ಗೋಣಿಕೊಪ್ಪಲು, ಡಿ.18: ದ.ಕೊಡಗಿನ ವಿವಿಧ ಭಾಗದಲ್ಲಿ ಕಾಡಾನೆಯ ಹಾವಳಿ ಮಿತಿಮೀರಿದ್ದು ಆನೆ ಮಾನವ ಸಂಘರ್ಷ ಸಾಮಾನ್ಯ ವಾದಂತಿದೆ. ರಾತ್ರಿ ವೇಳೆಯಲ್ಲಿ ಸಂಚರಿಸುತ್ತಿದ್ದ ಕಾಡಾನೆಯ ಹಿಂಡು ಇದೀಗ ಹಗಲಿನ ವೇಳೆಯಲ್ಲಿ ಭತ್ತದ ಗದ್ದೆ, ಕಾಫಿ ತೋಟಗಳಲ್ಲಿ ಕಾಣಿಸಿ ಕೊಳ್ಳುತ್ತಿರುವುದರಿಂದ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಆತಂಕ ಎದುರಾಗಿದೆ.
ಜನವಸತಿ ಪ್ರದೇಶ ಗಳಲ್ಲಿ ಕಾಡಾನೆಗಳು ಬಹಿರಂಗ ವಾಗಿಯೇ ಕಾಣಿಸಿಕೊಳ್ಳುತ್ತಿರುವುದ ರಿಂದ ಕಾರ್ಮಿಕರು ತೋಟ ಹಾಗೂ ಗದ್ದೆ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ 10 ವರ್ಷ ಗಳಿಂದ ಸರಿ ಸುಮಾರು 77 ಮಂದಿ ಆನೆ ದಾಳಿಯಿಂದ ಮೃತಪಟ್ಟಿರುವುದು ಜನತೆಯಲ್ಲಿ ಆತಂಕಕ್ಕೀಡುಮಾಡಿದೆ.
ಇದೀಗ ಕೊಡಗಿನಲ್ಲಿ ಕಾಫಿ ಕೊಯ್ಲು ಆರಂಭವಾಗಿದ್ದು ಕಾಫಿ ಕೊಯ್ಲು ಮಾಡಲೇ ಬೇಕಾದ ಅನಿವಾರ್ಯತೆ ಇಲ್ಲಿಯ ರೈತರ ದ್ದಾಗಿದೆ. ಸರಿಯಾದ ಸಮಯದಲ್ಲಿ ಕಾಫಿ ಹಣ್ಣನ್ನು ಕೊಯ್ಲು ಮಾಡದಿದ್ದಲ್ಲಿ ಕಾಫಿ ಹಣ್ಣುಗಳು ಹುದುರಿ ಕಷ್ಟದಲ್ಲಿರುವ ಬೆಳೆಗಾರರಿಗೆ ಮತ್ತಷ್ಟು ನಷ್ಟ ಸಂಭವಿಸಲಿದೆ. ನೆಲಕ್ಕುದುರಿದ ಕಾಫಿಯನ್ನು ಆಯಲು ಕಾರ್ಮಿಕರನ್ನು ಹೆಚ್ಚಾಗಿ ಬಳಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿಯ ರೈತರದ್ದಾಗಿದೆ. ಇದರೊಂದಿಗೆ ಭತ್ತದ ಕಟಾವು ಕೂಡ ನಡೆಯುತ್ತಿದ್ದು ಸಕಾಲದಲ್ಲಿ ಯಂತ್ರೋಪಕರಣಗಳು ಲಬ್ಯವಾಗದ ಕಾರಣ ಕಾರ್ಮಿಕರ ಮೊರೆ ಹೋಗಬೇಕಾಗಿದೆ. ಭತ್ತÀ ಕಟಾವು ಮಾಡಿದ ಗದ್ದೆಗಳಿಗೆ ಲಗ್ಗೆ ಯಿಡುವ ಕಾಡಾನೆಗಳು ಇವುಗಳನ್ನು ನಾಶ ಪಡಿಸಿ ರೈತರು ಬೆಳೆದ ಫಸಲು ಕೈ ಸೇರುವ ಮುನ್ನಾ ಕಾಡಾನೆಯ ಹೊಟ್ಟೆ ಸೇರುತ್ತಿದೆ.
ರಾತ್ರಿ ವೇಳೆಯಲ್ಲಿ ಗದ್ದೆಗಳನ್ನು ಕಾಯ್ದರು ಮುಂಜಾನೆ ವೇಳೆ ಕಾವಲುಗಾರ ಮನೆಗೆ ತೆರಳುತ್ತಿದ್ದಂತೆ ಕ್ಷಣಾರ್ಧದಲ್ಲಿ ಗದ್ದೆಗಳಿಗೆ ಹಿಂಡು ಹಿಂಡಾಗಿ ಕಾಡಾನೆಗಳು ದಾಳಿಯಿಡುತ್ತಿವೆ. ಇದರಿಂದ ರೈತ ಕಂಗಾಲಾಗಿದ್ದಾನೆ.
ರಾತ್ರಿ ವೇಳೆಯಲ್ಲಿ ಸಮೀಪದ ಕಾಡಿಗೆ ತೆರಳುವ ಕಾಡಾನೆಗಳು ಮುಂಜಾನೆ ಕಾಡಿನಿಂದ ನಾಡಿನತ್ತ ಆಗಮಿಸಿ ಹಗಲಿನ ವೇಳೆಯಲ್ಲಿಯೇ ರಾಜರೋಷವಾಗಿ ಗದ್ದೆಗಳಿಗೆ, ಕಾಫಿ ತೋಟಗಳಿಗೆ ಲಗ್ಗೆಯಿಡುವ ಮೂಲಕ ರೈತರಲಿ ಭಯದ ವಾತಾವರಣ ಸೃಷ್ಟಿಸಿದೆ.
ತೋಟದಲ್ಲಿರುವ ಬಾಳೆ ಫಸಲುಗಳು ನೆಲಕ್ಕುರುಳಿಸಿರುವ ಕಾಡಾನೆಗಳು ಒಂದೇ ಸಮನೆ ದಾಂಧಲೆ ನಡೆಸುತ್ತಿವೆ. ಇತ್ತೀಚೆಗೆ ಅಮ್ಮತ್ತಿಯ ಬೆಳೆಗಾರ ತನ್ನ ಕಾಫಿ ತೋಟಕ್ಕೆ ತೆರಳಿದ ಸಂದರ್ಭ ಹಗಲಿನ ವೇಳೆಯಲ್ಲಿಯೇ ಈತನ ಮೇಲೆ ದಾಳಿ ನಡೆಸಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಕೊಡಗಿನ ಅಮ್ಮತ್ತಿ, ಸಿದ್ದಾಪುರ, ಮಾಲ್ದಾರೆ, ಕಣ್ಣಂಗಾಲ, ಕಳತ್ಮಾಡು, ಶ್ರೀಮಂಗಲ, ಕುಟ್ಟ, ನಾಗರಹೊಳೆ, ಬೀರುಗ, ಕುರ್ಚಿ, ಮಾಯಮುಡಿ, ಬಾಳೆಲೆ, ಭಾಗಗಳಲ್ಲಿ ಕಾಡಾನೆಗಳು ಸಮೀಪದ ನಾಗರಹೊಳೆ ಅಭಯಾರಣ್ಯದಿಂದ ಆಗಮಿಸುತ್ತಿದ್ದು ಒಂದೇ ಸಮನೆ ರೈತರು ಬೆಳೆದ ಬೆಳೆಗಳನ್ನು ಹಾಳು ಮಾಡುತ್ತಿವೆ. ಅನೇಕ ಹೋರಾಟಗಳು ನಡೆದರು ಕಾಡಾನೆಯನ್ನು ನಿಯಂತ್ರಿಸಲು ಅರಣ್ಯ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ರೈತರ ಪಾಲಿಗೆ ಕಾಡಾನೆಗಳು ಶತ್ರುಗಳಾಗಿ ಪರಿಣಮಿಸಿದೆ. ಇವುಗಳ ನಿಯಂತ್ರಣಕ್ಕೆ ಸೋಲಾರ್ ಬೇಲಿ, ನೇತಾಡುವ ಸೋಲಾರ್‍ಬೇಲಿ, ಕಂದಕ, ರೈಲ್ವೆ ಕಂಬಿಯ ಬೇಲಿಗೆ ಕೋಟ್ಯಾಂತರ ಹಣವನ್ನು ಇಲಾಖೆಯು ವ್ಯಯ ಮಾಡಿತ್ತು. ಇದ್ಯಾವುದಕ್ಕೂ ಕಾಡಾನೆಗಳು ಬಗ್ಗುತ್ತಿಲ್ಲ. ಕಾಡಾನೆಗಳು ಗದ್ದೆ ತೋಟಗಳಿಗೆ ಆಗಮಿಸಿದ ಸಂದರ್ಭ ರೈತರು ಬೊಬ್ಬೆ ಹಾಕಿದಾಗ ಮಾತ್ರ ಕಾಡಾನೆಗಳು ಜಾಗ ಖಾಲಿ ಮಾಡುತ್ತಿವೆ. ಒಟ್ಟಿನಲ್ಲಿ ಕಾಡಾನೆಯ ಹಾವಳಿಯಿಂದ ರೈತರಿಗೆ ಹಾಗೂ ಕಾರ್ಮಿಕರಿಗೆ ಆತಂಕ ಎದುರಾಗಿದ್ದು ಕೈಗೆ ಬಂದ ಫಸಲುಗಳು ಬಾಯಿಗೆ ಬರಲಾರದಂತಹ ಪರಿಸ್ಥಿತಿ ಎದುರಾಗಿದೆ.