ಸೋಮವಾರಪೇಟೆ, ಡಿ. 17: ಬಗರ್ ಹುಕುಂ ಯೋಜನೆಯಡಿ ಕೃಷಿಕರಿಗೆ ಭೂ ಹಕ್ಕು ನೀಡಬೇಕೆಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ನೇತೃತ್ವದಲ್ಲಿ ಕೃಷಿಕರು, ಶಾಸಕರು ಮತ್ತು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

ತಾಲೂಕಿನ ಆಲೂರು ಸಿದ್ದಾಪುರ, ಮಾಲಂಬಿ, ಕಣಿವೆ ಬಸವನಹಳ್ಳಿ, ಹೊಸಳ್ಳಿ, ಹಿತ್ಲುಗದ್ದೆ, ಕಂತೆ ಬಸವನಹಳ್ಳಿ, ಉಂಜಿಗನಹಳ್ಳಿ, ದೊಡ್ಡಳ್ಳಿ, ಹೊಸಗುತ್ತಿ, ಕೈಸರವಳ್ಳಿ, ಬಡುಬನಹಳ್ಳಿ, ಅಂಕನಳ್ಳಿ, ಮಲ್ಲೇಶ್ವರ, ಕಡ್ಲೆಮಕ್ಕಿ ಇತ್ಯಾದಿ ಗ್ರಾಮಗಳ 600ಕ್ಕಿಂತ ಹೆಚ್ಚಿನ ಸಣ್ಣ ಹಾಗೂ ಅತೀಸಣ್ಣ ಭೂಪಟ್ಟೆ ರಹಿತರು ನಮೂನೆ 50, 53, 57ರಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ಇದುವರೆಗೆ ಸಾಗುವಳಿ ಮತ್ತು ಪಹಣಿ ಪತ್ರ ದೊರೆತಿಲ್ಲ ಎಂದು ವೇದಿಕೆಯ ಜಿಲ್ಲಾ ಸಂಚಾಲಕ ಸುನಂದ್ ಕುಮಾರ್ ದೂರಿದರು.

ಕೆಲ ಅರ್ಜಿಗಳು ಕಂದಾಯ ಕಚೇರಿಯಲ್ಲಿ ನಾಪತ್ತೆಯಾಗಿವೆ. ಕಳೆದ ಹಲವಾರು ವರ್ಷಗಳಿಂದ ಪ್ರಕೃತಿ ವಿಕೋಪವಿಂದ ಬೆಳೆಹಾನಿಯಾಗುತ್ತಿದ್ದು, ಆಸ್ತಿಗೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಪರಿಹಾರದಿಂದಲೂ ವಂಚಿತರಾಗಬೇಕಾಗಿದೆ. ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಭೂ ಮಂಜೂರಾತಿ, ಮಂಜೂರಾಗಿರುವ ಅರ್ಜಿಗಳಿಗೆ ಸಾಗುವಳಿ ಚೀಟಿಯನ್ನು ನೀಡಬೇಕೆಂದು ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಕೆ.ಗಣೇಶ್ ಒತ್ತಾಯಿಸಿದರು.

ಬಗರ್‍ಹುಕುಂ ಸಾಗುವಳಿದಾರರ ನಿಖರ ಮಾಹಿತಿಗಳು ಮತ್ತು ಪ್ರಗತಿ ವರದಿಗಳನ್ನು ಕಂಪ್ಯೂಟರೀಕರಣಗೊಳಿಸಿ ಅರ್ಜಿದಾರರಿಗೆ ಸಕಾಲದಲ್ಲಿ ಸೂಕ್ತ ಮಾಹಿತಿಯನ್ನು ಒದಗಿಸಿ, ಕೆಲ ಸಿಬ್ಬಂದಿಗಳ ಶೋಷಣೆಯಿಂದ ಕೃಷಿಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಕಡುಬಡವರು, ಸಣ್ಣ ಮತ್ತು ಅತೀ ಸಣ್ಣ ರೈತರುಗಳು ಆಕ್ರಮಿಸಿಕೊಂಡು ವಾಸವಿರುವ ಊರುಗುಪ್ಪೆ, ಊರುಡುವೆ ಜಾಗಗಳಿಗೆ ಭೂ ಮಂಜೂರಾತಿ ನೀಡಬೇಕು. ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಬೇಕು. ಪಾರದರ್ಶಕವಾಗಿ ಅರ್ಜಿಗಳ ವಿಲೇವಾರಿಯಾಗಬೇಕು ಎಂದು ಮನವಿ ಮಾಡಿದರು. ಮನವಿ ಪತ್ರವನ್ನು ತಹಶೀಲ್ದಾರ್ ಪರವಾಗಿ ಶಿರಸ್ತೇದಾರ್ ಮಹೇಶ್ ಸ್ವೀಕರಿಸಿದರು.ಈ ಸಂದರ್ಭ ವೇದಿಕೆಯ ಕಾರ್ಯದರ್ಶಿ ಆಶಾ, ಸದಸ್ಯರಾದ ಕೆ.ವಿ. ಜಯಕುಮಾರ್, ಪಿ.ಎನ್.ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.