ಮಡಿಕೇರಿ, ಡಿ. 19: ಹ್ಯುಮಾನಿಟಿ ಫಸ್ಟ್ ಇಂಡಿಯಾ ಹಾಗೂ ಲಜ್ನಾ ಇಮಾ ಇಲ್ಲಾಹ್ (ಅಹ್ಮದೀಯ ಮುಸ್ಲಿಮ್ ಜಮಾಅತ್‍ನ ಮಹಿಳಾ ವಿಭಾಗ)ದಿಂದ ಹಿರಿಯ ನಾಗರಿಕರಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ನಗರದಲ್ಲಿ ನಡೆಯಿತು.

ಸ್ಥಳೀಯ ತ್ಯಾಗರಾಜ ಕಾಲೋನಿ ಯಲ್ಲಿರುವ ಹಿರಿಯರ ವಿಶ್ರಾಂತಿ ಗೃಹ ‘ತನಲ್’ನಲ್ಲಿ ನೆಲೆ ಪಡೆದುಕೊಂಡ ಹಿರಿಯರ ದಂತ ತಪಾಸಣೆಯನ್ನು ಶಿಬಿರದಲ್ಲಿ ನಡೆಸಲಾಯಿತಲ್ಲದೆ, ಓರ್ವ ಹಿರಿಯ ವಿಶೇಷಚೇತನ ಮಹಿಳೆಗೆ ಊರುಗೋಲನ್ನು ನೀಡಲಾಯಿತು.

ನಗರದ ಸರಕಾರಿ ಆಸ್ಪತ್ರೆಯ ದಂತ ಚಿಕಿತ್ಸಕಿ ಡಾ. ಅಫ್ರೀನ್ ಮೆಲ್ವಿನ್ ಶಿಬಿರದಲ್ಲಿ 21 ಮಂದಿ ಹಿರಿಯರಿಗೆ ಚಿಕಿತ್ಸೆಯನ್ನು ನೀಡಿದರು. ಈ ಸಂದರ್ಭ ವಿಶ್ರಾಂತಿ ಗೃಹದಲ್ಲಿರುವ ಹಿರಿಯರಿಗೆ ಉಚಿತವಾಗಿ ಪೇಸ್ಟ್ ಮತ್ತು ಬ್ರಷ್‍ಗಳನ್ನು ನೀಡಲಾಯಿತು.

ಶಿಬಿರದಲ್ಲಿ ಲಜ್ನಾ ಇಮಾ ಇಲ್ಲಾಹ್‍ನ ಉಪಾಧ್ಯಕ್ಷ ಬುಷ್ರಾ ಸಿದ್ದಿಖ್ ಹಾಗೂ ಸಮಿತಿ ಸದಸ್ಯರು ಮತ್ತು ಹ್ಯುಮಾನಿಟಿ ಫಸ್ಟ್ ಇಂಡಿಯಾದ ಮಹಿಳಾ ಕಾರ್ಯಕರ್ತರು ಹಾಜರಿದ್ದರು. ಶಿಬಿರದ ನಂತರ ಮನರಂಜನಾ ಕಾರ್ಯಕ್ರಮ ನಡೆಯಿತು.