ಮಡಿಕೇರಿ, ಡಿ. 17: ಕರ್ನಾಟಕ ರಾಜ್ಯ ಫೈಝೀಸ್ ಅಸೋಸಿಯೇಷನ್ ವತಿಯಿಂದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ 60ನೇ ವಾರ್ಷಿಕ ಮಹಾ ಸಮ್ಮೇಳನ ಹಾಗೂ ಜಾಮಿಯ್ಯಾ ನೂರಿಯ್ಯಾ ಪಟ್ಟಕಾಡ್ 57ನೇ ವಾರ್ಷಿಕೋತ್ಸವ ಹಾಗೂ 55ನೇ ಸನುದಾನದ ಮಹಾ ಸಮ್ಮೇಳನ ಇದರ ಪ್ರಚಾರ ಮಹಾ ಸಮ್ಮೇಳನವು ಮಡಿಕೇರಿ ನಗರ ಗಾಂಧಿ ಮೈದಾನದಲ್ಲಿ ನಡೆಯಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಬೆಂಗಳೂರು ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ ಹ್ಯಾರಿಸ್, (ಮೊದಲ ಪುಟದಿಂದ) ಪ್ರಾಣವನ್ನು ತ್ಯಾಗ ಮಾಡಲು ನಾವು ಸಿದ್ದ, ಆದರೆ ದೇಶವನ್ನು ಬಿಟ್ಟು ಹೋಗಲು ನಾವು ಸಿದ್ದರÀಲ್ಲ ಎಂದರು.

ನಾವು ಈ ದೇಶಕ್ಕೆ ನಿನ್ನೆ ಮೊನ್ನೆ ಬಂದವರಲ್ಲ. ದೇಶದ ಸಂವಿಧಾನವನ್ನು ನಾವು ಕಾಪಾಡಿಕೊಂಡು ಬಂದವರು. ಭಾರತ ದೇಶವು ಜಾತೀವಾದಿ ದೇಶವಲ್ಲ, ಜಾತ್ಯತೀತ ರಾಷ್ಟ್ರವಾಗಿದೆ. ನಮ್ಮ ಗುರು ಹಿರಿಯರು ತ್ಯಾಗ, ಬಲಿದಾನ ಮಾಡಿ ಕಟ್ಟಿದ ದೇಶವಿದು, ಈ ದೇಶದಲ್ಲಿ ವಾಸಿಸುತ್ತಿರುವ ಸರ್ವರೂ ನಮ್ಮ ಅಣ್ಣ-ತಮ್ಮಂದಿರು ,ಅಕ್ಕ-ತಂಗಿಯಂದಿರಾಗಿದ್ದಾರೆ. ಭಾರತವು ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶವಾಗಿದೆ.ಕೇವಲ ಸಂಖ್ಯಾ ಬಲದ ಆಧಾರದಲ್ಲಿ ದೇಶದ ಸಂವಿಧಾನವನ್ನು ಬದಲಾಯಿಸಲು ಮುಂದಾಗಿರುವವರ ಯಾವುದೇ ಷಡ್ಯಂತ್ರಕ್ಕೆ ನಾವು ಬಲಿಯಾಗುವುದಿಲ್ಲ ಎಂದು ನುಡಿದರು. ಈಗಾಗಲೇ ತ್ರಿವಳಿ ತಲಾಖ್ ಮಸೂದೆ ಸೇರಿದಂತೆ ಹಲವು ವಿಷಯಗಳಲ್ಲಿ ನಮಗೆ ಅನ್ಯಾಯವಾಗಿದೆ ಮುಸ್ಲಿಂ ಸಮುದಾಯವು ಶಾಂತಿ ಪ್ರಿಯ ಸಮುದಾಯವಾಗಿದೆ. ನಮ್ಮ ತಾಳ್ಮೆಯನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಯಾರಿಂದಲೂ ನಮ್ಮನ್ನು ಹೊರಹಾಕಲು ಸಾಧ್ಯವಿಲ್ಲ.ಇದರ ವಿರುದ್ಧ ಮುಂದಿನ ದಿನಗಳಲ್ಲಿ ವಿಧಾನ ಸೌಧದಲ್ಲಿ ಹೋರಾಟ ಮಾಡುತ್ತೇನೆ ಎಂದು ಶಾಸಕ ಹ್ಯಾರಿಸ್ ಹೇಳಿದರು. ಕರ್ನಾಟಕ ರಾಜ್ಯ ಎಸ್‍ಕೆಎಸ್‍ಎಸ್‍ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವಧರ್ಮದವರು ಶಾಂತಿಯುತವಾಗಿ ಜೀವನ ಮಾಡುತ್ತಿರುವ ದೇಶ ಭಾರತ. ಈ ದೇಶದಲ್ಲಿ ಕಳೆದ 93 ವರ್ಷಗಳಿಂದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಸಮಸ್ತದ ಅಧೀನದಲ್ಲಿ 10ಸಾವಿರಕ್ಕೂ ಹೆಚ್ಚು ಮದರಸಗಳು ಕಾರ್ಯನಿರ್ವಹಿಸುತ್ತಿವೆ.

ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ತಂಡವು ಜಾತಿ ಧರ್ಮವನ್ನು ಮರೆತು ಕಾರ್ಯನಿರ್ವಹಿಸಿದೆ ಎಂದರು. ಕಾರ್ಯಕ್ರಮಕ್ಕೆ ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಎ ಯಾಕೂಬ್ ಧ್ವಜಾರೋಹಣ ಮೂಲಕ ಚಾಲನೆ ನೀಡಿದರು. ಝೈನುಲ್ ಆಬಿದೀನ್ ಜಿಫ್ರೀ ತಂಙಲ್ ಬೆಳ್ತಂಗಡಿ ಪ್ರಾರ್ಥನೆ ನೆರವೇರಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಓಣಂಬಳ್ಳಿ ಮುಹಮ್ಮದ್ ಫೈಝಿ, ಅಬ್ದುಲ್ಲಾ ಫೈಝಿ ಕೊಡಗು, ಸಯ್ಯದ್ ಆಬಿದೀನ್ ತಂಙಲ್ ಕುನ್ನುಂಗೈ , ನಾಪೋಕ್ಲು ಗ್ರಾಮ ಪಂಚಾಯತಿ ಅಧ್ಯಕ್ಷ ಇಸ್ಮಾಯಿಲ್, ಉಸ್ಮಾನ್ ಹಾಜಿ ಸಿದ್ದಾಪುರ ಹಾಗೂ ಇನ್ನಿತರರು ಇದ್ದರು.

-ಕೆ.ಎಂ. ಇಸ್ಮಾಯಿಲ್ ಕಂಡಕರೆ