ವಿಶ್ವದ ವಿವಿಧೆಡೆಗಳಲ್ಲಿ ಗೆದ್ದಲುಗಳನ್ನು ಕಾಣಬಹು ದಾಗಿದೆ. ಪ್ರಪಂಚದ ಹುಲ್ಲುಗಾವಲುಗಳು ಶತಕೋಟಿ ಗೆದ್ದಲುಗೂಡುಗಳ ನೆಲೆವೀಡು. ಮಾನವನು ನಂಬಲು ಅಸಾಧ್ಯವಾದ ರೀತಿಯಲ್ಲಿ ಇವು ತಮ್ಮ ವಾಸತಾಣ-ತಂಗುದಾಣಗಳನ್ನು ನಿರ್ಮಿಸಿ ಕೊಳ್ಳುತ್ತವೆ.

ಗೆದ್ದಲುಗಳ ರಾಜ-ರಾಣಿ ಗೋಪುರವನ್ನು ನಿರ್ಮಿಸಲು ಆರಂಭಿಸಿದರೆ, ಉಳಿದ ಕೆಲಸ ವನ್ನು ಕಾರ್ಮಿಕ ಗೆದ್ದಲು ಹುಳಗಳು ಪೂರೈಸುತ್ತವೆ. ಗೆದ್ದಲು ಗೂಡು (ಹುತ್ತ)ವು ಹಲವಾರು ಸುರಂಗಗಳನ್ನು ಹೊಂದಿರುತ್ತವೆ. ಅವೆಲ್ಲಕ್ಕೂ ನಿರ್ದಿಷ್ಟ ಉದ್ದೇಶವಿರುತ್ತವೆ. ಕೆಲವು ಗೆದ್ದಲು ಹುಳಗಳು ಅತ್ಯಂತ ಎತ್ತರವಾದ ಚಿಮಣಿ(ಗೋಪುರ)ಗಳನ್ನು ನಿರ್ಮಿಸುತ್ತವೆ.

ಇದು ಮಾನವನ ಬುದ್ಧಿಗೆ ಸವಾಲಾಗಿದೆ. ಅಂದರೆ ಈ ಹುತ್ತಗಳು ಸಂಪೂರ್ಣವಾಗಿ ಹವಾನಿಯಂತ್ರಿತ ವಾಗಿರುತ್ತವೆ. ಇವು ವಾತಾಯನ (ವೆಂಟಿಲೇಶನ್) ವ್ಯವಸ್ಥೆ ಹೊಂದಿರುತ್ತವೆ. ಇವುಗಳನ್ನು “ಕೀಟಲೋಕದ ಹವಾನಿಯಂತ್ರಿತ ಕಟ್ಟಡಗಳು” ಎನ್ನಬಹುದಾಗಿದೆ. ಇಂತಹ ಹುತ್ತಗಳು ನೆಲಮಾಳಿಗೆಯನ್ನು ಹೊಂದಿರು ತ್ತವೆ. ಇವು ಮಾನವ ನಿರ್ಮಿತ ನೆಲಮಾಳಿಗೆಗಳಂತೆ ಬೇಸಿಗೆ ಕಾಲದಲ್ಲಿಯೂ ಅತ್ಯಂತ ತಂಪಾಗಿ ಇಲ್ಲವೇ ತೇವಾಂಶ ಭರಿತವಾಗಿರುತ್ತವೆ.

ದಿನಕ್ಕೆ 36 ಸಾವಿರ ಮೊಟ್ಟೆಗಳು : ಗೆದ್ದಲುಗಳಲ್ಲಿ ಪ್ರಮುಖವಾಗಿ ರಾಜ-ರಾಣಿ, ಸೈನಿಕರು, ಕೆಲಸಗಾರ ರನ್ನು ಹೊಂದಿರುತ್ತವೆ. ಗೆದ್ದಲು ಹುಳಗಳ ಗಾತ್ರವು ಹಲವಾರು ಪ್ರದೇಶಗಳಲ್ಲಿ ವಿಭಿನ್ನತೆಯನ್ನು ಹೊಂದಿರು ತ್ತವೆ. ಹುತ್ತಗಳ ಮೇಲೆ ಧಾಳಿಯಾದ ಸಂದರ್ಭಗಳಲ್ಲಿ ಸೈನಿಕ ಹುಳಗಳು ಅವುಗಳನ್ನು ರಕ್ಷಿಸಲು ಪ್ರಯತ್ನಿಸುತ್ತವೆ. ಇವುಗಳು ಕಚ್ಚಿದಾಗ ವಿಶೇಷವಾದ ದ್ರವ ಸ್ರವಿಸಲ್ಪಡುತ್ತದೆ. ಇದು ವಿಷಕಾರಿ ಎನ್ನಲಾಗಿದೆ. ಗೆದ್ದಲು ರಾಣಿಯು ಸುಮಾರು 50 ವರ್ಷಗಳವರೆಗೆ ಬದುಕುತ್ತದೆ. ಸಂಪೂರ್ಣ ಬೆಳೆದ ರಾಣಿಯು ಮಾನವನ ಕಿರುಬೆರಳಿ ನಷ್ಟು ದೊಡ್ಡದಾಗಿರುತ್ತದೆ. ರಾಣಿ ಹುಳವು ದಿನಕ್ಕೆ 36ಸಾವಿರ ಮೊಟ್ಟೆ ಗಳನ್ನು ಇಡುತ್ತದೆ !

200 ಬಿಲಿಯನ್ ಹುತ್ತಗಳು: ಆಸ್ಟ್ರೇಲಿಯಾ ಮತ್ತು ನಮೀಬಿಯಾಗಳಲ್ಲಿ ಅತ್ಯಂತ ಎತ್ತರವಾದ ಹುತ್ತಗಳನ್ನು ಕಾಣಬಹುದು. ಅತ್ಯಂತ ವಿಸ್ತಾರ ವಾದ ಹುತ್ತಗಳು 30 ಮೀಟರ್ (98 ಅಡಿ) ಎತ್ತರ ಇರುವುದನ್ನು ಗುರುತಿಸಲಾಗಿದೆ ! ಈಶಾನ್ಯ ಬ್ರೆಜಿಲ್‍ನ ಕ್ಯಾಟಿಂಗಾ ವ್ಯಾಪ್ತಿಯಲ್ಲಿ ಸುಮಾರು 200 ಮಿಲಿಯನ್ ಹುತ್ತಗಳಿವೆ ಎಂದು ಅಂದಾಜಿಸಲಾಗಿದೆ. ಕೆಲವು ಹುತ್ತಗಳು 10 ಘನ ಕಿಲೋಮೀಟರ್ (2.4 ಕ್ಯೂಬಿಕ್ ಮೈಲಿ) ಗಳಷ್ಟು ಆಳವಾದ ಸುರಂಗಗಳನ್ನು (ನೆಲಮಾಳಿಗೆ) ಗಳನ್ನು ಹೊಂದಿವೆ. ಸುಮಾರು 690 ರಿಂದ 3,820 ವರ್ಷಗಳಷ್ಟು ಹಳೆಯದಾದ ಹುತ್ತಗಳಿವೆ ! ಇವುಗಳನ್ನು “ಕೀಟಲೋಕದ ಅತ್ಯಂತ ಬುದ್ಧಿವಂತ ಎಂಜಿನೀಯರ್” ಎಂದು ಕರೆಯಬಹುದು. ವಿಶ್ವದ ಕೆಲವು ಕಡೆಗಳಲ್ಲಿ ಗೆದ್ದಲು ಹುಳಗಳನ್ನೇ ತಿಂದು ಬದುಕುವ ಪ್ರಾಣಿಗಳೂ ಇವೆ.

?ಕೂಡಂಡ ರವಿ,

ಹೊದ್ದೂರು