ಗೋಣಿಕೊಪ್ಪಲು, ಡಿ. 18: ಒಂಟಿ ಸಲಗವೊಂದು ಮೃತ ಪಟ್ಟ ಘಟನೆ ಬಾಳೆಲೆ ಸಮೀಪದ ಕೊಣನಕಟ್ಟೆ ಬಳಿ ನಡೆದಿದೆ. ಕೊಣನಕಟ್ಟೆ ಗುಡ್ಡಂಡ ಪಾರ್ಥ ಎಂಬವರ ಕೆರೆಯಲ್ಲಿ ಕಾಡಾನೆ ಮೃತಪಟ್ಟಿದ್ದು ,ಬುಧವಾರ ಮುಂಜಾನೆಯ ವೇಳೆ ಸ್ಥಳೀಯರಿಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ತಿತಿಮತಿ ಭಾಗದ ಎಸಿಎಫ್ ಶ್ರೀಪತಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆ ನಡುವೆ ಕಾದಾಟ ನಡೆದ ಹಿನ್ನೆಲೆಯಲ್ಲಿ ಒಂಟಿ ಸಲಗದ ಹಿಂಭಾಗಕ್ಕೆ ಭಾರಿ ಪೆಟ್ಟುಬಿದ್ದು, ಅಲ್ಲದೆ ಎಡಗಾಲು ಸಂಪೂರ್ಣ ಊತ ಗೊಂಡಿದ್ದು ಹೆಜ್ಜೆ ಇಡಲು ಸಾಧ್ಯವಾಗದ ಕಾರಣ ಈ ಆನೆ ಕೆರೆಯಲ್ಲಿ ಸಿಲುಕಿ ಆಹಾರವಿಲ್ಲದೆ ಸಂಪೂರ್ಣ ನಿತ್ರಾಣ ಗೊಂಡು ಆನೆಯು ಮೃತಪಟ್ಟಿರಬಹುದೆಂದು ಅಂದಾಜಿಸ ಲಾಗಿದೆ ಎಂದು ಎಸಿಎಫ್ ಶ್ರೀಪತಿ ಮಾಹಿತಿ ನೀಡಿದರು. ವೈದ್ಯ ಡಾ. ಮುಜೀಬ್ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಮೀಪದ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.-ಹೆಚ್.ಕೆ. ಜಗದೀಶ್.