ವೀರಾಜಪೇಟೆ, ಡಿ. 15: ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸಮಗ್ರ ಶಿಕ್ಷಣ ಅಭಿಯಾನ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್) ವತಿಯಿಂದ ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದÀ್ರದ ವತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ಆವಿಷ್ಕಾರ ಕಾರ್ಯಕ್ರಮದಡಿ ವೀರಾಜಪೇಟೆ ಕ್ಲಸ್ಟರ್‍ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಆಚರಣೆಯಲ್ಲಿ ‘ವೈಜ್ಞಾನಿಕ ಮನೋಭಾವನೆ ಬೆಳವಣಿಗೆ’ ಕುರಿತು ಉಪನ್ಯಾಸ ಹಾಗೂ ‘ಪವಾಡ ರಹಸ್ಯ ಬಯಲು ಕಾರ್ಯಕ್ರಮ’ ನಡೆಯಿತು.
ರಾಷ್ಟ್ರೀಯ ವಿಚಾರವಾದಿಗಳ ವೇದಿಕೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಆಶ್ರಯದಲ್ಲಿ ಮೌಢ್ಯಾಚರಣೆ ವಿರೋಧಿ ಜಾಗೃತಿ ಆಂದೋಲನದ ಅಂಗವಾಗಿ ಮಕ್ಕಳಿಗೆ ‘ವೈಜ್ಞಾನಿಕ ಮನೋಭಾವ ಬೆಳವಣಿಗೆ’ ಕುರಿತು ಉಪನ್ಯಾಸ ನೀಡಿದ ವಿಚಾರವಾದಿ ರಾಷ್ಟ್ರೀಯ ವಿಚಾರವಾದಿಗಳ ವೇದಿಕೆಯ ಅಧ್ಯಕ್ಷ ಪ್ರೊ. ನರೇಂದ್ರನಾಯಕ್ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಕೆಲವು ದೇವಮಾನವ ರೆಂಬ ಸೋಗಿನಲ್ಲಿ ಜನರಿಗೆ ಮೋಸ, ವಂಚನೆ ಮಾಡುತ್ತಿರುವುದು ಕಂಡುಬರುತ್ತಿದೆ. ಕೆಲವು ಮುಗ್ಧರು ಇದನ್ನು ನಂಬಿ ಶೋಷಣೆಗೆ ಒಳಗಾಗು ತ್ತಿದ್ದಾರೆ. ಇಂತಹ ಶೋಷಣೆಯನ್ನು ತಡೆಗಟ್ಟುವ ದಿಸೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಶಿಕ್ಷಣ ಸಂಸ್ಥೆಗಳು ಮತ್ತು ಪ್ರಗತಿಪರ ಸಂಘಟನೆಗಳು ಮುಂದಾಗಬೇಕಿದೆ. ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಂಡು ಪವಾಡಗಳ ಹಿಂದಿರುವ ವೈಜ್ಞಾನಿಕ ಸತ್ಯವನ್ನು ಜನರಿಗೆ ತಿಳಿಸಬೇಕು ಎಂದರು.
‘ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳವಣಿಗೆ’ ಕುರಿತು ಮಾಹಿತಿ ನೀಡಿದ ಮಕ್ಕಳ ವಿಜ್ಞಾನ ಕಾರ್ಯಕ್ರಮ ಸಂಘಟಕರೂ ಆದ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಯೋಜಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳುವ ಮೂಲಕ ವೈಚಾರಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದರು. ರಾಷ್ಟ್ರೀಯ ವಿಚಾರವಾದಿಗಳ ವೇದಿಕೆ ಮತ್ತು ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಕಂದಾಚಾರ, ಮೌಢ್ಯ ನಿವಾರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಮಾತನಾಡಿ, ಮಕ್ಕಳ ಪ್ರಶ್ನೆಯು ಪ್ರಜ್ಞೆಯಾಗಿ ಬೆಳೆಯಲು ವಿಜ್ಞಾನ ಹಬ್ಬ ಸಹಕಾರಿಯಾಗಿದೆ ಎಂದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡು ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದರು.
ವಿಚಾರವಾದಿಗಳ ವೇದಿಕೆಯ ಉಪಾಧ್ಯಕ್ಷ ಪಿ. ಶ್ಯಾಮ್‍ಸುಂದರ್‍ರಾವ್, ಕೂಡಿಗೆ ಡಯಟ್‍ನ ಹಿರಿಯ ಉಪನ್ಯಾಸಕ ಕೆ.ವಿ.ಸುರೇಶ್, ಸಿ.ಆರ್.ಪಿ. ವೆಂಕಟೇಶ್, ಸಂಪನ್ಮೂಲ ಶಿಕ್ಷಕರಾದ ಉತ್ತಪ್ಪ, ಯಲ್ಲಪ್ಪ ಪೂಜಾರಿ, ಗೀತಾಂಜಲಿ, ಬಿ.ಆರ್.ಸತೀಶ್, ಅಜಿತ, ಕೇಶವಮೂರ್ತಿ ಇತರರು ಇದ್ದರು.
ಪವಾಡ ರಹಸ್ಯ ಬಯಲು ಕಾರ್ಯಕ್ರಮ
‘ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ’ ಎಂಬ ಧ್ಯೇಯವಾಕ್ಯದೊಂದಿಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸ್ಲೈಡ್ ಪ್ರದರ್ಶನದೊಂದಿಗೆ ವಿವಿಧ ಪ್ರಾತ್ಯಕ್ಷಿಕೆಗಳ ಮೂಲಕ ‘ಪವಾಡ ರಹಸ್ಯ ಬಯಲು ಕಾರ್ಯಕ್ರಮ’ ನಡೆಸಿಕೊಟ್ಟ ಡಾ. ನರೇಂದ್ರ ನಾಯಕ್, ವಿವಿಧ ಪವಾಡಗಳ ಹಿಂದಿರುವ ವೈಜ್ಞಾನಿಕ ಸತ್ಯದ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು. ಮಕ್ಕಳು ಕುತೂಹಲದಿಂದ ಹಲವಾರು ಪ್ರಶ್ನೆಗಳನ್ನು ಕೇಳುವ ಮೂಲಕ ವೈಜ್ಞಾನಿಕ ಸತ್ಯವನ್ನು ಕಂಡುಕೊಳ್ಳಲು ಪ್ರಯತ್ನಿಸಿದರು.
ಪ್ರದರ್ಶನ: ಕೈಚಳಕದಿಂದ ಶೂನ್ಯದಿಂದ ಬೂದಿ ಸೃಷ್ಟಿಸುವುದು, ಚಿನ್ನದ ಸರ ಸೃಷ್ಠಿಸುವುದು, ಶೂನ್ಯದಿಂದ ನೋಟು ಸೃಷ್ಟಿಸಿವುದು, ದಾರವನ್ನು ಕತ್ತರಿಸುವುದು, ಮೊಣಕೈಗೆ ನಿಂಬೆ ಹಣ್ಣಿನೊಂದಿಗೆ ಸೂಜಿ ಪೋಣಿ ಸುವುದು, ನೀರಿನಿಂದ ತೆಂಗಿನಕಾಯಿ ಉರಿಸುವುದು, ತಲೆಯ ಮೇಲೆ ಬೆಂಕಿ ಉರಿಸುವುದು, ಮುಳ್ಳಿನ (ಮೊಳೆ) ಹಲಗೆ ಮೇಲೆ ನಿಂತುಕೊಳ್ಳುವುದು ಸೇರಿದಂತೆ ಮುಂತಾದ ಪವಾಡಗಳ ಹಿಂದಿರುವ ವೈಜ್ಞಾನಿಕ ಸತ್ಯವನ್ನು ಪ್ರಾತ್ಯಕ್ಷಿಕೆ ಮತ್ತು ಸ್ಲೈಡ್ ಪ್ರದರ್ಶನದ ಮೂಲಕ ನರೇಂದ್ರ ನಾಯಕ್ ಮಕ್ಕಳಿಗೆ ವಿವರಿಸಿದರು.