ಶನಿವಾರಸಂತೆ, ಡಿ. 14: ಕ್ರೀಡೆಗೆ ವಯಸ್ಸು ಮುಖ್ಯವಲ್ಲ. ಕ್ರೀಡೆ ಹಾಗೂ ಕ್ರೀಡಾಕೂಟದ ಬಗ್ಗೆ ಗ್ರಾಮೀಣ ಮಹಿಳೆಯರಲ್ಲೂ ಸದಭಿರುಚಿ ಇರಬೇಕು ಎಂದು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಚಿನ್ನ, ಬೆಳ್ಳಿ ಪದಕ ಗಳಿಸಿರುವ ತಾಳೂರಿನ ಕೂಲಿ ಕಾರ್ಮಿಕ ಮಹಿಳಾ ಕ್ರೀಡಾ ಪಟು ಕಮಲಮ್ಮ ಅಭಿಪ್ರಾಯಪಟ್ಟರು.

ಪಟ್ಟಣದ ಬ್ರೈಟ್ ಅಕಾಡೆಮಿ ಹೇಮಾ ವಿದ್ಯಾಸಂಸ್ಥೆಯ ವಾರ್ಷಿ ಕೋತ್ಸವ ಪ್ರಯುಕ್ತ ಪೋಷಕರಿಗಾಗಿ ನಡೆದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಯಾಗಿದ್ದು, ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಅತ್ಯಗತ್ಯ ವಾಗಿದೆ. ಪೋಷಕರಲ್ಲಿ ಕ್ರೀಡೆ ಬಗ್ಗೆ ಆಸಕ್ತಿ ಇದ್ದರೆ ಮಕ್ಕಳಲ್ಲೂ ಸಹಜವಾಗಿ ಆಸಕ್ತಿ ಮೂಡುತ್ತದೆ ಎಂದರು.

ತೋಟದಲ್ಲಿ ಕೂಲಿ ಮಾಡುತ್ತಿದ್ದ 53ರ ವಯಸ್ಸಿನ ತನಗೆ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಅಥ್ಲೆಟಿಕ್ ಕೋಚ್ ಆಗಿರುವ ಮಗ ಟಿ.ಎಸ್. ರವಿ ಓಡುವಂತೆ ಪ್ರೋತ್ಸಾಹ ನೀಡಿ ಅಥ್ಲೆಟಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತೆ ಹುರಿದುಂಬಿಸಿದ್ದೇ ಇಂದು ತಾನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪದಕ ಗಳಿಸುವಂತಾಗಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಭಾಗವಹಿಸಲು ತರಬೇತಿ ನಡೆಸುತ್ತಿ ರುವದಾಗಿ ಕಮಲಮ್ಮ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಪದಾಧಿಕಾರಿ ಬಿ.ಜೆ. ಪರಮೇಶ್ ಮಾತನಾಡಿದರು. ಅಧ್ಯಕ್ಷೆ ಹೇಮಾ, ನಿರ್ದೇಶಕರು, ಮುಖ್ಯ ಶಿಕ್ಷಕಿ ಕವನಾ, ಸಹ ಶಿಕ್ಷಕಿಯರು ಉಪಸ್ಥಿತರಿದ್ದರು.

100ಕ್ಕೂ ಅಧಿಕ ಪೋಷಕರು ಥ್ರೋಬಾಲ್, ಶಾಟ್‍ಪುಟ್, ಹಗ್ಗಜಗ್ಗಾಟ, ವಿಷದ ಚೆಂಡು, ಮಡಿಕೆ ಒಡೆಯುವುದು ಇತ್ಯಾದಿ ಕ್ರೀಡೆಗಳಲ್ಲಿ ಭಾಗವಹಿಸಿದ್ದರು.