ಮನುಷ್ಯನ ಮೊದಲ ಅವಶ್ಯಕತೆ ಯಾವುದು ಎಂದು ಯಾರನ್ನಾದರೂ ಪ್ರಶ್ನಿಸಿದರೆ ಆ ವ್ಯಕ್ತಿ ಉತ್ತರಿಸಲು ಸ್ವಲ್ಪ ತಡವರಿಸಬಹುದು. ಆದರೆ ಇದೇ ಪ್ರಶ್ನೆಯನ್ನು ಹಿಡಿದು ಏಕಾಂತವಾಗಿ ಕುಳಿತು ಯೋಚಿಸಿದರೆ ಉತ್ತರ ಸುಲಭವಾಗಿ ಹೊಳೆಯುವುದು. ಯಾವುದನ್ನು ಬಿಟ್ಟು ಮನುಷ್ಯ ಬದುಕಲಾರನೋ ಅದೇ ಮನುಷ್ಯನ ಮೊದಲ ಅವಶ್ಯಕತೆ ಎಂದು ತರ್ಕಿಸಿದರೆ ನಮ್ಮೆಲ್ಲರ ಮೊಟ್ಟಮೊದಲ ಅವಶ್ಯಕತೆ ಎಂದೆನಿಸುವುದು ಆಹಾರ, ನೀರು ಗಾಳಿ ಇವೇ! ಮತ್ತೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಯಾವುದು ಅತೀ ಅವಶ್ಯ, ಯಾವುದು ಅನವಶ್ಯ ಎಂದು ಬೇರ್ಪಡಿಸುವಲ್ಲಿ ನಾವು ಸೋತಿದ್ದೇವೆ. ಅವಶ್ಯಕತೆಗಳ ಪಟ್ಟಿ ಬೇಕಷ್ಟು ಬೆಳೆಯುತ್ತವೆ. ಮನುಷ್ಯನ ಬಹುಮುಖ್ಯ ಅಗತ್ಯ ಆಹಾರ. ಇದು ಮೊದಲನೆಯ ಹಾಗೂ ಬಹುಮುಖ್ಯವಾದ ಅಗತ್ಯ.
ಅನ್ನದಾತನನ್ನು ರಾಷ್ಟ್ರಕವಿ ಕುವೆಂಪು ಅವರು ‘ಉಳುವಾ ಯೋಗಿಯ ನೋಡಲ್ಲಿ’ ಎಂದು ಹಾಡಿ ಹೊಗಳಿ ಅವನೆಡೆಗೆ ಎಲ್ಲರ ಗಮನ ಸೆಳೆದಿದ್ದಾರೆ. ಅವರು‘ಆ ಕರ್ಮಯೋಗಿ’ಯ ಮೇಲೆಯೇ ಜಗತ್ತು ನಿಂತಿದೆ ಎನ್ನುತ್ತಾರೆ. ಇಂಥ ಅನ್ನದಾತನಿಗೆ ಕೆಲವು ಸಂದರ್ಭಗಳಲ್ಲಿ ಸಮಾಜದಿಂದ ಮೆಚ್ಚುಗೆಯ ಮಾತು, ಗೌರವದ ಹಾರತುರಾಯಿಗಳು ಅಷ್ಟು ಇಷ್ಟು ಸಿಗುತ್ತವೆ. ಆದರೆ ಅದೇ ಅನ್ನದಾತನಿಗೆ ಸಮಾಜದಿಂದ, ಸರ್ಕಾರದಿಂದ ಎಷ್ಟು ಬೆಂಬಲ ಸಿಗುತ್ತದೆ? ಯಾವ ಆದ್ಯತೆ ಸಿಗುತ್ತದೆ ? ರೈತನೊಬ್ಬ ತನ್ನ ನಿಷ್ಕಾಮ ಕರ್ಮವನ್ನು ಸಾಗಿಸಲು ಯಾವ ರೀತಿ ಅವಕಾಶ ಮಾಡಿಕೊಟ್ಟಿದೆ ಈ ಸಮಾಜ ? ಎಂಬುದನ್ನು ಯೋಚಿಸಿದರೆ ನಮ್ಮ ರೀತಿ-ನೀತಿಗೆ ತಲೆತಗ್ಗಿಸುವಂತಾಗುತ್ತದೆ. ಜಗತ್ತಿನ ಬೆರಳೆಣಿಕೆಯ ದೇಶಗಳಲ್ಲಿ ಮಾತ್ರ ರೈತ ಜನರು ಉತ್ತಮ ಹಾಗೂ ಗೌರವಯುತ ಬದುಕನ್ನು ಸಾಗಿಸುತ್ತಿರಬಹುದು. ಆದರೆ ಹೆಚ್ಚಿನ ಬಡ ಹಾಗೂ ಮುಂದುವರಿಯುತ್ತಿರುವ ದೇಶಗಳಲ್ಲಿ ಅವರ ಬದುಕು ಕಷ್ಟಗಳ ಸಂಕೋಲೆಯಲ್ಲಿ ಸಿಲುಕಿಕೊಂಡಿದೆ.
ಇನ್ನು ನಮ್ಮ ದೇಶದಲ್ಲಿ ಅನ್ನದಾತರ ಬದುಕು ಹೇಗಿದೆ ? ರೈತರಲ್ಲಿ ಸ್ವಲ್ಪ ಪ್ರತಿಶತ ಜನರು ಮಾತ್ರದೊಡ್ದ ಹಿಡುವಳಿದಾರರು. ಹೆಚ್ಚಿನವರೆಲ್ಲ ಕಡಿಮೆ ಜಮೀನನ್ನು ಹೊಂದಿದ್ದು ಕೃಷಿಯನ್ನು ಬಿಡಲಾರದೆ, ಮುಂದುವರಿಸಲೂ ಆಗದೆ ಸಂಕಷ್ಟದಲ್ಲಿ ಸಿಲುಕಿದವರು; ಹೇಗೋ ದಿನ ದೂಡುತ್ತಿರುವವರು. ರೈತರನ್ನು ಬೆಂಬಲಿಸದೇ ಯಾವದೇಶವೂ ಮುಂದುವರಿಯಲಾರದು. ಶ್ರೀಮಂತ ದೇಶಗಳಲ್ಲಿ ಸರ್ಕಾರವು ವಿವಿಧ ಯೋಜನೆಗಳ ಮೂಲಕ, ನೀತಿಯ ಮೂಲಕ ರೈತರ ಬೆಂಬಲಕ್ಕೆ ನಿಲ್ಲಬಹುದು. ಆದರೆ ಬಡದೇಶಗಳಲ್ಲಿ ಸ್ವತಃ ಸರ್ಕಾರಕ್ಕೇ ಬಲ ಇರುವುದಿಲ್ಲ. ಇನ್ನು ರೈತರಿಗೆ ಸೂಕ್ತ ಬೆಂಬಲ ಕೊಡುವ ಮಾತು ದೂರವೇ ಉಳಿಯುವುದು. ಇಂಥ ದೇಶಗಳಲ್ಲಿ ಹೆಸರಿಗೆ ಮಾತ್ರ ಸೀಮಿತವಾಗಿರುವ ಹಾಗೂ ಕೆಲವರ ಹಿತಾಸಕ್ತಿಗಳಿಂದ ಕೂಡಿದ ಯೋಜನೆಗಳಷ್ಟೇ ಜಾರಿಯಲ್ಲಿರುತ್ತವೆ. ನಮ್ಮ ದೇಶದಲ್ಲಿ ರೈತಪರವಾದ ಸುಂದರಾತಿಸುಂದರ ಘೋಷಣೆಗಳೂ, ಯೋಜನೆಗಳೂ ಸಾಕಷ್ಟು ಇದ್ದರೂ ರೈತರ ಪಡಿಪಾಟಲು ಎಂದೂ ಕಡಿಮೆಯಾದದ್ದಿಲ್ಲ. ಏಕೆಂದರೆ ಅಂಥ ಹಲವು ಯೋಜನೆಗಳ ಹಿಂದಿರುವುದು ರಾಜಕೀಯ ಲೆಕ್ಕಾಚಾರಗಳೇ ವಿನಃ ರೈತಪರವಾದ ಪ್ರಾಮಾಣಿಕ ಕಾಳಜಿಯಲ್ಲ. ತಾತ್ಕಾಲಿಕ ಮತ್ತು ಜನಪ್ರಿಯ ಯೋಜನೆಗಳು ಪ್ರಾರಂಭವಾಗಿ ಅಷ್ಟೇ ಬೇಗ ಮರೆಯಾಗುತ್ತವೆ. ಹೊಸ ಬಾಟಲಿಯಲ್ಲಿ ಮತ್ತದೇ ಹಳೆ ಔಷಧಿ ಎಂಬಂತಹ ರೀತಿಯವು. ರೈತರ ನಿಜವಾದ ಸಮಸ್ಯೆಗಳನ್ನು ಅರ್ಥೈಸಿಕೊಂಡು ಅವರಿಗೆ ಬೇಕಾದ ಬೆಂಬಲವನ್ನೂ, ಧೈರ್ಯವನ್ನೂ ತುಂಬಬೇಕಾಗಿದೆ. ಸಾಲಮನ್ನಾ, ಬೆಂಬಲ ಬೆಲೆ, ವಿಮಾ ಪರಿಹಾರಗಳು ತಾತ್ಕಾಲಿಕ ವಾದವುಗಳು. ಕೃಷಿ ಕ್ಷೇತ್ರವನ್ನು ಮೇಲೆತ್ತುವ ತಾಕತ್ತು ಅವುಗಳಿಗಿಲ್ಲ. ರೈತರ ಕೈ ಬಲಪಡಿಸುವ, ರೈತರನ್ನು ಸ್ವಾವಲಂಬಿಯಾಗಿಸುವ, ಸ್ವಾಬಿಮಾನಿಯಾಗಿಸುವ, ಅವರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಯೋಜನೆಗಳು ಜಾರಿಯಾಗ ಬೇಕಾಗಿದೆ. ನೀರಿನ ಅನುಕೂಲ, ಗೊಬ್ಬರದ ಉಪಲಬ್ಧತೆ, ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಮಧ್ಯವರ್ತಿಮುಕ್ತ ಮಾರುಕಟ್ಟೆಯ ವ್ಯವಸ್ಥೆ, ಸುಸ್ಥಿರ ಬೆಲೆ, ಇಲ್ಲೆಲ್ಲ ಸುಧಾರಣೆಯಾಗಬೇಕು. ವೈಜ್ಞಾನಿಕ ಹಾಗೂ ಪರಿಸರ ಸ್ನೇಹಿ ಕೃಷಿ ಪದ್ಧತಿಯೂ, ಮಿಶ್ರಬೆಳೆ ಪದ್ಧತಿಯೂ, ನೀರಿನ ಮಿತಬಳಕೆಯನ್ನು ಬೆಂಬಲಿಸುವ ಬೆಳೆಪದ್ಧತಿಯೂ ಅನುಷ್ಠಾನಗೊಳ್ಳಬೇಕು. ಅದಕ್ಕೂ ಮೊದಲು ಈ ಪದ್ಧತಿಗಳನ್ನು ಆಕರ್ಷಣೀಯವಾದ ರೀತಿಯಲ್ಲಿ ರೈತಾಪಿ ವರ್ಗದವರ ಮುಂದಿಟ್ಟು ಅವುಗಳ ಪ್ರಯೋಜನಗಳನ್ನು ಮನದಟ್ಟು ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಆಗ ಮಾತ್ರ ರೈತವರ್ಗ ಚೆನ್ನಾಗಿ ಬದುಕ ಬಲ್ಲದು ಹಾಗೂ ಜಗತ್ತನ್ನು ಬದುಕಿಸಬಲ್ಲದು.
ಕೃಷಿ ಕ್ಷೇತ್ರವು ಜಗತ್ತಿನ ಅನ್ನಾಹಾರದ ಅವಶ್ಯಕತೆಗಳನ್ನು ನೀಗಿಸುವುದಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಕೈಗಾರಿಕೆಗಳನ್ನೂ ಪರೋಕ್ಷವಾಗಿ ಉತ್ತೇಜಿಸುತ್ತದೆ. ಏಕೆಂದರೆ ಎಷ್ಟೋ ಕೈಗಾರಿಕೆಗಳು ನೇರವಾಗಿ ಕೃಷಿವಲಯವನ್ನು ಅವಲಂಬಿಸಿದೆ. ಹಾಗೆಯೇ ಇನ್ನೆಷ್ಟೋ ಕೈಗಾರಿಕೆಗಳು ಕೃಷಿವಲಯ ಸಂತುಷ್ಟಿಯಲ್ಲಿದ್ದಾಗ ಜಿಗಿತ ಕಾಣುವಂತಹದ್ದಾಗಿದೆ. ಹೀಗಾಗಿ ರೈತವರ್ಗ ನೆಮ್ಮದಿಯ ಬದುಕನ್ನು ಸಾಗಿಸುವಂತಾದಾಗ, ರೈತವರ್ಗದವರಕೊಳ್ಳುವ ಸಾಮರ್ಥ್ಯ ಹೆಚ್ಚಾದಾಗ ಅದರ ಲಾಭ ಖಂಡಿತವಾಗಿ ಕೈಗಾರಿಕೆಗಳ ಮೇಲೆ ಪೂರಕ ಪ್ರಭಾವವನ್ನು ಬೀರುತ್ತವೆ. ಮಾರುಕಟ್ಟೆಯು ಚಟುವಟಿಕೆಗಳಿಂದ ಗಿಜಿಗಿಜಿಗುಡಲು ರೈತರು ಸಂತೋಷವಾಗಿರುವುದು ಮುಖ್ಯವಾಗಿದೆ. ಯಾವಾಗ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೋ ಅದರ ಪ್ರಭಾವ ಅಡುಗೆ ಮನೆಯಿಂದ ಅಂತರಿಕ್ಷದ ವರೆಗಿನ ಎಲ್ಲಾ ಕ್ಷೇತ್ರಗಳಲ್ಲೂ ಉಂಟಾಗುತ್ತದೆ. ಆದ್ದರಿಂದ ಪ್ರಕೃತಿ ವಿಕೋಪ ವಿರಬಹುದು ಅಥವಾ ಇನ್ನಾವುದೇ ಸಂಕಷ್ಟಗಳ ಸಮಯದಲ್ಲಿ ರೈತವರ್ಗದವರ ಬೆಂಬಲಕ್ಕೆ ನಿಲ್ಲುವುದು ಎಲ್ಲ ದೇಶವಾಸಿಗಳ ಕರ್ತವ್ಯವಾಗಿದೆ.
?ಗಣೇಶ ಹೆಗಡೆ,
ಗಾಳಿಬೀಡು