ಮಡಿಕೇರಿ, ಡಿ. 15: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಆಶ್ರಯದಲ್ಲಿ ವಿಶ್ವ ಅಲ್ಪಸಂಖ್ಯಾತ ಜನಾಂಗದ ಹಕ್ಕುಗಳ ದಿನಾಚರಣೆ ಅಂಗವಾಗಿ ತಾ.18ರಂದು ನಾಪೋಕ್ಲುವಿನ ಕೊಳಕೇರಿಯಲ್ಲಿರುವ ಅಪ್ಪಚ್ಚೀರ ರಮ್ಮಿ ನಾಣಯ್ಯ ಅವರ ಕಾವೇರಿ ಎಸ್ಟೇಟ್ ಮೈದಾನದಲ್ಲಿ ವಾರ್ಷಿಕ ತೋಕ್ ನಮ್ಮೆ ಉತ್ಸವ (ಗನ್ ಕಾರ್ನಿವಲ್) ನಡೆಯಲಿದೆ.
ಅಂದು ಪೂರ್ವಾಹ್ನ 10.30 ಗಂಟೆಗೆ ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ನೇತೃತ್ವದಲ್ಲಿ ಬಂದೂಕು ಕುರಿತಾದ (ತೋಕ್ ಹಾಡು) ಪಾಟ್ನೊಂದಿಗೆ ಸಾಮೂಹಿಕ ಪೂಜೆ ನೆರವೇರಿಸಲಾಗುವುದು.
ತೋಕ್ ಪೂಜೆಯ ನಂತರ ಮಹಿಳೆಯರು, ಮಕ್ಕಳು ಮತ್ತು ಪುರುಷರಿಗೆ ಪ್ರತ್ಯೇಕ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯ ನಂತರ ಸಭಾ ಕಾರ್ಯಕ್ರಮ, ವಿಜೇತರಿಗೆ ಪ್ರಶಸ್ತಿ ವಿತರಣೆ ಮಾಡಲಾಗುವುದು. ಯೋಧ ಪರಂಪರೆಯ ಕೊಡವ ಬುಡಕಟ್ಟು ಕುಲದ ಧಾರ್ಮಿಕ ಸಂಕೇತವಾದ ಕೋವಿ ಹಕ್ಕು ಅಭಾಧಿತವಾಗಿ ಮುಂದುವರೆಯಲು ಹಲವು ನಿರ್ಣಯ ಕೈಗೊಳ್ಳಲಾಗುವುದು. ಕೊಡವ ಸಾಂಪ್ರದಾಯಿಕ ಅಡುಗೆ ಭೋಜನದೊಂದಿಗೆ ಸಮಾರೋಪ ನಡೆಯಲಿದೆ. ಅತ್ಯುತ್ತಮ ಗುರಿಗಾರ ಮಹಿಳೆ ಮತ್ತು ಪುರುಷರಿಗೆ ವಿಶೇಷ ಬಹುಮಾನ ನೀಡಲಾಗುವುದು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಗುವುದು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನವದೆಹಲಿಯ ಕರ್ನಲ್ ಅನಿಲ್ ಭಟ್ ಅವರು ಪಾಲ್ಗೊಳ್ಳುತ್ತಿದ್ದಾರೆ.