ಅನುಧಾನ ಬಿಡುಗಡೆಗೊಂಡಿತ್ತು. ಸುವರ್ಣ ಗ್ರಾಮ ಯೋಜನೆಯಡಿ ಬಂದಿದ್ದ ಅನುಧಾನದಲ್ಲಿ ಗ್ರಾಮದಲ್ಲಿ ಜಾಗ ಕೂಡ ಖರೀಧಿ ಮಾಡಲಾಗಿತ್ತು ಎನ್ನಲಾಗಿದೆ. ಆದರೇ ಖರೀಧಿಸಿದ ಜಾಗ ಎಲ್ಲಿದೆ ಎಂಬುದು ಆಡಳಿತಕ್ಕೆ ತಿಳಿದಿಲ್ಲ. ಅಂದು ಖರೀಧಿಸಿದ ಜಾಗ ಎಲ್ಲಿ ಹೋಯಿತ್ತು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಉಳಿದೆಡೆ ಸಾರ್ವಜನಿಕ ಪ್ರದೇಶದಲ್ಲಿ ತ್ಯಾಜ್ಯ ಸುರಿದರೆ ಆಯಾ ಗ್ರಾಮ ಪಂಚಾಯತ್ ಆಡಳಿತ ದಂಡ ವಿಧಿಸುತ್ತದೆ. ಆದರೇ ನೆಲ್ಯಹುದಿಕೇರಿ ಯಲ್ಲಿ ರಸ್ತೆ ಬದಿಯಲ್ಲಿ, ಸಾರ್ವಜನಿಕ ಪ್ರದೇಶದಲ್ಲಿ ತ್ಯಾಜ್ಯ ಸುರಿಯಲು ಪ್ರೋತ್ಸಾಹಿಸುತ್ತಿದೆ ಎಂದು ಗ್ರಾಮಸ್ಥರು ಇಲ್ಲಿನ ಆಡಳಿತ ವೈಖರಿಯನ್ನು ಎತ್ತಿ ತೊರಿಸುತ್ತಿದ್ದಾರೆ. ನೆಲ್ಯಹುದಿಕೇರಿ ಗ್ರಾಮ ಪಂಚಾಯತ್ ಶೀಘ್ರವೇ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯತ್ತ ಗಮನ ಕೊಡದಿದ್ದರೆ ಸಂಪೂರ್ಣ ಗ್ರಾಮ ಕೊಳಚೆ ಪ್ರದೇಶವಾಗಲಿದೆ ಎಂದು ಸ್ಥಳೀಯ ಗ್ರಾಮಸ್ಥರು ವಿಷಾಧಿಸುತ್ತಿದ್ದಾರೆ.

- ಅಂಚೆಮನೆ ಸುದಿ