ಚೆಟ್ಟಳ್ಳಿ, ಡಿ. 14: ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ತಾ. 17 ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯಲಿರುವ ಸಮಸ್ತ ಮಹಾ ಸಮ್ಮೇಳನದ ಪ್ರಚಾರ ಸಮ್ಮೇಳನಾ ಜಾಥಾ ಕಾರ್ಯಕ್ರಮವು ಕುಶಾಲನಗರದ ಸಿಟಿಸೆಂಟರ್‍ನ ಆವರಣದಲ್ಲಿ ನಡೆಯಿತು.
ಕೊಡಗು ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಸಂಘಟನೆ ವತಿಯಿಂದ ಸಮಸ್ತ ಮಹಾ ಸಮ್ಮೇಳನದ ಪ್ರಚಾರ ಕಾರ್ಯಕ್ರಮವನ್ನು ಜಿಲ್ಲೆಯಾಧ್ಯಂತ ಹಮ್ಮಿಕೊಂಡಿದ್ದು, ಶುಕ್ರವಾರ ಕುಶಾಲನಗರದಲ್ಲಿ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್ ನ ಪ್ರಮುಖ ತಮ್ಲೀಕ್ ದಾರಿಮಿ, ವಿಶ್ವ ಶಾಂತಿಗಾಗಿ ಧಾರ್ಮಿಕ ವಿದ್ಯೆ ಎಂಬ ಧ್ಯೇಯದೊಂದಿಗೆ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ನಡೆಯಲಿರುವ ಸಮಸ್ತ ಮಹಾ ಸಮ್ಮೇಳನದ ಪ್ರಚಾರ ಸಮ್ಮೇಳನಾ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಜಿಲ್ಲೆಯಾದ್ಯಂತ ಬಿರುಸಿನ ಪ್ರಚಾರ ಕಾರ್ಯ ನಡೆಯುತ್ತಿದ್ದು, ಕುಶಾಲನಗರದಿಂದ ಕೂಡಿಗೆ ಮಾರ್ಗವಾಗಿ ತೆರಳಿ ನಂತರ ಸೋಮವಾರಪೇಟೆ, ಶನಿವಾರಸಂತೆಗೆ ತೆರಳಿ ಕೊಡ್ಲಿಪೇಟೆಯಲ್ಲಿ ಸಮಾಪ್ತಿಗೊಳ್ಳಲಿದೆ ಎಂದರು. ನಂತರ ಕುಶಾಲನಗರದಿಂದ ಕೂಡಿಗೆಗೆ ಬೈಕ್ ಹಾಗೂ ಕಾರುಗಳಲ್ಲಿ ವಾಹನ ಜಾಥಾ ತೆರಳಿದರು.
ಈ ಸಂದರ್ಭ ಎಸ್.ಕೆ.ಎಸ್.ಎಸ್.ಎಫ್ ರಾಜ್ಯ ಸಮಿತಿ ಪ್ರಮುಖರಾದ ಉಮರ್ ಫೈಝಿ, ಕೊಡಗು ಜಿಲ್ಲಾ ಉಪಖಾಝಿ ಅಬ್ದುಲ್ಲಾ ಫೈಜಿ, ಹಾಗೂ ಕೊಡಗು ಜಿಲ್ಲಾ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಪದಾಧಿಕಾರಿಗಳಾದ ಸೂಫಿ ದಾರಿಮಿ, ಹಿಲಾಲ್ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಕಾರ್ಯದರ್ಶಿ ಮಜೀದ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.