ಸೋಮವಾರಪೇಟೆ, ಡಿ.14: ಹದಗೆಟ್ಟಿರುವ ದೇಶದ ಆರ್ಥಿಕ ಪರಿಸ್ಥಿತಿಯ ನಡುವೆ ಸ್ಥಳೀಯವಾಗಿ ರುವ ಸಹಕಾರ ಸಂಘಗಳೇ ರೈತರಿಗೆ ಆಧಾರವಾಗಿವೆ ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ಅಭಿಮತ ವ್ಯಕ್ತಪಡಿಸಿದರು.ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘದಿಂದ ಸಮೀಪದ ಆಲೇಕಟ್ಟೆ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ರೈತ ಸಹಕಾರ ಭವನ ಮತ್ತು ವಾಣಿಜ್ಯ ಸಂಕೀರ್ಣಗಳ ಉದ್ಘಾಟನೆಯನ್ನು ನೆರವೇರಿಸಿ, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ದೇಶ ಮತ್ತು ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ರೈತಾಪಿ ವರ್ಗ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಜಿಎಸ್‍ಟಿ, ನೋಟ್ ಬ್ಯಾನ್ ಸೇರಿ ದಂತೆ ಇನ್ನಿತರ ಆರ್ಥಿಕ ಸುಧಾರಣಾ ಕ್ರಮಗಳು ಯಶಸ್ವಿಯಾಗದೇ ಆರ್ಥಿಕತೆಯ ಮೇಲೆ ಪೆಟ್ಟು ನೀಡಿದೆ. ಪರಿಣಾಮ ಜಿಡಿಪಿಯೂ ಕುಸಿದಿದ್ದು, ಸಮಸ್ಯೆಗಳ ಚಕ್ರವ್ಯೂಹದಲ್ಲಿ ರೈತರು ಸಿಲುಕಿ ಪರಿತಪಿಸುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಜೀವಿಜಯ ಅಭಿಪ್ರಾಯಿಸಿದರು.(ಮೊದಲ ಪುಟದಿಂದ)ಈ ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ಧರಾಮಯ್ಯ ಮತ್ತು ಕುಮಾರಸ್ವಾಮಿ ಅವರುಗಳು ರೈತರ ಸಾಲ ಮನ್ನಾ ಮಾಡಿದ್ದು, ಜಿಲ್ಲೆಯ ಹಲವಷ್ಟು ರೈತರಿಗೆ ಪ್ರಯೋಜನವಾಗಿದೆ. ಕೇಂದ್ರ ಸರ್ಕಾರ ಉದ್ಯಮಿಗಳ ಕೋಟ್ಯಾಂತರ ಸಾಲಮನ್ನಾ ಮಾಡುವಲ್ಲಿ ತೋರ್ಪಡಿಸುವ ಕಾಳಜಿ, ರೈತರ ಸಾಲಮನ್ನಾದಲ್ಲಿ ತೋರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಚಿವರು, ದೇಶದಲ್ಲಿ ಕೈಗಾರಿಕಾ ವಲಯವೂ ಕುಸಿದಿದೆ. ಉದ್ಯೋಗ ಕಡಿತವಾಗಿದೆ. ಕೃಷಿ ಪರಿಕರ, ರಸಗೊಬ್ಬರ ಬೆಲೆ ಏರಿಕೆಯಾಗಿದ್ದು, ಕೊಂಡುಕೊಳ್ಳುವ ಶಕ್ತಿ ರೈತರಿಗೆ ಇಲ್ಲವಾಗಿದೆ ಎಂದು ವಿಶ್ಲೇಷಿಸಿದರು.

ಜಿಲ್ಲೆಯಲ್ಲಿ ಕಾಫಿ, ಏಲಕ್ಕಿ ಉದ್ಯಮವೂ ನಿರೀಕ್ಷಿತ ಪ್ರಗತಿಯಲ್ಲಿಲ್ಲ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಸಹಕಾರ ಸಂಘಗಳೇ ರೈತರಿಗೆ ಆಧಾರವಾಗಿದ್ದು, ಇವುಗಳ ಆಡಳಿತಗಾರರು ಕರ್ತವ್ಯ ಪ್ರಜ್ಞೆ, ನಿಷ್ಠೆಯಿಂದ ಸೇವೆ ಸಲ್ಲಿಸುವ ಮೂಲಕ ಸಹಕಾರ ಕ್ಷೇತ್ರವನ್ನು ಗಟ್ಟಿಗೊಳಿಸಬೇಕಿದೆ ಎಂದ ಜೀವಿಜಯ ಅವರು, ರೈತರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸಬೇಕಿದೆ ಎಂದು ಆಗ್ರಹಿಸಿದರು.

ಮುಖ್ಯ ಅತಿಥಿಯಾಗಿದ್ದ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಡಿ. ಮಂಜುನಾಥ್ ಮಾತನಾಡಿ, ಸಹಕಾರ ಸಂಘಗಳಿಗೆ ಸ್ಥಿರವಾದ ಆಸ್ತಿಯ ಅಗತ್ಯವಿದೆ. ಆಸ್ತಿ ಹೊಂದಿಲ್ಲದ ಸಂಘಗಳು ಬೆಳವಣಿಗೆ ಕಾಣಲು ಸಾಧ್ಯವಿಲ್ಲ. ಸಹಕಾರ ಸಂಘಗಳು ಕೃಷಿ ಸೇರಿದಂತೆ ಕೃಷಿಯೇತರ ಸಾಲಗಳನ್ನು ನೀಡುವ ಮೂಲಕ ಹೆಚ್ಚಿನ ಲಾಭ ಗಳಿಸಲು ಮುಂದಾಗಬೇಕು ಎಂದರು.

ಇತ್ತೀಚಿನ ವರ್ಷಗಳಲ್ಲಿ ನಬಾರ್ಡ್‍ನಿಂದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ಗೆ ಬರುವ ಸಾಲದ ಮೊತ್ತದಲ್ಲಿ ಗಣನೀಯ ಇಳಿಕೆಯಾಗಿದೆ. ಕೇಂದ್ರ ಸರ್ಕಾರವೂ ಸಹ 80 ಪಿ. ಅಡಿಯಲ್ಲಿ ರಿಯಾಯಿತಿ ರದ್ದುಗೊಳಿಸಿದೆ. ಇಂತಹ ಕ್ರಮಗಳ ನಡುವೆಯೂ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಬಲಿಷ್ಠವಾಗಿದ್ದು, ಇವುಗಳನ್ನು ಮುಂದುವರೆಸಿಕೊಂಡು ಹೋಗಬೇಕಿದೆ. ಸದಸ್ಯರು ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಸಂಘದ ಬೆಳವಣಿಗೆಗೆ ಕೈಜೋಡಿಸಬೇಕಿದೆ ಎಂದು ಅಭಿಪ್ರಾಯಿಸಿದರು.

ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್ ಮಾತನಾಡಿ, ಸಹಕಾರ ಸಂಘದ ಕಚೇರಿ ಬಳಿಯಿದ್ದ ಹಳೆಯ ಗೋದಾಮು ಕೆಡವಿ ನೂತನವಾಗಿ ರೈತ ಸಹಕಾರ ಭವನ ನಿರ್ಮಿಸಲಾಗಿದ್ದು, ಸರ್ಕಾರದಿಂದ ಯಾವದೇ ಅನುದಾನ ಬಂದಿಲ್ಲ. ಶಾಸಕರು, ಸಂಸದರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ತೋಳೂರುಶೆಟ್ಟಳ್ಳಿಯಲ್ಲಿ ರೈತರಿಗೆ ಉಪಯೋಗವಾಗಿಸುವ ನಿಟ್ಟಿನಲ್ಲಿ ಗೋದಾಮು ನಿರ್ಮಿಸುವ ಯೋಜನೆಯಿದ್ದು, ಆ ಸಂದರ್ಭದಲ್ಲಾದರೂ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇದರೊಂದಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಮೂಲಕ ಅಪೆಕ್ಸ್ ಬ್ಯಾಂಕ್‍ನಿಂದ 5 ಲಕ್ಷಕ್ಕೆ ಬೇಡಿಕೆ ಇಡಲಾಗಿದೆ. ಸಂಘದ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಸದಸ್ಯರ ಸಹಕಾರದಿಂದ ಲಕ್ಷಾಂತರ ವೆಚ್ಚದಲ್ಲಿ ಸಭಾಂಗಣ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದ್ದು, ಸಂಘದ ಬೆಳವಣಿಗೆಗೆ ಮುಂದೆಯೂ ಸದಸ್ಯರ ಸಹಕಾರ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಭರತ್‍ಕುಮಾರ್, ಬಿ.ಕೆ. ಚಿಣ್ಣಪ್ಪ, ಸಂಘದ ಉಪಾಧ್ಯಕ್ಷೆ ಜಾನಕಿ ವೆಂಕಟೇಶ್, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯೆ ಹೆಚ್.ಎನ್. ತಂಗಮ್ಮ, ಚೌಡ್ಲು ಗ್ರಾ.ಪಂ. ಅಧ್ಯಕ್ಷೆ ರಮ್ಯ ಕರುಣಾಕರ, ಹಾನಗಲ್ಲು ಗ್ರಾ.ಪಂ. ಅಧ್ಯಕ್ಷೆ ರೇಣುಕ ವೆಂಕಟೇಶ್, ಸೋಮವಾರಪೇಟೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಭರತ್, ಶಾಂತಳ್ಳಿ ವಿಎಸ್‍ಎಸ್‍ಎನ್ ಅಧ್ಯಕ್ಷ ಕುಂದಳ್ಳಿ ದಿನೇಶ್ ಸೇರಿದಂತೆ ಚೌಡ್ಲು ಸಹಕಾರ ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು.

ಕಟ್ಟಡವನ್ನು ನಿರ್ಮಿಸಿದ ಗುತ್ತಿಗೆದಾರ ಮಹೇಶ್ ತಿಮ್ಮಯ್ಯ, ಇಂಜಿನಿಯರ್ ಪ್ರಜಾ ಪೂಣಚ್ಚ, ಕುಶಲಕರ್ಮಿ ಸತೀಶ್, ವಿದ್ಯುತ್ ಗುತ್ತಿಗೆದಾರ ಯಾಸ್ಮೀನ್ ಅವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಂಘದ ಬೆಳವಣಿಗೆಗೆ ಸಹಕರಿಸಿದ ಪ್ರಮುಖರಾದ ಮುತ್ತಪ್ಪ, ಡಿ.ಎಸ್.ವೀರಪ್ಪ, ಬಿ.ಎಂ. ಲವ, ಬಸವರಾಜು, ಕೆ.ಎಂ. ನಾಗರಾಜು, ರಮೇಶ್, ನಂದಕುಮಾರ್, ಮಂದಣ್ಣ, ಬೋಪಯ್ಯ, ಮಲ್ಲಪ್ಪ, ಪೊನ್ನಪ್ಪ, ಗಣೇಶ್, ಸೋಮಶೇಖರ್ ಅವರುಗಳನ್ನು ಅಭಿನಂದಿಸಲಾಯಿತು. ಕವಿತ ವಿರೂಪಾಕ್ಷ, ನಾಗರಾಜು ಮತ್ತು ಕೆ.ಎಸ್. ವಿಜಯ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.