ವೀರಾಜಪೇಟೆ, ಡಿ. 18: ಅಂತರ್ರಾಷ್ಟ್ರೀಯ ಮಟ್ಟದ ವೈಸ್‍ಮನ್ ಎಲ್ಲ ರೀತಿಯ ಸಮಾಜ ಸೇವೆ ಹಾಗೂ ಕ್ರೀಡೆಗೆ ಆದ್ಯತೆ ನೀಡಿದ್ದು ಗ್ರಾಮಾಂತರ ಪ್ರದೇಶದಲ್ಲಿ ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳಿಗೆ ಮುಕ್ತ ಅವಕಾಶ ನೀಡಲಿದೆ ಎಂದು ಗೋಣಿಕೊಪ್ಪ ವೈಸ್‍ಮನ್ ಕ್ಲಬ್ ಅಧ್ಯಕ್ಷ ಬಿ.ಆರ್. ಶೆಟ್ಟಿ ಹೇಳಿದರು.

ಗೋಣಿಕೊಪ್ಪಲಿನ ವೈಸ್‍ಮನ್ ಕ್ಲಬ್‍ವತಿಯಿಂದ ಇಲ್ಲಿನ ಸಂತ ಅನ್ನಮ್ಮ ದ್ವಿಶತಮಾನೋತ್ಸವ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದ ಸಮಾರೋಪದಲ್ಲಿ ವಿಜೇತರಾದ ವಿವಿಧ ವಿಭಾಗಗಳ 15ಮಂದಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಿದ ನಂತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸಮಾರೋಪ ಸಮಾರಂಭದಲ್ಲಿ ಪಂದ್ಯಾಟದ ಪ್ರಾಯೋಜಕರಾದ ಬಿ.ಜೆ. ಬೋಪಣ್ಣ, ರಾಜೇಶ್ ನಾಯರ್ ಹಾಗೂ ಕ್ಲಬ್‍ನ ಅಂತೋಣಿ ರಾಬಿನ್, ಸಂತ ಅನ್ನಮ್ಮ ದೇವಾಲಯದ ಧರ್ಮಗುರು ರೆ.ಫಾ. ಮದಲೈಮುತ್ತು ಅತಿಥಿಗಳಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

ಪಂದ್ಯಾಟದ ವಿಜೇತರು

ಸಾಮಾನ್ಯ ವಿಭಾಗ: ಆಗಸ್ಟಿನ್ (ಪ್ರ) ಅನನ್ಯ ಸುರೇಶ್ (ದ್ವಿ) ಪಿ.ಪವನ್ (ತೃ) ಸುನೀಲ್ (ನಾಲ್ಕನೇ) ಶಶಿ (ಐದನೇ).

ಪ್ರೌಢಶಾಲೆ ವಿಭಾಗ: ಪ್ರಜ್ವಲ್ (ಪ್ರ) ರಾಜೇಶ್ (ದ್ವಿ) ಜೀನಾ (ತೃ) ಹಾರೂಸ್ (ನಾಲ್ಕನೇ) ಹಿತೇಶ್ (ಐದನೇ).

ಪ್ರಾಥಮಿಕ ಶಾಲಾ ವಿಭಾಗ: ಲೀಜೂ ಜೇಮ್ಸ್ (ಪ್ರ) ಅನಿಶಾ (ದ್ವಿ) ಪಾರ್ಶಾ ರೈ (ತೃ) ರಾಹುಲ್ ರಾಜ್ (ನಾಲ್ಕನೇ) ಮಿಲ್ಟನ್ ನಾರಾಯಣ್ (ಐದನೇ).

ವಿಶೇಷತೆ: ಚೆಸ್‍ಪಂದ್ಯಾಟದಲ್ಲಿ ಸಾಮಾನ್ಯ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಅನನ್ಯ ಸುರೇಶ್ ರಾಯಚೂರು ವಿಶ್ವವಿದ್ಯಾಲಯದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಯಾಗಿದ್ದು ಜಿಲ್ಲಾಮಟ್ಟದ ಚೆಸ್ ಪಂದ್ಯಾಟದಲ್ಲಿ ಭಾಗವಹಿಸಲು ರಾಯಚೂರಿನಿಂದ ವೀರಾಜಪೇಟೆಗೆ ಆಗಮಿಸಿದ್ದರು.

ವಿದ್ಯಾರ್ಥಿನಿ ಅನನ್ಯ ಸುರೇಶ್ ಈ ಹಿಂದೆ ನಡೆದ ಅಂತರರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಭಾಗವಹಿಸಿ ವಿಜೇತರಾಗಿದ್ದರು.